Advertisement

ಕಾವೇರಿ ತಾಯಿ ಮುಂದೆ ನಿಂತು ನಾಟಕ: ಡಿಕೆಶಿ ವಿರುದ್ಧ ಹೆಚ್ ಡಿಕೆ ತೀವ್ರ ವಾಗ್ದಾಳಿ

07:40 PM Dec 27, 2021 | Team Udayavani |

ಬಿಡದಿ: ಪಂಚೆ ಕಟ್ಟಿದವರು ರೈತರು ಅಲ್ಲ ಎಂದಾದ ಮೇಲೆ ಪವಿತ್ರವಾದ ಕಾವೇರಿ ತಾಯಿ ಮುಂದೆ ನಿಂತು ನಾಟಕ ಮಾಡುವವರನ್ನು ಮಣ್ಣಿನ ಮಕ್ಕಳು ಎಂದು ಕರೆಯಬೇಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೋಮವಾರ ತೀವ್ರ ಟೀಕಾ ಪ್ರಹಾರ ನಡೆಸಿದರು.

Advertisement

ಬಿಡದಿಯಲ್ಲಿ ಇಂದು ಪುರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ನಾವೇನು ಮಣ್ಣಿನ ಮಕ್ಕಳು ಎಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ನಮಗೆ ನಾಟಕ ಮಾಡಲು ಬರುವುದೂ ಇಲ್ಲ ಹಾಗೂ ಅದರ ಅಗತ್ಯ ನನಗಿಲ್ಲ ಎಂದು ಅವರು ಖಾರವಾಗಿ ಹೇಳಿದರು.

ಎಲ್ಲಿಯೂ ಡಿಕೆಶಿ ಹೆಸರು ಬಳಸದೇ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು; ಈ ರಾಜ್ಯಕ್ಕೆ ಗೊತ್ತಿದೆ, ಕುಮಾರಸ್ವಾಮಿ ಕೊಡುಗೆ ಏನೆಂದು. ನೀರಾವರಿ ವಿಚಾರವಾಗಿ ದೇವೇಗೌಡರ ಕೊಡುಗೆ ಏನೆಂದು ಗೊತ್ತಿದೆ. ಮೊನ್ನೆ ಹಾಸನದಲ್ಲಿ ಅವರು ಹೇಳಿದ್ದಾರೆ, ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳಾ? ನಾವು ಪಂಚೆ ಹಾಕಿದ್ದೇವೆ ನಾವು ರೈತರು ಎಂದಿದ್ದಾರೆ. ಅವರು ಆ ರೀತಿ ಹೇಳಿರುವುದು ರೈತರ ಕುರಿತ ಅವರ ಭಾವನೆಗಳೇನು ಎನ್ನುವುದು ಅರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ಚಾಟಿ ಬೀಸಿದರು.

ರೈತರ ಮಕ್ಕಳು ಎಂದು ನಾವು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ಜನರೇ ಅವರವರ ಕೆಲಸ ನೋಡಿ ಬಿರುದು ಕೊಡುತ್ತಾರೆ.ಪಂಚೆ ಹಾಕಿಕೊಂಡು ಶೋ ಮಾಡಿದವರೆಲ್ಲ ರೈತರಾಗಲ್ಲ ಎಂದು ಅವರು ನೇರವಾಗಿ ಚುಚ್ಚಿದರು.

ತಲಕಾವೇರಿಯಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಎಲ್ಲರನ್ನೂ ದೂರ ಕಳುಹಿಸಿ ಕಾವೇರಿ ನೀರಿಗೆ ಅಕ್ಷತೆ ಹಾಕೋದನ್ನು ಈ ರಾಜ್ಯದ ಜನ ಕಣ್ತುಂಬಿಕೊಂಡಿದ್ದಾರೆ. ಹಾಗೆಯೇ, ಮೆಟ್ಟಲಿಗೆ ನಮಸ್ಕಾರ ಮಾಡಿಕೊಂಡಿದನ್ನು ಕೂಡ ನೋಡಿದ್ದೇನೆ. ಅವರು ನರೇಂದ್ರ ಮೋದಿಯವರನ್ನು ಕಾಪಿ ಮಾಡಿದ್ದಾರೆ. ಇಂಥ ಆರ್ಟಿಫಿಷಿಯಲ್ ಹೋರಾಟಗಳು ನಡೆಯಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

Advertisement

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಹೋರಾಟ ನೋಡಿಲ್ವ ನಾವು. ಕೃಷ್ಣೆಯ ನೀರನ್ನು ಇವರು ಹೇಗೆ ಉಳಿಸಿದರು ಅನ್ನೋದನ್ನು ನೋಡಿದ್ದೇವೆ, ಐದು ವರ್ಷದಲ್ಲಿ. ಈಗ ಮೇಕೆದಾಟು ಹೋರಾಟ ಮಾಡ್ತಿದ್ದಾರೆ, ಪಾದಯಾತ್ರೆ ಮೂಲಕ ಮತಯಾತ್ರೆ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಪಾದಯಾತ್ರೆಗೆ ಕರೆಯುತ್ತಿದ್ದಾರೆ. ಶಕ್ತಿ ಇದ್ದರೆ ಹೋಗಿ ದೆಹಲಿಯಲ್ಲಿ ಉಪವಾಸ ಕುಳಿತುಕೊಳ್ಳಿ. ಕೇಂದ್ರ ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡಿ ಎಂದು ಕಾಂಗ್ರೆಸ್ ಕಿವಿ ಹಿಂಡಿದರು.

ಕಾಂಗ್ರೆಸ್ ಪಕ್ಷ ಜನರನ್ನು ಪರಿವರ್ತನೆ ಮಾಡುವ ಸಲುವಾಗಿ ಹೋರಾಟ ಮಾಡುತ್ತಿಲ್ಲ. ಇದು ಕೇವಲ ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ. ಜನರನ್ನು ಯಾಮರಿಸಲು ಎಲ್ಲಾ ಸಂದರ್ಭದಲ್ಲಿಯೂ ಆಗುವುದಿಲ್ಲ. ಅದಕ್ಕೆ ಮೂಲ ಉದ್ದೇಶ ಉತ್ತಮವಾಗಿ ಇರಬೇಕು‌ ಎಂದು ಅವರು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next