ನ್ಯೂಯಾರ್ಕ್: ಕೋವಿಡ್ ವೈರಸ್ ಅಪ್ಪಳಿಸಿದ ಬಳಿಕ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದೀಗ ಹೊಸ ಅಂಕಿಅಂಶ ದೊರೆತಿದ್ದು, 20.5 ಮಿಲಿಯನ್ ನೌಕರಿಗಳಿಗೆ ಹೊಡೆತಬಿದ್ದಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಹೇಳಿದೆ. ಆದರೆ ಇದನ್ನು ಸರಿದೂಗಿಸಲು ಎಚ್- 1ಬಿ ವೀಸಾದ ಮೇಲೆ ಕಡಿವಾಣ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೋವಿಡ್-19 ಲಾಕ್‌ಡೌನ್ ಪರಿಣಾಮ ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಎಚ್ -1ಬಿ ಯಂತಹ ಕೆಲವು ಉದ್ಯೋಗ ಆಧಾರಿತ ವೀಸಾಗಳ ವಿತರಣೆಗೆ ಅಮೆರಿಕ ತಾತ್ಕಾಲಿಕ ನಿಷೇಧ ಹೇರುವ ಸಾಧ್ಯತೆ ಇದೆ.
ಅಮೆರಿಕದಲ್ಲಿರುವ ಕಂಪನಿಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಅವಕಾಶವನ್ನು ಈ ವೀಸಾ ನೀಡುತ್ತದೆ. ಪ್ರಸ್ತುತ ಎಚ್ -1ಬಿ ವೀಸಾ ಪಡೆದು ಸುಮಾರು 5 ಲಕ್ಷ ಮಂದಿ ಕೆಲಸಮಾಡುತ್ತಿದ್ದಾರೆ. ಇದೀಗ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಎಚ್ -1ಬಿ ಅಂತಹ ಹೊಸ ಕೆಲಸ ಆಧಾರಿತ ವೀಸಾಗಳ ಅನುಮತಿಯನ್ನು ನಿಷೇಧಿಸುವ ಸಾಧ್ಯತೆ ಇದೆ. ಆದರೆ ಈ ಕುರಿತಂತೆ ಅಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಇದರ ಸಾಧಕ ಭಾದಕಗಳ ಕುರಿತು ಶ್ವೇತ ಭವನದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಉದ್ಯೋಗ ಕುಸಿತ
ಈ ಉದ್ಯೋಗ ಕುಸಿತವು ನಿರುದ್ಯೋಗ ದರ ಶೇ. 14.7ರಷ್ಟು ಏಲು ಕಾರಣವಾಗಿದೆ. ಇದಕ್ಕೂ ಮೊದಲು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶೇ. 4.4ರಷ್ಟು ನಿರುದ್ಯೋಗಕ್ಕೆ ಕಾರಣವಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗವು ತೀವ್ರವಾಗಿ ಕುಸಿದಿದೆ.ಮಾರ್ಚ್ ಆರಂಭದಲ್ಲಿ ಈ ಪ್ರಮಾಣ ಕೇವಲ ಶೇ. 4.4ರಷ್ಟಿತ್ತು. ಫೆಬ್ರವರಿ ತಿಂಗಳಿನಲ್ಲಿ ಶೇ. 3.5ರಷ್ಟಿತ್ತು. ಈ ಹೊತ್ತಿನಲ್ಲೇ ಕೋವಿಡ್ ಸೋಂಕು ಹರಡತೊಡಗಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.
ಈ ಬಾರಿ ಆರ್ಥಿಕತೆಯ ಎಲ್ಲ ವಲಯಗಳಲ್ಲೂ ಉದ್ಯೋಗ ನಷ್ಟವಾಗಿದೆ. ಆತಿತ್ಯೋದ್ಯಮದಲ್ಲಿ ಸುಮಾರು 70.70 ಲಕ್ಷ, ಶಿಕ್ಷಣ-ಆರೋಗ್ಯ ವಲಯದಲ್ಲಿ 20.5 ಲಕ್ಷ, ಚಿಲ್ಲರೆ ವ್ಯಾಪಾರ ಉದ್ಯಮ ವಲಯ 20.1 ಲಕ್ಷ, ಉತ್ಪಾದನಾ ಕ್ಷೇತ್ರದಲ್ಲಿ 10.3 ಲಕ್ಷ ಉದ್ಯೋಗ ನಷ್ಟವಾಗಿದೆ.