Advertisement
ಹುಬ್ಬಳ್ಳಿ: ಜಾತ್ಯತೀತ ಜನತಾದಳ(ಜೆಡಿಎಸ್)ದಲ್ಲಿ ನಾಯಕರ ನಿರ್ಗಮನ ಪರ್ವ ಮುಂದುವರಿದಿದ್ದು, ಉತ್ತರ ಕರ್ನಾಟಕದ ಜೆಡಿಎಸ್ ನಾಯಕ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆಯೇ? ಜೆಡಿಎಸ್ ವರಿಷ್ಠರ ಉದಾಸೀನತೆ, ಕ್ಷೇತ್ರದ ಜನತೆ ಆಶಯ, ಕೋನರಡ್ಡಿಯವರ ನಡೆ ಗಮನಿಸಿದರೆ ಅಂತಹ ಅನುಮಾನ ವ್ಯಕ್ತವಾಗುತ್ತಿದ್ದು, ಪಾಲಿಕೆ ಚುನಾವಣೆ ಸೋಲಿನ ನೆಪದಡಿ ಕೋನರಡ್ಡಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವುದು ಈ ವಿದ್ಯಮಾನಕ್ಕೆ ಇಂಬು ನೀಡತೊಡಗಿದೆ.
ಪಕ್ಷದ ಏರಿಳಿತದ ಅನುಭವ: ಎನ್.ಎಚ್.ಕೋನರಡ್ಡಿ ಯುವಕರಾಗಿದ್ದಾಗಿನಿಂದಲೂ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್‌ರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಜನತಾ ಪರಿವಾರ ಇಬ್ಭಾಗವಾಗಿದ್ದಾಗ ಜೆಡಿಯು ನಂತರ ಜೆಡಿಎಸ್‌ನಲ್ಲಿ ಮುಂದುವರಿದರು. ಹಲವು ವರ್ಷಗಳಿಂದ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೋರಾಟ ಮನೋಭಾವದ ಕೋನರಡ್ಡಿ ನವಲಗುಂದ ಶಾಸಕರಾದ ನಂತರ ಸದನದಲ್ಲಿ ವಿಶೇಷವಾಗಿ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ, ಉತ್ತರ ಕರ್ನಾಟಕದ ವಿವಿಧ ವಿಷಯಗಳು, ರೈತರ ಸಮಸ್ಯೆಗಳ ಮೂಲಕ ಗಮನ ಸೆಳೆಯುವ ರೀತಿಯಲ್ಲಿ ಧ್ವನಿ ಎತ್ತಿದ್ದರು. ಒಬ್ಬಂಟಿಯಾದರೂ ಸರಿ ಧರಣಿ ನಡೆಸುವ ಗತ್ತು ತೋರಿದವರು. ಜೆಡಿಎಸ್ ಕೋನರಡ್ಡಿ ಅವರಿಗೆ ಸಿಹಿ-ಕಹಿಯ ಕೊಡುಗೆ ನೀಡಿದೆ ಎಂದರೂ ತಪ್ಪಾಗಲಾರದು. ಕೋನರಡ್ಡಿ ಶಾಸಕರಾಗಿದ್ದು ಜೆಡಿಎಸ್ ಪಕ್ಷದಿಂದ, ಜತೆಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯ ದರ್ಶಿಯಾದರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸವಿಯುಂಡಿದ್ದರು. ಜತೆಗೆ ಎರಡ್ಮೂರು ಬಾರಿ ವಿಧಾನಪರಿಷತ್ತಿಗೆ ಆಯ್ಕೆ ವಿಚಾರ ಬಂದಾಗ ಕೋನರಡ್ಡಿ ಯವರ ಹೆಸರು ಮುನ್ನೆಲೆಗೆ ಬಂದಿತ್ತಲ್ಲದೆ, ಇನ್ನೇನು ನಾಮಪತ್ರ ಸಲ್ಲಿಕೆಯಾಗಬೇಕು ಎಂಬು ಕೊನೆ ಗಳಿಗೆಯಲ್ಲಿ ಸ್ಥಾನ ಕೈ ತಪ್ಪಿದ ಕಹಿಯೂ ಅನುಭವಿಸುವಂತಾಗಿತ್ತು. ವಿಧಾನಪರಿಷತ್ತಿಗೆ ಆಯ್ಕೆ ವಿಚಾರವಾಗಿ ಒಮ್ಮೆ ಪಕ್ಷ ನಿರ್ಧರಿಸಿದ ಅಭ್ಯರ್ಥಿ ಬೆಂಗಳೂರಿನಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ನಾಮಪತ್ರ ಸಲ್ಲಿಕೆ ಸಮಯ ಮೀರುತ್ತ ಬಂದಾಗ, ತರಾತುರಿಯಲ್ಲಿ ನಾಮಪತ್ರ ಸಲ್ಲಿಸಲು ಸೂಚಿಸಿದಾಗ ಕೋನರಡ್ಡಿ ಇನ್ನೇನು ನಾಮಪತ್ರ ಸಲ್ಲಿಕೆಗೆ ಸಿದ್ಧರಾಗಿ ದಾಖಲೆಗಳ ಸಲ್ಲಿಕೆಗೆ ಮುಂದಾಗಿದ್ದರು. ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ನಿರ್ಧಾರಿತ ಅಭ್ಯರ್ಥಿ ಆಗಮಿಸಿ ದ್ದರಿಂದ ಕೋನರಡ್ಡಿ ಹಿಂದೆ ಸರಿಯ ಬೇಕಾಗಿತ್ತು.
Related Articles
Advertisement