ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಭಾರೀ ಮಳೆಗೆ ಕುಸಿದ ಭಾಗವನ್ನು ವ್ಯವಸ್ಥಿತವಾಗಿ ದುರಸ್ತಿಪಡಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಯೋಜನೆ ರೂಪಿಸಿದೆ.
ಮಂಗಳೂರು-ಮೂಡುಬಿದಿರೆ ಮಧ್ಯೆ ವನಭೋಜನ ಎಂಬಲ್ಲಿ ಭೂಕುಸಿತ ಉಂಟಾಗಿದ್ದು ಹೆದ್ದಾರಿಯ ಒಂದು ಪಾರ್ಶ್ವ ಜರಿದಿತ್ತು. ಮಳೆ ತೀವ್ರ ಇರುವ ವೇಳೆ ದುರಸ್ತಿ ಅಸಾಧ್ಯವಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜರಿದ ಭಾಗಕ್ಕೆ ಬ್ಯಾರಿಕೇಡ್ ಹಾಕಲಾಗಿತ್ತು.
ಈಗ ರಾಷ್ಟ್ರೀಯ ಹೆದ್ದಾರಿ ಇಲಾಖೆ 1.15 ಕೋಟಿ ರೂ. ವೆಚ್ಚದಲ್ಲಿ ಈ ಜರಿದ ಭಾಗಕ್ಕೆ ರಿಟೇನಿಂಗ್ ವಾಲ್ ನಿರ್ಮಿಸುವುದು ಮತ್ತು ಇಲ್ಲಿನ ಮೋರಿಯನ್ನು ಸದೃಢಗೊಳಿಸುವ ಯೋಜನೆ ರೂಪಿಸಿದ್ದು, ಬೆಂಗಳೂರಿನ ಚೀಫ್ ಎಂಜಿನಿಯರ್ ಕಚೇರಿಗೆ ಅನುಮೋದನೆಗಾಗಿ ಕಳುಹಿಸಿದೆ. ಅನುಮೋದನೆ ಗೊಂಡ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಇಲಾಖೆಯ ಸ. ಕಾರ್ಯಪಾಲಕ ಎಂಜಿನಿಯರ್ ಕೃಷ್ಣಕುಮಾರ್ ಉದಯವಾಣಿಗೆ ತಿಳಿಸಿದರು.
ಭೂಕುಸಿತವಾಗಿರುವ ಕಡೆ ಸುಮಾರು 15 ಮೀಟರ್ ಆಳವಿದೆ. ಅಲ್ಲಿಂದಲೇ ರಿಟೇನಿಂಗ್ ವಾಲ್ ನಿರ್ಮಿಸಬೇಕಾಗುತ್ತದೆ. ಗುಡ್ಡದ ಕಡೆ ಒಂದಷ್ಟು ಜಾಗವಿದ್ದು ಅಲ್ಲಿ ಅಗಲಗೊಳಿಸುವ ಬಗ್ಗೆ ಪ್ರಾರಂಭದಲ್ಲಿ ಚರ್ಚಿಸಲಾಗಿತ್ತು. ಆದರೆ ಅದರ ಮೇಲ್ಭಾಗದಲ್ಲಿ ಮನೆ ಇರುವುದರಿಂದ ಅಗಲಗೊಳಿಸಿದ ಪರಿಣಾಮ ಮತ್ತೆ ಆ ಕಡೆಯೂ ಭೂಕುಸಿತವಾಗುವ ಸಾಧ್ಯತೆ ಇರುವುದರಿಂದ ಅದನ್ನು ಕೈಬಿಡಲಾಗಿದೆ. ಪ್ರಸ್ತುತ ರಿಟೇನಿಂಗ್ ವಾಲ್ ನಿರ್ಮಿಸಿದರೆ ರಸ್ತೆ ಸಂಚಾರ ಸುಗಮಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಭಾರೀ ಮಳೆ, ಪ್ರವಾಹ ಹಿನ್ನೆಲೆ : ವೈಷ್ಣೋ ದೇವಿ ಯಾತ್ರೆ ತಾತ್ಕಾಲಿಕ ಸ್ಥಗಿತ