ಕೊಪ್ಪಳ: ಕಾಂಗ್ರೆಸ್ ಬಜರಂಗ ದಳ ನಿಷೇಧ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಇದು ಪ್ರಣಾಳಿಕೆಯ ವಿಷಯವಾ ? ನಿಷೇಧ ಮಾಡುವುದು ಪರಿಹಾರವಾ ? ಎಂದು ಮಾಜಿ ಸಿಎಂ
ಹೆಚ್.ಡಿ.ಕುಮಾರಸ್ವಾಮಿ ಅವರು ಕೈಗೆ ಪ್ರಶ್ನೆ ಮಾಡಿದರು.
ಕೊಪ್ಪಳದ ಸಿ.ವಿ.ಚಂದ್ರಶೇಖರ ಅವರ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗ ಬಜರಂಗ ದಳ ನಿಷೇಧ ಮಾಡುವ ಮಾತನ್ನಾಡುತ್ತಿದ್ದಾರೆ. ನಿಷೇಧ ಮಾಡುವುದು ಪರಿಹಾರವಾ ? ಸಮಾಜದಲ್ಲಿ ಸುಮಧುರ ವಾತಾವರಣ ತರಬೇಕು. ಸಂಘಟನೆ ಬ್ಯಾನ್ ಮಾಡೋದು ಪರಿಹಾರವಲ್ಲ. ಅಲ್ಲಿ ಯಾರು ತಪ್ಪು ಮಾಡಿದ್ದಾರೆ, ಆ ಮೂಲ ಹಿಡಿಯಬೇಕು. ಬಜರಂಗ ದಳದಲ್ಲಿ ಅಮಾಯಕ ಮಕ್ಕಳ ಉಪಯೋಗ ಮಾಡುತ್ತಾರೆ. ಮಕ್ಕಳಿಗೆ ಭಾವನಾತ್ಮಕ ವಿಷಯ ಮೆದುಳಿಗೆ ತುಂಬುವ ಕೆಲಸ ಮಾಡುತ್ತಾರೆ. ಅಂತಹ ಚಟುವಟಿಕೆ ಕಡಿಮೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಹಿಂದೆ ಇತ್ತಲ್ಲಾ ಆಗ ಏಕೆ ಮಾತನಾಡಲಿಲ್ಲ ? ಎಂದರಲ್ಲದೇ ಅವರು ಯಾವ ರೀತಿ ಅಧಿಕಾರ ಹಿಡಿಯಬೇಕು ಎನ್ನುವ ಮಾತನ್ನಾಡುತ್ತಿದ್ದಾರೆ ಎಂದರು.
ದೇಶದ ರಾಜಕಾರಣದಲ್ಲಿ ಯಾವ ಪಕ್ಷಕ್ಕೆ ತತ್ವ ಸಿದ್ದಾಂತವಿದೆ ? ಯಾವುದಕ್ಕೂ ಇಲ್ಲ. ತತ್ವ ಸಿದ್ದಾಂತ ತಿಳಿಯೋರು ಚರ್ಚೆ ಮಾಡಬೇಕು. ಅವರು ತಮಗೆ ಬೇಕಾದಾಗ ಉಪಯೋಗ ಮಾಡುತ್ತಾರೆ. ಸಿದ್ದರಾಮಯ್ಯ ಅವರು ನಮಗೆ ಗೆದ್ದಿನ ಬಾಲ ಹಿಡಿಯೋರು ಎನ್ನುತ್ತಾರೆ. ಸರಿ, ನಾವಂತೂ ಗೆದ್ದೆತ್ತಿನ ಬಾಲ ಹಿಡಿಯುತ್ತೇವೆ. ನೀವು ಸೋತೆತ್ತಿನ ಬಾಲ ಹಿಡುದು ಬರುತ್ತೀರಿಲ್ಲಾ ನಿಮಗೆ ಏನನ್ನಬೇಕು ಎಂದು ಕುಟುಕಿದರು.
ರಾಜ್ಯದಲ್ಲಿ ನೆರೆ, ಮಳೆ ಹಾನಿಯಾದಾಗ ಮೋದಿ ಬರಲಿಲ್ಲ, ಈಗ ಪದೇ ಪದೇ ರಾಜ್ಯಕ್ಕೆ ಬಂದು ರೋಡ್ ಶೋ ಮಾಡಿ, ಜನರಿಗೆ ಕೈ ಬೀಸಿ ಹೋಗುತ್ತಿದ್ದಾರೆ. ನಿಜವಾದ ಸಮಸ್ಯೆ ರೋಡ್ ಶೋನಲ್ಲಿ ಕಾಣಲ್ಲ. ಜನರ ಮತ್ತು ಅವರ ನಡುವೆ ಸಮಸ್ಯೆ ಅರಿವಿಗೆ ಬರಲ್ಲ. ಉಕ ಭಾಗದಲ್ಲಿ ಹಲವಾರು ಸಮಸ್ಯೆ ಇವೆ. ಸ್ವಾತಂತ್ರ್ಯ ನಂತರವೂ ಕಾಣುತ್ತಿವೆ. ಅವುಗಳ ಬಗ್ಗೆ ಅವರು ಮಾತನಾಡಲ್ಲ. ಈಗ ಮೋದಿ ವರ್ಚಸ್ಸು ಕಡಿಮೆ ಆಗುತ್ತಿದೆ ಎಂದರು.
ಉಕ ಭಾಗದಲ್ಲಿ30-35 ಸ್ಥಾನದಲ್ಲಿ ಜೆಡಿಎಸ್ ಗೆಲ್ಲಲಿದೆ. ದೇವೇಗೌಡರ ಕಾಲದಲ್ಲಿ ಘಟಾನುಘಟಿ ನಾಯಕರು ನಮ್ಮಲ್ಲಿದ್ದರು. ಆಗ ದಳ ಒಡೆಯಿತು, ಈಗ ಜೆಡಿಎಸ್‌ನಲ್ಲಿ ನಾಯಕತ್ವದ ಕೊರತೆ ಸಂಘಟನೆ ಕೊರತೆ ಇದೆ. ಆದರೂ ಈ ಭಾಗದಲ್ಲಿ ಬಾರಿ ಹೆಚ್ಚು ಬಲ ಬಂದಿದೆ. ಬಿಜೆಪಿಯಲ್ಲಿ ಬೊಮ್ಮಾಯಿ ಮುಖ ನೋಡಿ ಜನ ಮತ ಹಾಕಲ್ಲ. ಅದಕ್ಕೆ ಅವರಿಗೆ ಮೋದಿ ಬಿಟ್ಟು ಯಾರೂ ಇಲ್ಲ ಎಂದು ಲೇವಡಿ ಮಾಡಿದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ಸೀಟು ಬರಲ್ಲ. ವರುಣಾದಲ್ಲಿ ಡಮ್ಮಿ ಅಭ್ಯರ್ಥಿ ಹಾಕಿಲ್ಲ ಎಂದರಲ್ಲದೇ, ವಿಜಯಪುರ ಇಬ್ಬರು ಅಭ್ಯರ್ಥಿಗಳಿಗೆ ಅನ್ಯ ಪಕ್ಷಕ್ಕೆ ನಾನೇ ಬೆಂಬಲ ಕೊಡಿ ಎಂದು ಹೇಳಿದ್ದೇನೆ ಎಂದರು.