ಜಾರ್ಜ್‌ಟೌನ್: ವೆನೆಜುವೆಲಾದ ಗಡಿಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅವಘಡದಲ್ಲಿ ದಕ್ಷಿಣ ಅಮೇರಿಕದ ಗಯಾನದ ಐವರು ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಬದುಕುಳಿದಿದ್ದಾರೆ ಎಂದು ಗಯಾನಾ ಸರಕಾರ ಗುರುವಾರ ತಿಳಿಸಿದೆ.
ಸೇನಾ ಹೆಲಿಕಾಪ್ಟರ್ ಬುಧವಾರ ವೆನೆಜುವೆಲಾದ ಗಡಿಯಿಂದ ಪೂರ್ವಕ್ಕೆ ಸುಮಾರು 48 ಕಿಲೋಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಪಡೆಗಳ ವಾಡಿಕೆಯ ತಪಾಸಣೆ ನಡೆಸುತ್ತಿರುವಾಗ ಅಧಿಕಾರಿಗಳನ್ನು ಸಾಗಿಸುವಾಗ ಪ್ರತಿಕೂಲ ಹವಾಮಾನದ ಸಮಯದಲ್ಲಿ ಕಣ್ಮರೆಯಾಗಿದ್ದು, ಶೋಧಕರು ಗುರುವಾರ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.
“ದುರಂತದ ಬಗ್ಗೆ ನನ್ನ ಹೃದಯ ನೋವು ಮತ್ತು ದುಃಖದಲ್ಲಿ ಮುಳುಗಿದೆ. ಇದು ಅಪರಿಮಿತ ನಷ್ಟ” ಎಂದು ಗಯಾನ ಅಧ್ಯಕ್ಷ ಇರ್ಫಾನ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಹುತಾತ್ಮರು ನಿವೃತ್ತ ಬ್ರಿಗೇಡಿಯರ್ ಜನರಲ್, ಕರ್ನಲ್ ಮತ್ತು ಇಬ್ಬರು ಲೆಫ್ಟಿನೆಂಟ್ ಕರ್ನಲ್ ಎಂದು ಅಲಿ ತಿಳಿಸಿದ್ದಾರೆ. ಇಬ್ಬರು ಬದುಕುಳಿದವರಲ್ಲಿ ಸಹ-ಪೈಲಟ್ ಸೇರಿದ್ದಾರೆ ಮತ್ತು ಅವರ ಪರಿಸ್ಥಿತಿಗಳು ತತ್ ಕ್ಷಣವೇ ತಿಳಿದಿಲ್ಲ.
ಗಯಾನ ಪ್ರಧಾನ ಮಂತ್ರಿ ಮಾರ್ಕ್ ಫಿಲಿಪ್ಸ್ ಅವರು ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನೆಂದು ನಿರ್ಧರಿಸಲು ಅಧಿಕಾರಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಯಾವುದೇ ಪ್ರತಿಕೂಲವಾದ ಅಗ್ನಿ ಅವಘಡ ಸಂಭವಿಸಿದ ಯಾವುದೇ ಸೂಚನೆಯಿಲ್ಲ ಎಂದು ಒತ್ತಿ ಹೇಳಿದ್ದರು.
ಪರ್ವತ ಮತ್ತು ಹೆಚ್ಚು ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಅಪಘಾತವು ಗಯಾನಾದ ಮಿಲಿಟರಿ ಇತಿಹಾಸದಲ್ಲಿ ಅತ್ಯಂತ ಘೋರವಾಗಿದೆ. ಖನಿಜಗಳಿಂದ ಸಮೃದ್ಧವಾಗಿರುವ ಮತ್ತು ಬೃಹತ್ ತೈಲ ನಿಕ್ಷೇಪಗಳ ಬಳಿ ನೆಲೆಗೊಂಡಿರುವ ಎಸ್ಸೆಕ್ವಿಬೊ ಎಂದು ಕರೆಯಲ್ಪಡುವ ವಿಶಾಲ ಪ್ರದೇಶದ ಮೇಲೆ ವೆನೆಜುವೆಲಾದೊಂದಿಗೆ ರಾಜತಾಂತ್ರಿಕ ಸಂಘರ್ಷದ ಸಮಯದಲ್ಲೇ ಈ ಅವಘಡ ಸಂಭವಿಸಿದೆ. ಈ ಪ್ರದೇಶವು ವೆನೆಜುವೆಲಾದ ಗಡಿಯನ್ನು ಹೊಂದಿದ್ದು, ಇದು ಎಸ್ಸೆಕ್ವಿಬೊ ತನ್ನದೆಂದು ಹೇಳಿಕೊಳ್ಳುತ್ತದೆ.