ಬೆಂಗಳೂರು: ಹಿಂದಿ ಭಾಷೆ ಮಾತನಾಡಲು ಬಾರದು ಎಂಬ ಕಾರಣಕ್ಕೆ ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ಚೆನ್ನೈ ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿದ್ದು, ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹಿಂದಿ ಹೇರಿಕೆಯ ವಿರುದ್ಧ ಕಿಡಿಕಾರಿದ್ದು, ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಿತ್ತುಕೊಂಡಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾಷೆ ಕಾರಣಕ್ಕೆ ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ ಎಂದಿದ್ದಾರೆ.
ಹಿಂದಿ ರಾಜಕಾರಣವು ದಕ್ಷಿಣ ಭಾರತದ ಹಲವು ನಾಯಕರ ಪ್ರಧಾನಿಯಾಗುವ ಅವಕಾಶ ಕಸಿದಿದೆ. ಅದರಲ್ಲಿ ಎಚ್ ಡಿ ದೇವೇಗೌಡ, ಕರುಣಾನಿಧಿ, ಕಾಮರಾಜರ ಹೆಸರುಗಳು ಪ್ರಧಾನ. ಈ ವ್ಯೂಹವನ್ನು ದೇವೇಗೌಡರು ಭೇದಿಸಿ ಅತ್ಯುನ್ನತ ಪಟ್ಟ ಅಲಂಕರಿಸಿದರಾದರೂ, ಭಾಷೆ ವಿಚಾರಕ್ಕೆ ಅವರನ್ನು ಮೂದಲಿಸಿದ, ಗೇಲಿ ಮಾಡಿದ, ಕನ್ನಡತನ ಪ್ರಶ್ನಿಸಿದ ಪ್ರಸಂಗಗಳು ಆಗಿ ಹೋಗಿವೆ. ಭಾರತದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರಿಂದ ಅಂದು ಕೆಂಪು ಕೋಟೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಿಸುವಲ್ಲಿ ‘ಹಿಂದಿ ರಾಜಕಾರಣ’ಯಶಸ್ವಿಯಾಗಿತ್ತು. ಬಿಹಾರ ಮತ್ತು ಉತ್ತರ ಪ್ರದೇಶದ ಬಹುದೊಡ್ಡ ರೈತ ಸಮುದಾಯದ ದೃಷ್ಟಿಯಿಂದ ಅಂದು ದೇವೇಗೌಡರು ಹಿಂದಿಯಲ್ಲೇ ಮಾತನಾಡಿದರು. ಅಷ್ಟರ ಮಟ್ಟಿಗೆ ಈ ದೇಶದಲ್ಲಿ ಹಿಂದಿ ರಾಜಕಾರಣ ಕೆಲಸ ಮಾಡುತ್ತದೆ ಎಂದು ಎಚ್ ಡಿಕೆ ಕಿಡಿಕಾರಿದ್ದಾರೆ.
ಇಂಥದ್ದೇ ಅನುಭವ ನನಗೂ ಆಗಿವೆ. ನಾನೂ ಎರಡು ಬಾರಿ ಸಂಸದನಾಗಿದ್ದವನು. ಸಂಸತ್‌ನಲ್ಲಿ ಕನ್ನಡದಲ್ಲಿ ಮಾಡಲಾಗುವ ಭಾಷಣಗಳ ಬಗ್ಗೆ ಆಳುವ ವರ್ಗ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಅಲ್ಲದೆ, ಹಿಂದಿ ವ್ಯಾಮೋಹಿ ರಾಜಕಾರಣಿಗಳ ವರಸೆಗಳನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳೆಂದರೆ ಬಹುತೇಕರಿಗೆ ಅಲ್ಲಿ ಅಪತ್ಯವೇ ಸರಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜಕಾರಣ ಹೊರತುಪಡಿಸಿ ಔದ್ಯೋಗಿಕ ಕ್ಷೇತ್ರಕ್ಕೆ ಬಂದರೆ, ಕೇಂದ್ರ ಸರ್ಕಾರದ ಕೆಲ ಹುದ್ದೆಗಳ ಪರೀಕ್ಷೆಗಳನ್ನು ಇಂಗ್ಲಿಷ್–ಹಿಂದಿಯಲ್ಲೇ ಬರೆಯಬೇಕಿದೆ. ಅದರಲ್ಲಿ ಬ್ಯಾಂಕಿಂಗ್ ಪರೀಕ್ಷೆಯೂ ಕೂಡ ಒಂದು. ಈ ಬಾರಿಯ ಅಧಿಸೂಚನೆಯಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಹೀಗಾಗಿ ಕನ್ನಡದ ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದು ನಿಲ್ಲಬೇಕು. ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಕೇಂದ್ರ ಸರ್ಕಾರ ಬಾಯಿ ಮಾತಿಗಷ್ಟೇ ಹೇಳುತ್ತದೆ. ಆದರೆ, ಹಿಂದಿ ಅಭಿವೃದ್ಧಿಗಾಗಿ ದೇಶ, ವಿದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಕೋಟ್ಯಂತರ ಮೊತ್ತ ವಿನಿಯೋಗಿಸುತ್ತದೆ. ಇದು ರಹಸ್ಯ ಕಾರ್ಯಸೂಚಿಗಳಲ್ಲೊಂದು. ಪ್ರಾಮಾಣಿಕ ಭಾಷಾಭಿಮಾನದಿಂದ ಮಾತ್ರ ಇವುಗಳನ್ನು ಮೆಟ್ಟಿಸಲು ಸಾಧ್ಯ ಎಂದು ಎಚ್ ಡಿಕೆ ಅಭಿಪ್ರಾಯಪಟ್ಟಿದ್ದಾರೆ.