ಮಳವಳ್ಳಿ: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಸವ ತತ್ವಗಳನ್ನು ಪಾಲನೆ ಮಾಡಲು ಮುಂದಾಗಬೇಕು. ಈಗ ನಿರ್ಮಾಣವಾಗಲಿರುವ ಬಸವ ಭವನಕ್ಕೆ ಮುಂದಿನ ಮುಖ್ಯಮಂತ್ರಿಯಾಗಿ ಅನುದಾನ ನೀಡುವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಉಪ್ಪನಹಳ್ಳಿ(ಕನ್ನಹಳ್ಳಿ)-ಮೂಗನಕೊಪ್ಪಲು ಬಳಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಬಸವ ಭವನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವ ಭವನಕ್ಕೆ ಶಾಸಕ ಡಾ.ಕೆ.ಅನ್ನದಾನಿ 45 ಲಕ್ಷ ರೂ. ಅನುದಾನ ನೀಡಿದ್ದಾರೆ. ಆದರೆ 3.5 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭವಾಗುವ ವೇಳೆಗೆ ಚುನಾವಣೆ ಬರುತ್ತದೆ. ಮುಂದಿನ ಸರ್ಕಾರದಲ್ಲಿ ನಾನೇ ಮುಖ್ಯಮಂತ್ರಿಯಾಗುವೆ. ಆಗ 1 ಕೋಟಿ ರೂ. ಅನುದಾನ ನೀಡುವೆ. ರಾಜ್ಯಸಭಾ ಸದಸ್ಯರಾದ ಎಚ್.ಡಿ.ದೇವೇಗೌಡರ ಅನುದಾನದಲ್ಲಿ 25 ಲಕ್ಷ ರೂ. ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಮತದಾರರ ಪಟ್ಟಿ ದುರ್ಬಳಕೆ ಆರೋಪದ ಬಗ್ಗೆ ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಬಿಜೆಪಿ ಸರ್ಕಾರ ಅಧಿ ಕಾರ ದುರುಪಯೋಗ ಮಾಡಿಕೊಂಡಿದ್ದರೆ ಕಾಂಗ್ರೆಸ್‌ನವರು ಮುಖ್ಯಮಂತ್ರಿ ರಾಜೀನಾಮೆ ಕೇಳುವುದರಲ್ಲಿ ತಪ್ಪಿಲ್ಲ. ಸರ್ಕಾರ ತಪ್ಪು ಮಾಡಿಲ್ಲ ಅಂದರೆ ವಾಸ್ತವಾಂಶವನ್ನು ಜನರಿಗೆ ತಿಳಿಸಲಿ. ಅದನ್ನು ಬಿಟ್ಟು ಟಾರ್ಗೆಟ್ ಮಾಡುತ್ತಾರೆ ಎನ್ನುವುದು ಸರಿಯಲ್ಲ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ