Advertisement

ಗುರುಪುರ ಗ್ರಾಪಂಗೆ ಗಾಂಧಿ ಪುರಸ್ಕಾರ ಪ್ರಶಸ್ತಿ

01:26 PM Oct 02, 2017 | Team Udayavani |

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗುರುಪುರ ಗ್ರಾಪಂ ತನ್ನ ಅಪ್ರತಿಮ ಸಾಧನೆಗಾಗಿ ಸರ್ಕಾರ ಕೊಡಮಾಡುವ 2016-17 ನೇ ಸಾಲಿನ ಪ್ರತಿಷ್ಟಿತ ಗಾಂಧಿ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿದೆ.

Advertisement

ಮೂರು ಗಿರಿಜನ ಹಾಡಿಗಳನ್ನೊಳಗೊಂಡಿರುವ ಗುರುಪುರ ಗ್ರಾಪಂ, ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಗ್ರಾಪಂ ಆಗಿದ್ದರೂ ಸ್ವತ್ಛತೆ, ಶೌಚಾಲಯ ನಿರ್ಮಾಣ, ಉದ್ಯೋಗ ಖಾತರಿ ಯೋಜನೆ, ತೆರಿಗೆ ವಸೂಲಿ, ದಾಖಲಾತಿ ನಿರ್ವಹಣೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿದೆ.

ಜಿಪಂ ಪಂಚತಂತ್ರ ತತ್ರಾಂಶದ ಮೂಲಕ ಆಹ್ವಾನಿಸಿದ ಅರ್ಜಿಯಲ್ಲಿ ವಿವರ ಹಾಗೂ ಸಾಧನೆಗಳಲ್ಲಿ 150ಕ್ಕೆ 146 ಅಂಕಗಳಿಸುವ ಮೂಲಕ ಪುರಸ್ಕಾರ ಪಡೆದುಕೊಂಡು 5 ಲಕ್ಷರೂ., ಬಹುಮಾನ ಗಿಟ್ಟಿಸಿದೆ.

ಸ್ವತ್ಛ ಭಾರತ್‌ ಮಿಷನ್‌ ಯೋಜನೆ ಮುಖಾಂತರ ಶೌಚಾಲಯ ನಿರ್ಮಾಣದಲ್ಲಿ ನಿಗದಿತ ಅವಗಿಂತ ಮೊದಲೇ ಮೂರು ಗಿರಿಜನ ಪುನರ್ವಸತಿ ಕೇಂದ್ರ ಸೇರಿದಂತೆ ಎಲ್ಲ ಹಳ್ಳಿಗಳಲ್ಲೂ 1200 ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಿ, ಬಯಲು ಮುಕ್ತ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ತೆರಿಗೆ ವಸೂಲಿಯಲ್ಲೂ ಮುಂದಿದ್ದು ಈಗಾಗಲೇ ಶೇ.80 ರಷ್ಟು ತೆರಿಗೆ ವಸೂಲಿ ಮಾಡಿದೆ. ಇವೆಲ್ಲವೂ ದಾಖಲಾತಿಯಲ್ಲಿ ಸೇರಿದೆ.

ಜಲ ಹೂರಣ: ಉದ್ಯೋಗ ಖಾತರಿ ಯೋಜನೆಯಡಿ ಕುರುಬರ ಹೊಸಹಳ್ಳಿ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿದ್ದು, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಜೊತೆಗೆ ಕೆರೆ ಏರಿಯನ್ನು ದುರಸ್ತಿ ಮಾಡಲಾಗಿದ್ದು ನೀರು ತುಂಬಿ ಕಂಗೊಳಿಸುತ್ತಿದೆ.

Advertisement

11 ಕಡೆ ಇಂಗು ಗುಂಡಿಯನ್ನು ನಿರ್ಮಿಸಲಾಗಿದೆ. ಸರ್ವೆ ನಂ.25 ಮತ್ತು ವಾರಂಚಿ ಗ್ರಾಮದಲ್ಲಿ ಸ್ಮಶಾನವನ್ನು ಅಭಿವೃದ್ಧಿಗೊಳಿಸಿ ಸುತ್ತ ತಂತಿಬೇಲಿ ನಿರ್ಮಿಸಲಾಗಿದೆ. ಹೊಸವಾರಂಚಿ ಹಾಗೂ ಹುಣಸೆಕಟ್ಟೆಯಲ್ಲಿ ರಾಜಕಾಲುವೆ ನಿರ್ಮಿಸಲಾಗಿದೆ.  ಅಲ್ಲದೆ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಸೌಲಭ್ಯ ಕಲ್ಪಿಸಲಾಗಿದೆ.
 
ನಿವೇಶನ ಸಿಕ್ಕಲ್ಲಿ ಕಟ್ಟಡ ನಿರ್ಮಾಣ: ತಾಲೂಕಿನಲ್ಲಿ  ಗುರುಪುರ,ಬಿಳಿಕೆರೆ, ಮನುಗನಹಳ್ಳಿ, ನೇರಳಕುಪ್ಪೆ ಗ್ರಾಪಂಗಳು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು. ಆದರೆ, ಗುರುಪುರ ಪಂಚಾಯ್ತಿಗೆ ಹೆಚ್ಚು ಅಂಕ ಬಂದಿದ್ದು, ಉಳಿದ ಪಂಚಾಯ್ತಿಗಳು ಉತ್ತಮ ಸಾಧನೆ ಮಾಡಿವೆ. ಈ ಪಂಚಾಯ್ತಿಗೆ  ನೂತನ ಕಟ್ಟಡ ನಿರ್ಮಾಣಕ್ಕೆ  ಸ್ಥಳಕ್ಕಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಹಲವಾರು ಬಾರಿ ಮನವಿ ಮಾಡಿದ್ದೇನೆ. ನಿವೇಶನ ಸಿಕ್ಕಲ್ಲಿ ತಕ್ಷಣವೇ ಗ್ರಾಪಂ ಕಚೇರಿ ಕಟ್ಟಡ ನಿರ್ಮಾಣವಾಗಲಿದೆ ಎಂದು ತಾಪಂ ಇಒ ಕೃಷ್ಣಕುಮಾರ್‌ ತಿಳಿಸಿದ್ದಾರೆ.

ಹೊಸ ಪಂಚಾಯ್ತಿ ಆದರೂ ತಾಪಂ ಇಒ ಅವರ ಮಾರ್ಗದರ್ಶನ, ಪಿಡಿಒ ಮತ್ತು ಸಿಬ್ಬಂದಿಗಳ ಬದ್ದತೆ, ಸದಸ್ಯರ ಸಹಕಾರದಿಂದ ಪ್ರಗತಿ ಸಾಧಿಸಿದ್ದು, ಈ ಸಾಧನೆಗೆ ಗಾಂಧಿ ಪುರಸ್ಕಾರ ಸಂದಿರುವುದು ಹೆಮ್ಮೆ ಎನಿಸಿದ್ದರೂ ಸ್ವಂತಕಟ್ಟಡವಾಗಿಲ್ಲವೆಂಬ ಬೇಸರವಿದೆ.
-ಪ್ರಶಾಂತ್‌, ಗುರುಪುರ ಗ್ರಾಪಂ ಅಧ್ಯಕ್ಷ

* ಸಂಪತ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next