ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡರು ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗಾಗಿ ವಿಧಾನಸಭೆ ಕಾರ್ಯದರ್ಶಿಯವರ ಕೊಠಡಿಗೆ ತೆರಳಿದ ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ ಸಾಥ್ ನೀಡಿದರು.
ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ವರಿಷ್ಠ ಸ್ಪರ್ಧೆ ಮಾಡುವ ಬಗ್ಗೆ ಎಚ್ ಡಿ ಕುಮಾರಸ್ವಾಮಿಯವರು ಸೋಮವಾರ ಟ್ವೀಟ್ ಮೂಲಕ ಖಚಿತ ಪಡಿಸಿದ್ದರು. ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಒತ್ತಾಯದ ಕಾರಣದಿಂದ ಎಚ್ ಡಿ ದೇವೇ ಗೌಡರು ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಎಚ್ ಡಿಕೆ ಹೇಳಿದ್ದರು.
ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧಿಸುತ್ತಿದ್ದು, ಬಿಜೆಪಿ ಪಕ್ಷವು ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿದೆ.
ನಾಲ್ಕು ಸ್ಥಾನಗಳಿಗೆ ಸದ್ಯ ನಾಲ್ವರೇ ನಾಮಪತ್ರ ಸಲ್ಲಿಸಿರುವ ಕಾರಣ ಅವಿರೋಧ ಆಯ್ಕೆ ಖಚಿತ ಎನ್ನಲಾಗಿದೆ.