Advertisement

ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರವಿರಲಿ: ಕುಮಾರಸ್ವಾಮಿ

11:09 AM Apr 10, 2022 | Team Udayavani |

ಬೆಂಗಳೂರು: ನಾಡಿನ ಸಮಸ್ತ ಜನತೆಯಲ್ಲಿ ನನ್ನ ವಿನಮ್ರ ಮನವಿ. ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ; ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರ ಇಲ್ಲ, ಅದಕ್ಕೆ ನನ್ನದೂ ಬೆಂಬಲ ಇದೆ. ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಬೇಡ. ಇದರಿಂದ ಶಾಂತಿ ಕದಡುತ್ತದೆ. ಹೀಗೆ ಆಗುವುದು ಬೇಡ ಎಂದಿದ್ದಾರೆ.

ಇದನ್ನೂ ಓದಿ:ಸಾಗರದಾಚೆ ಸಹಸ್ರ ರಾಮ : ವಿವಿಧ ದೇಶಗಳ ಕನ್ನಡಿಯೊಳಗೆ ಶ್ರೀರಾಮ

ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶವನ್ನೂ ಕೊಡಬಾರದು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ನನ್ನ ಮನವಿ. ಶೋಭಾಯಾತ್ರೆಯನ್ನು ಹಿಂದುಗಳು ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಿ, ಅಲ್ಲೆಲ್ಲ ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಇದಕ್ಕೆ ನನ್ನ ಬೆಂಬಲವಿದೆ. ಎಲ್ಲರೂ ರಾಮಸ್ಮರಣೆ ಮಾಡೋಣ, ಪ್ರತಿಯೊಬ್ಬರ ಹೃದಯದಲ್ಲಿ ಆ ರಾಮನು ಚಿರಸ್ಥಾಯಿಯಾಗಿ ನಿಲ್ಲಬೇಕು ಎನ್ನುವುದೇ ನನ್ನ ಆಶಯ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next