Advertisement

‘ಹನಿಟ್ರ್ಯಾಪ್‌’ಸ್ವರೂಪ ಪಡೆದುಕೊಳ್ಳುತ್ತಿರುವ ಪ್ರಕರಣ ಷಡ್ಯಂತ್ರದಂತೆ ಕಾಣುತ್ತಿದೆ: HDK

04:06 PM Mar 27, 2021 | Team Udayavani |

ಬೆಂಗಳೂರು: ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ ‘ಹನಿಟ್ರ್ಯಾಪ್‌’ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ರಾಜ್ಯ ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾತ್ರಿ ಒಂದು ಆಡಿಯೊ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವಿಡಿಯೊ ಬಿಡುಗಡೆಯಾಗುವುದು. ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಲಿದೆ ಎಂದಿದ್ದಾರೆ.

ಇದನ್ನೂ ಓದಿ:ಶವಸಂಸ್ಕಾರಕ್ಕೆ ತೆರಳುತ್ತಿದ್ದವರ ಟ್ರ್ಯಾಕ್ಟರ್ ಟೈರ್ ಸ್ಫೋಟ: ಮಹಿಳೆ ಸಾವು, 15 ಜನರಿಗೆ ಗಾಯ

ಪ್ರಕರಣವನ್ನು ಅದರಪಾಡಿಗೆ ಬಿಟ್ಟು, ಆಗುವ ಬೆಳವಣಿಗೆಯನ್ನು ರಾಷ್ಟ್ರ ನೋಡಿ ಮನರಂಜನೆ ಪಡೆಯುವಂತೆ ಮಾಡುವುದು ರಾಜ್ಯಕ್ಕೆ, ನಮ್ಮ ಪೊಲೀಸರಿಗೆ ಮಾಡುವ ಅತಿ ದೊಡ್ಡ ಅಪಮಾನವಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯುವುದು ಅತ್ಯಗತ್ಯ. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು ಎಂದು ಎಚ್ ಡಿಕೆ ಆಗ್ರಹಿಸಿದರು.

ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್‌ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನು ಲೆಕ್ಕಿಸದೇ ಅಸಲಿ ಸಂಗತಿಯನ್ನು ಪೊಲೀಸರು ಹೊರತರಬೇಕು. ರಾಜ್ಯದ ಪೊಲೀಸರ ಕರ್ತವ್ಯ ನಿಷ್ಠೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರಿದೆ. ಅದರ ಪ್ರದರ್ಶನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದಿದ್ದಾರೆ.

Advertisement

ಇದನ್ನೂ ಓದಿ:ಯುವತಿ ನನ್ನ ಭೇಟಿಗೆ ಯತ್ನಿಸಿರಬಹುದು, ಆದರೆ ನಾನು ಭೇಟಿ ಮಾಡಿಲ್ಲ: ಡಿ.ಕೆ. ಶಿವಕುಮಾರ್

ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ, ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಅಂತ್ಯ ಹಾಡಬೇಕಿದ್ದರೆ ಸೂಕ್ತ ತನಿಖೆಯೊಂದೇ ದಾರಿ. ಇಲ್ಲವಾದರೆ, ಈ ಪ್ರಕರಣದ ಬೆಳವಣಿಗೆಗಳು ಮತ್ತಷ್ಟು ವಿಸ್ತಾರವಾಗುತ್ತ ನಾಗರಿಕ ಸಮಾಜ ನಾಚಿಕೆಯಲ್ಲಿ ದಿನ ಕಳೆಯಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next