ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಇತ್ತೀಚೆಗೆ ನಡೆದ ಘಟನೆಗಳೆ ಧರ್ಮೇಗೌಡರ ಸಾವಿಗೆ ಕಾರಣ. ಕೊಲೆ ಮಾಡಿದಂತಹ ರಾಜಕೀಯ ವ್ಯವಸ್ಥೆಯಿದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಘಟನೆಗಳಿಗೆ ಸಂಬಂಧಿಸಿ ನೀನು ಮಾಡಿದ್ದು ತಪ್ಪಲ್ಲ, ಧೈರ್ಯದಿಂದಿರು. ಜೀವನದಲ್ಲಿ ಇಂತಹ ಸನ್ನಿವೇಶ ಎದುರಿಸಬೇಕಾಗುತ್ತದೆ ಎಂದು ನಾನು, ದೇವೇಗೌಡ್ರು ಹೇಳಿದ್ದೆವು. ಏನೇ ತೀರ್ಮಾನ ಮಾಡಬೇಕಾದರೂ ಕಾನೂನು ವಿರುದ್ಧದ ಒತ್ತಡಗಳಿಗೆ ಮಣಿಯಬೇಡ ಎಂದು ದೇವೇಗೌಡರು ಹೇಳಿದ್ದರು ಎಂದರು.
ಅಲ್ಲಿ ನಡೆದಿರುವ ಸತ್ಯ ಘಟನೆಗಳನ್ನು ಹೇಳಿದರೆ ಕೆಲವರಿಗೆ ನೋವಾಗುತ್ತದೆ. ನಿಮ್ಮ ನಿಮ್ಮ ಆತ್ಮಕ್ಕೆ ಅವಲೋಕನ ಮಾಡಿಕೊಳ್ಳಿ. ಕೌನ್ಸಿಲ್ ಸೆಕ್ರೆಟರಿ ಮಹಾಲಕ್ಷ್ಮಿ ಎಂಬಾಕೆಗೆ ಸಭಾಪತಿ ಕೊಟ್ಟ ನೋಟಿಸ್ ಗೆ ಉತ್ತರ ಕೊಡಲುಸಾಧ್ಯವಾಗದೆ ಒಂದುವರೆ ಪುಟಗಳ ವರದಿಯನ್ನು ಕೊಟ್ಟಿದ್ದಾರೆ. ಧರ್ಮೇಗೌಡರ ವಿರುದ್ದ ಚಾರ್ಜ್ ಮಾಡಲು ನೋಟಿಸ್ ನೀಡಿದ್ದರು. ಅಂತಿಮವಾಗಿ ಕೊಲೆ ಮಾಡಿದಂತಹ ರಾಜಕೀಯ ವ್ಯವಸ್ಥೆ ಇದು ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದರು.
ಇದನ್ನೂ ಓದಿ:ಆತ್ಮಹತ್ಯೆಗೆ ಮುನ್ನ ರೈಲು ಬರುವ ಸಮಯದ ಬಗ್ಗೆ ಮಾಹಿತಿ ಪಡೆದಿದ್ದ ಧರ್ಮೇಗೌಡರು!
ಧರ್ಮೇಗೌಡ ನಿಜವಾದ ಧರ್ಮರಾಯ. ಅವರ ತಂದೆ ದೇವರ ಪ್ರೇರಣೆಯಿಂದ ಆ ಹೆಸರಿಟ್ಟಿದ್ದರು. ಇವತ್ತಿನ ರಾಜಕೀಯದ ಧರ್ಮರಾಯನನ್ನು ಕಳೆದುಕೊಂಡಿದ್ದೇನೆ. ಪ್ರತಿಯೊಬ್ಬರೂ ಅವಲೋಕನ ಮಾಡಿಕೊಳ್ಳಬೇಕು. ರಾಜಕೀಯ ಇರುತ್ತದೆ ಹೋಗುತ್ತದೆ. ಯಾರು ಶಾಶ್ವತರಲ್ಲ. ನಮ್ಮ ಜೀವನದಲ್ಲಿ ನಡೆದುಕೊಳ್ಳುವ ಘಟನೆಗಳು ಮುಂದಕ್ಕೆ ಮತ್ತೊಬ್ಬರಿಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.