ಮಳೆಗಾಲ ಆರಂಭವಾಗುತ್ತಿದ್ದಂತೆ ವಿವಿಧ ಬಗೆಯ ಕುರುಕಲು ತಿಂಡಿಗಳನ್ನು ತಿನ್ನಬೇಕು ಎನ್ನುವ ಆಸೆ ಹುಟ್ಟುವುದು ಸಹಜ. ಇದನ್ನು ನಿಯಂತ್ರಿಸಿಕೊಳ್ಳದೇ ಇದ್ದರೆ ರೋಗ ನಿರೋಧಕ ಶಕ್ತಿಯು ದುರ್ಬಲವಾಗುವುದು ಮಾತ್ರವಲ್ಲ ಶೀಘ್ರದಲ್ಲಿ ಅನಾರೋಗ್ಯಕ್ಕೂ ಒಳಗಾಗಬೇಕಾಗುತ್ತದೆ.
ರೋಗ ನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಿರಬೇಕಾದರೆ ಹೊಟ್ಟೆಯನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹುಮುಖ್ಯ. ಮಳೆಗಾಲದಲ್ಲಿ ಹೆಚ್ಚಾಗಿ ಹೊಟ್ಟೆಯ ಸೋಂಕು ಕಾಣಿಸಿಕೊಳ್ಳುತ್ತದೆ. ಇದರಿಂದ ಕಾಪಾಡಲು ನಮ್ಮ ಆಹಾರದಲ್ಲಿ ಕೊಂಚ ಕಾಳಜಿ ವಹಿಸಬೇಕು.
– ಐದು ಬಾದಾಮ್, 1 ಖರ್ಜೂರವನ್ನು ರಾತ್ರಿಯೀಡಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಬಾದಾಮಿಯ ಸಿಪ್ಪೆ ತೆಗೆದು ಪುಡಿ ಮಾಡಿ ಒಂದು ಲೋಟ ಹಾಲಿನಲ್ಲಿ ಬೆರೆಸಿ. ಅದಕ್ಕೆ ಅರಿಶಿನ, ದಾಲ್ಚಿನ್ನಿ, ಏಲಕ್ಕಿ ಹುಡಿ ಸೇರಿಸಿ ಅರ್ಧ ಚಮಚ ತುಪ್ಪ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅನಂತರ ಸುಮಾರು ಅರ್ಧ ಗಂಟೆಗಳ ಕಾಲ ಬೇರೆ ಏನನ್ನೂ ಸೇವಿಸಬಾರದು.
– ಕೋಕಂ ಎಸಳುಗಳನ್ನು ನೀರಿನಲ್ಲಿ ನೆನೆಹಾಕಿ ನೀರು ಸಮೇತ ಹಸಿಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಬೆರೆಸಿ ನುಣ್ಣಗೆ ರುಬ್ಬಿ ಶೋಧಿಸಿ. ಅದಕ್ಕೆ ಉಪ್ಪು, ಸಕ್ಕರೆ, ತೆಂಗಿನಹಾಲು ಬೆರೆಸಿ ಕೊತ್ತಂಬರಿ ಸೊಪ್ಪು ಹಾಕಿ ಕುಡಿಯಿರಿ.ಇದು ಹೊಟ್ಟೆಯನ್ನು ತಂಪಾಗಿಸಿ ಜೀರ್ಣಾಂಗ ಸಮಸ್ಯೆಯನ್ನು ನಿವಾರಿಸುತ್ತದೆ.
– ಒಣ ಶುಂಠಿಯನ್ನು ಒಂದು ಗ್ಲಾಸ್ ನೀರಿನಲ್ಲಿ ಕುದಿಸಿ ಬೆಲ್ಲ, ಉಪ್ಪು, ಜೀರಿಗೆ ಸೇರಿಸಿ. ತಣ್ಣಗಾದ ಬಳಿಕ ಸೇವಿಸಿ. ಇದರಿಂದ ಹೊಟ್ಟೆ ಜ್ವರ, ಉಬ್ಬರ ಸಮಸ್ಯೆಗಳು ನಿವಾರಣೆಯಾಗುವುದು.
– ಚೀಸ್, ದ್ವಿದಳ ಧಾನ್ಯಗಳು, ಕಾಳುಗಳು, ಮೊಟ್ಟೆ, ಹಣ್ಣು, ತರಕಾರಿಗಳನ್ನೊಳಗೊಂಡ ಪ್ರೋಟೀನ್, ಪ್ರೊಬಿಯಾಟಿಕ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದರಿಂದ ಹೊಟ್ಟೆಯ ಆರೋಗ್ಯ ಉತ್ತಮವಾಗಿರುವುದು