ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ‘ಮಿಣಿ ಮಿಣಿ’ ಹೇಳಿಕೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಬಿಜೆಪಿಯ ಮೇಲೆ ಮತ್ತೆ ಹರಿಹಾಯ್ದಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ ಗ್ರಾಮೀಣ ಪದ ಎಂದಿದ್ದಾರೆ.
ಟ್ರೋಲ್ ಗಳ ಬಗ್ಗೆ ಕಿಡಿಕಾರಿರುವ ಅವರು, ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ ಎಂದಿದ್ದಾರೆ.