Advertisement

ಚುನಾವಣಾ ವರ್ಷದಲ್ಲಿ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: BJP ವಿರುದ್ಧ ಎಚ್ ಡಿಕೆ ಕಿಡಿ

09:28 AM Jul 30, 2022 | Team Udayavani |

ಬೆಂಗಳೂರು: ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ಬಿಜೆಪಿ ಸರಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್ಐಎ ತನಿಖೆಗೆ ವಹಿಸಲು ಯಾಕೆ ಹಿಂಜರಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ʼಡಬಲ್ ಎಂಜಿನ್ ಸರಕಾರ ಡಬಲ್ ಗೇಮ್ʼ ಆಡುತ್ತಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ ಪಕ್ಷ, ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ! ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ “ಶಾಂತಿ ಕಾಪಾಡಿ” ಎನ್ನುವ ಮಾತು ಬಂತಾ? ಬರಲಿಲ್ಲ! ನೆಮ್ಮದಿಗಾಗಿ ಕಿಂಚಿತ್ ಕ್ರಮ ವಹಿಸಿದಿರಾ? ಅದೂ ಇಲ್ಲ. ಹಿಂಸೆಗೆ ಇನ್ನಷ್ಟು ತುಪ್ಪಾ ಸುರಿದು ಬಂದರು ಎಂದು ಕಿಡಿಕಾರಿದ್ದಾರೆ.

ಎನ್ಐಎ ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. ಎನ್ಐಎ ಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು? ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ. ಇದು ವಿಪರ್ಯಾಸ. ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. ಬಿಜೆಪಿ ಸರಕಾರಕ್ಕೆ ಅದು ಬೇಕಿಲ್ಲ. ಸಮರ್ಥ ಅಧಿಕಾರಿಗಳನ್ನು ನಂಬದೆ ಎನ್ ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ʼಸಮಾಧಿʼ ಕಟ್ಟಲು ಹೊರಟಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಮನೆಯೊಳಗೆ ನುಗ್ಗಿದ ನೆರೆ ನೀರು.. ಮೂರು ಗಂಟೆ ಸತತ ಮಳೆಗೆ ತತ್ತರಿಸಿದ ಮಂಗಳೂರು

ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷದಲ್ಲಿ ಕೊಲೆಗಳೇ ಹೆಚ್ಚೆಚ್ಚು ಆಗಬೇಕು, ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ! ಬೆಳ್ಳಾರೆ ಬೇಗೆ ಇಡೀ ಕರಾವಳಿಯನ್ನು ವ್ಯಾಪಿಸಿದೆ. ಆದರೆ, ಜೀವ ಭಯದಲ್ಲಿರುವ ಎರಡು ಕೋಮುಗಳ ಜನರು ನೆಮ್ಮದಿಯಿಂದ ಬದುಕಲು ಏನು ಮಾಡಿದ್ದೀರಿ ಬೊಮ್ಮಾಯಿ ಅವರೇ? ಅವರ ಜೀವಕ್ಕೆ ಏನು ಖಾತರಿ ಕೊಟ್ಟಿದ್ದೀರಿ? ಪ್ರತಿ ಕೊಲೆ ಆದಾಗಲೂ ಈ ಕೊಲೆಪಾತಕ ರಾಜಕಾರಣ ನಮ್ಮ ಕುಟುಂಬಕ್ಕೇ ಕೊನೆಯಾಗಲಿ ಎನ್ನುವ ತಾಯಂದಿರ ಆರ್ತನಾದಕ್ಕೆ ನಿಮ್ಮ ಉತ್ತರವೇನು ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

Advertisement

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಸರ್ವಶನಾಶ ಮಾಡಿದ್ದೀರಿ.  ಹಿಂಸೆಯ ಎಂಬ ವಿಷಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೇ ಬಲಿ ಆಗುವುದು ಖಚಿತ. ಕಾರ್ಯಕರ್ತರ ನೆತ್ತರಿನ ಮೇಲಿನ ಅಧಿಕಾರದ ಸುಖಕ್ಕೆ ಅದೇ ಕಾರ್ಯಕರ್ತರ ಆಕ್ರೋಶವೇ ಚರಮಗೀತೆ ಬರೆಯಲಿದೆ. ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ ಎಂದು ಎಚ್ ಡಿಕೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next