ಮಂಗಳೂರು: ರಾಮ ಮಂದಿರ ನಿರ್ಮಾಣದ ಮೂಲಕ ಎಂದೆಂದಿಗೂ ಮುಗಿಯದ ಹೊಸ ಜವಾಬ್ದಾರಿ ಬಂದಿದೆ. ಮಂದಿರವನ್ನು ಮಂದಿರವಾಗಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನದ್ದಾಗಿದೆ. ಮಂದಿರ ನಿರ್ಮಾಣ ರಾಮ ರಾಜ್ಯಕ್ಕೆ ನಾಂದಿಯಾಗಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷತ್ ಮಂಗಳೂರು ವತಿಯಿಂದ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ಸೋಮವಾರ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ರಾಮ ಮಂದಿರ ಮತ್ತೆ ಯಾವುದೇ ವಿಧ್ವಂಸಕ ಕೃತ್ಯಕ್ಕೆ ಒಳಗಾಗದಂತೆ ನಾವೆಲ್ಲರು ಎಚ್ಚರವಾಗಿರಬೇಕು. ಸೂರ್ಯ ಚಂದ್ರರಿರುವ ವರೆಗೆ ಮಂದಿರ ಉಳಿಯಬೇಕು. ಇದಕ್ಕೆ ದೇಶದಲ್ಲಿ ಹಿಂದೂಗಳು ಹಿಂದೂಗಳಾಗಿ ಬಹುಸಂಖ್ಯಾಕರಾಗಿಯೇ ಉಳಿಯ ಬೇಕು. ನಮ್ಮ ಸಂತತಿ ಉಳಿಸಿ, ನಮ್ಮ ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸಬೇಕಾಗಿದೆ ಎಂದರು.
ಶ್ರೀ ವಿಶ್ವಪ್ರಸನ್ನತೀರ್ಥರ ಷಷ್ಟ್ಯಬ್ದ ಹಾಗೂ ಆಯೋಧ್ಯೆಗೆ ತೆರಳುತ್ತಿರುವ ಹಿನ್ನೆಲೆ ಅವರನ್ನು ವಿಹಿಂಪ ವತಿಯಿಂದ ಗೌರವಿಸಲಾಯಿತು.ಕದ್ರಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಪ್ರಾಂತ ಸಹ ಕಾರ್ಯವಾಹ ಪಿ.ಎಸ್. ಪ್ರಕಾಶ್ ಅಭಿನಂದನ ಭಾಷಣ ಮಾಡಿದರು. ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ವಿಠಲದಾಸ ತಂತ್ರಿ ಮುಖ್ಯ ಅತಿಥಿ ಗಳಾಗಿದ್ದರು.
ಶಾಸಕ ವೇದವ್ಯಾಸ್ ಕಾಮತ್, ವಿಹಿಂಪ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ಸಹಕಾರ್ಯದರ್ಶಿ ಶರಣ್
ಪಂಪ್‌ವೆಲ್, ವಿಹಿಂಪ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಸ್ವಾಗತ ಸಮಿತಿಯ ಕರುಣಾಕರ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ ಕಲ್ಕೂರ ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ಕಾರ್ಯ ಕ್ರಮ ನಿರೂಪಿಸಿದರು.
ಮಕ್ಕಳಿಗೆ ಸಂಸ್ಕಾರ ನೀಡೋಣ
ಮಕ್ಕಳು ಪರಕೀಯ ಸಂಸ್ಕೃತಿಗೆ ಮಾರು ಹೋಗದೆ, ಆಮಿಷಗಳಿಗೆ ಒಳ ಗಾಗಿ ಮನೆ, ದೇಶ ಬಿಟ್ಟು ಹೋಗುವ ಮುನ್ನ ಎಚ್ಚೆತ್ತು ಸಂಸ್ಕಾರ ನೀಡುವ ಕೆಲಸವಾಗಬೇಕು. ನಾಮಕರಣದಿಂದಲೇ ಇದು ಆಗಬೇಕಿದೆ. ವೇದ, ರಾಮಾಯಣ, ಮಹಾಭಾರತಗಳಿಂದ ಒಳ್ಳೆಯ ಹೆಸರನ್ನು ಇಡಲು ಸಾಧ್ಯ. ನಮ್ಮ ಮಕ್ಕಳಿಂದಲೇ ದೇಶಕ್ಕೆ ಗಂಡಾಂತರ ಎದುರಾಗದಂತೆ ಎಚ್ಚರ ವಹಿಸಬೇಕು ಎಂದರು.