Advertisement

ಆಗ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ –ಈಗ ಸಮಗ್ರ ಕೃಷಿಕ : ಇವರ ಹೊಲದಲ್ಲಿ ಏನುಂಟು ಏನಿಲ್ಲ?

01:35 PM Jan 30, 2022 | Team Udayavani |

ಕಲಬುರಗಿ: ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಆಳಂದ ತಾಲೂಕಿನ ಗಡಿಗ್ರಾಮ ನಿಂಬಾಳದ ಗುರುಶಾಂತಗೌಡ ಶಾಲಿವಾಹನ ಪಾಟೀಲ ಅವರು ಕೃಷಿ ಕಾಯಕಕ್ಕೆ
ಮರಳಿದ್ದಾರೆ. ಅಷ್ಟೇ ಅಲ್ಲ ಸಮಗ್ರ ಕೃಷಿ ಕೈಗೊಂಡು ಆದಾಯದ ಮೂಲ ಹುಡುಕಿಕೊಂಡಿದ್ದಾರೆ.

Advertisement

ಸಾವಯವ ಕೃಷಿಗೆ ಒತ್ತು ನೀಡಿರುವ ಅವರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ. ನೂರಾರು ಆಕಳು ಹಾಗೂ ಕರುಗಳನ್ನು ಸಾಕಿದ್ದು ಹೈನುಗಾರಿಕೆಗೂ ಹೆಚ್ಚು ಮಹತ್ವ ನೀಡಿದ್ದಾರೆ.

ಜಿಪಂ ಸದಸ್ಯರಾಗುವುದಕ್ಕಿಂತ ಮುಂಚೆಯೂ ಇವರು ಕೃಷಿ ಮಾಡುತ್ತಿದ್ದರು. ಆದರೆ ಜಿಪಂ ಸದಸ್ಯರಾದ ನಂತರ ಐದು ವರ್ಷ ಅಷ್ಟು ತೊಡಗಿರಲು ಆಗಿರಲಿಲ್ಲ. ಆದರೀಗ ಸದಸ್ಯತ್ವ ಅವಧಿ
ಮುಕ್ತಾಯವಾದ ನಂತರ ಹಿಂದೆಂದಿಗಿಂತಲೂ ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೃಷಿ ಕ್ಷೇತ್ರದ ಬಲವರ್ಧನೆ ಹಾಗೂ ಹೆಚ್ಚು ಜನರು ಕೃಷಿಯಲ್ಲಿ ಕೈಗೊಳ್ಳಬೇಕೆಂಬುದು ತಮ್ಮ
ಉದ್ದೇಶ ಎನ್ನುತ್ತಾರೆ ಅವರು.

ಏನೇನು ಬೆಳೆಯುತ್ತಾರೆ?: 60 ಎಕರೆ ಭೂಮಿ ಹೊಂದಿರುವ ಪಾಟೀಲ ಅವರು, ಆರು ಎಕರೆಯಲ್ಲಿ ಕಬ್ಬು, ಆರು ಎಕರೆಯಲ್ಲಿ ದ್ರಾಕ್ಷಿ, ಆರು ಎಕರೆಯಲ್ಲಿ ಬಾಳೆ, ಒಂದು ಎಕರೆಯಲ್ಲಿ ವೀಳ್ಯದೆಲೆ, ಎರಡು ಎಕರೆ ನುಗ್ಗೆ, ಎರಡು ಎಕರೆ ಡಬ್ಬು ಮೆಣಸಿನಕಾಯಿ ಹಾಗೂ ಕಲ್ಲಂಗಡಿ ಸೇರಿದಂತೆ ಅನೇಕ ಬಗೆಯ ಬೆಳೆ ಬೆಳೆಯುತ್ತ ಬಂದಿದ್ದಾರೆ. ಒಣ ಬೇಸಾಯದಲ್ಲಿ ತೊಗರಿ, ಜೋಳ, ಕಡಲೆ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದಾರೆ. ಒಂದು ಬೆಳೆ ನಷ್ಟವಾದರೆ ಪರವಾಗಿಲ್ಲ, ಒಂದಕ್ಕೆ ಬೆಲೆ ಸಿಗದಿದ್ದರೆ ಬೇರೆ ಬೆಳೆಯಲ್ಲಿ ಸರಿತೂಗಿಸಬಹುದು ಎಂಬ ಲೆಕ್ಕಾಚಾರ ಪಾಟೀಲರದ್ದು. ಅವರ ಮಗ ಲಿಂಗರಾಜ ಪಾಟೀಲ ಸಹ ಕೃಷಿ ಕಾಯಕದಲ್ಲಿ ಸಕ್ರಿಯವಾಗಿ ತೊಡಗಿದ್ದು, ತಂದೆಗೆ ನೆರವಾಗಿದ್ದಾರೆ.

Advertisement

ಸಾವಯವ ಬೆಲ್ಲಕ್ಕೆ ಬೇಡಿಕೆ
ಕಾರ್ಖಾನೆಗೆ ಕಬ್ಬು ಕಳುಹಿಸಿ ಬಿಲ್‌ಗಾಗಿ ಅಲೆಯುವುದು ಬೇಡ. ಅದಲ್ಲದೇ ಕಬ್ಬು ಕಟಾವು ಮಾಡಲು ಕಾರ್ಮಿಕರ ಸಮಸ್ಯೆ ಹಿನ್ನೆಲೆಯಲ್ಲಿ ಗಾಣ ಮಾಡಿ ಸಾವಯವ ಪದ್ಧತಿಯಡಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸುತ್ತಿದ್ದಾರೆ. ಈ ಬೆಲ್ಲವನ್ನು ಸುತ್ತಮುತ್ತಲಿನ ಗ್ರಾಮಸ್ಥರಷ್ಟೇ ಅಲ್ಲ ನಗರದ ಪ್ರದೇಶದವರೂ ಗ್ರಾಮಕ್ಕೆ ಬಂದು ಖರೀದಿಸುತ್ತಿದ್ದಾರೆ.

ಎಕರೆ ಭೂಮಿಯಲ್ಲಿ ಕೃಷಿ ಹೊಂಡ
ಹೊಲದ ನಡುವೆ ಹಳ್ಳವೊಂದಿದ್ದು, ಮಳೆಗಾಲದಲ್ಲಿ ತುಂಬಿ ಹರಿದು ಹೋಗುವ ನೀರನ್ನು ಹಿಡಿದಿಡಲು ಒಂದು ಎಕರೆ ವಿಸ್ತೀರ್ಣ ಜಾಗದಲ್ಲಿ ಎರಡು ಕೋಟಿ ಲೀಟರ್‌ ಹಾಗೂ ಮೂರು ಕೋಟಿ ಲೀಟರ್‌ ಸಾಮರ್ಥ್ಯದ ದೊಡ್ಡದಾದ ಕೃಷಿ ಹೊಂಡ ನಿರ್ಮಿಸಿದ್ದಾರೆ. ಬೇಸಿಗೆ ದಿನದಲ್ಲಿ ಬಾವಿಯ ನೀರು ಬರದೇ ಇದ್ದರೂ ಕೃಷಿ ಹೊಂಡದ ನೀರನ್ನು ಬಳಸುತ್ತಿದ್ದಾರೆ.

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next