Advertisement

ಸಚಿವ ಸ್ಥಾನಕ್ಕೆ ಎಚ್‌.ಕೆ.ಪಾಟೀಲ ಪಟ್ಟು; ಸ್ಪೀಕರ್‌ ಸ್ಥಾನ ನಯವಾಗಿ ನಿರಾಕರಿಸಿದ

03:30 PM May 21, 2023 | Team Udayavani |

ಗದಗ: ಸುದಿಧೀರ್ಘ‌ 40 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಪಾಟೀಲ ಅವರು ಸ್ಪೀಕರ್‌ ಸ್ಥಾನವನ್ನು ನಯವಾಗಿ ನಿರಾಕರಿಸಿದ್ದು, ಪಕ್ಷದ ಹೈಕಮಾಂಡ್‌ ಎದುರು ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

Advertisement

ಗದಗ ಮತಕ್ಷೇತ್ರದ ಶಾಸಕ ಎಚ್‌. ಕೆ. ಪಾಟೀಲ ಅವರು ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದು, ಅವರಿಗೆ ಸಚಿವ ಸ್ಥಾನ ಖಾಯಂ ಎನ್ನಲಾಗಿತ್ತು. ಅಲ್ಲದೇ, ಮೊದಲ ಸಚಿವ ಸಂಪುಟದಲ್ಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಕೊನೆಯ ಕ್ಷಣದಲ್ಲಿ 8 ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಮಧ್ಯೆ ಎಚ್‌.ಕೆ. ಪಾಟೀಲ ಅವರಿಗೆ ಸ್ಪೀಕರ್‌ ಸ್ಥಾನ ನೀಡಲು ಹೈಕಮಾಂಡ್‌ ಒಲವು ತೋರಿದೆ ಎನ್ನಲಾಗಿದ್ದು, ಅದನ್ನು ಅಷ್ಟೇ ನಯವಾಗಿ ತಿರಸ್ಕರಿಸುವ ಮೂಲಕ ತಾವೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎನ್ನುವ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

1984ರಿಂದ 2008ರ ವರೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸತತ ನಾಲ್ಕು ಅವಧಿಯವರೆಗೆ ವಿಧಾನ ಪರಿಷತ್‌
ಸದಸ್ಯರಾಗಿ, ನಂತರ ಗದಗ ವಿಧಾನಸಭೆ ಮತಕ್ಷೇತ್ರದಿಂದ 2013, 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಎಚ್‌.ಕೆ. ಪಾಟೀಲ ಅವರು ಸು ದೀರ್ಘ‌ 40 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ.

ಜವಳಿ ಖಾತೆ, ಜಲಸಂಪನ್ಮೂಲ, ಕೃಷಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರು, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ, ಎಐಸಿಸಿ ಮಹಾರಾಷ್ಟ್ರ ರಾಜ್ಯ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಎಚ್‌.ಕೆ. ಪಾಟೀಲ ಅವರದ್ದಾಗಿದೆ.

Advertisement

ಸಚಿವರಾಗಿ ಹಲವು ಮಹತ್ವದ ಸಾಧನೆ:
ಹೊಸತನದ ಹರಿಕಾರ ಎಂದೇ ಪ್ರಸಿದ್ಧರಾಗಿರುವ ಎಚ್‌.ಕೆ. ಪಾಟೀಲ ಅವರು ವಿಶಿಷ್ಟ ಕಲ್ಪನೆ, ವಿನೂತನ ಯೋಜನೆ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೇ, ತಮಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ಎದುರಿಸಿ ಆ ಖಾತೆಗೆ ಚೈತನ್ಯ ತುಂಬುವ ಕೆಲಸ ಮಾಡುವ ಮೂಲಕ ತಾವು ಸಮರ್ಥರು ಎಂಬುದನ್ನು ಹಲವಾರು ಬಾರಿ ನಿರೂಪಿಸಿದ್ದಾರೆ.

ಎಚ್‌.ಕೆ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ನೀರಾವರಿ ಕ್ಷೇತ್ರವನ್ನು ವಿಸ್ತರಿಸುವುದರ ಜೊತೆ ಜೊತೆಗೆ ಬರಗಾಲದಂತಹ ಸಂದರ್ಭದಲ್ಲಿ ಮೋಡ ಬಿತ್ತನೆಯ ವಿನೂತನ ಪ್ರಯತ್ನದ ಮುಂದಾಳತ್ವ ವಹಿಸುವ ಮೂಲಕ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದರು. ಅಲ್ಲದೇ, ಒಬ್ಬ ಗ್ರಾಮೀಣ ವ್ಯಕ್ತಿಯೂ ಕೂಡ ಪ್ರಧಾನಿಯಾದವರು ಕುಡಿಯುವ ನೀರನ್ನು ಕುಡಿಯಬೇಕು ಎಂಬ ಪರಿಕಲ್ಪನೆ ಹೊತ್ತು
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯುವ ಮೂಲಕ ಶುದ್ಧ ಕುಡಿಯುವ ನೀರಿನ ಸರದಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಸಂದರ್ಭದಲ್ಲಿ ಇಡೀ ದೇಶದಲ್ಲೇ ಮೊಟ್ಟ ಮೊದಲ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ವ್ಯಾಖ್ಯಾನ ಬರೆದಿದ್ದರು.

ಅಲ್ಲದೇ, ಸ್ವತ್ಛ ಭಾರತ ಅಭಿಯಾನ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಹೀಗೆ ಹತ್ತು ಹಲವು ವಿಶೇಷತೆಗಳಿಗೆ 2014-15ರಿಂದ 2017-18ರ ವರೆಗೆ ಸತತ 4 ವರ್ಷಗಳ ಕಾಲ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾದ ದಾಖಲೆ ಅವರ ಹೆಸರಿನಲ್ಲಿದೆ.

ಅಭಿವೃದ್ಧಿಯ ಹರಕಾರರೆಂದೇ ಪ್ರಸಿದ್ಧರಾಗಿರುವ ಎಚ್‌.ಕೆ. ಪಾಟೀಲ ಅವರು ಈವರೆಗೆ ತಮಗೆ ಕೊಟ್ಟ ಖಾತೆಯನ್ನು
ಸಮರ್ಥವಾಗಿ ನಿಭಾಯಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಆದ್ದರಿಂದ, ಅವರಿಗೆ ಸಚಿವ ಸ್ಥಾನ ನೀಡಿ ಅಭಿವೃದ್ಧಿಯ ಮನ್ವಂಥರಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಬೇಕು ಎನ್ನುವುದು ಗದಗ ಜಿಲ್ಲೆಯ ಸಮಸ್ತ ನಾಗರಿಕರ
ಒತ್ತಾಸೆಯಾಗಿದೆ.
-ಸಿದ್ಧಲಿಂಗೇಶ್ವರ ಪಾಟೀಲ
ಮಾಜಿ ಅಧ್ಯಕ್ಷರು, ಜಿಪಂ, ಗದಗ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next