ಧಾರವಾಡ: ಜಗತ್ತನ್ನು ಪ್ರೀತಿಸಿ, ನಾವೆಲ್ಲಾ ಒಂದೇ ಕುಟುಂಬದವರು ಎಂದು ಸಾರಿದವರು ಭಾರತೀಯರು. ಇಂತಹ ಪರಂಪರೆಯನ್ನು ಹೊಂದಿದ ಈ ದೇಶವಾಸಿಗಳೇ ಧನ್ಯರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ಗ್ರಾಮಾಂತರ ತಾಲೂಕು ಕಾಲೇಜು ವಿದ್ಯಾರ್ಥಿ ಒಕ್ಕೂಟದ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಅವರು ಮಾತನಾಡಿದರು. ಸಹಿಷ್ಣುಗಳಾಗಿ, ನಂಬಿಕಾರ್ಹರಾಗಿ, ತೇಜಸ್ವಿಗಳಾಗಿ, ಧಿಧೀರರಾಗಿಯೂ ಕೂಡ ಬಾಳುತ್ತಿದ್ದೇವೆ. ಆ ಕಾರಣದಿಂದಲೇ ಭಾರತದೆಡೆಗೆ ವಿದೇಶಿಯರು ಮುಖ ಮಾಡಿ ನೋಡುತ್ತಿದ್ದಾರೆ.
ಭಾರತೀಯ ಸಂಸ್ಕೃತಿ, ತತ್ವಾದರ್ಶಗಳು ಜಗತ್ತಿಗೆ ಮಾರ್ಗದರ್ಶಕವಾಗಿದೆ ಎಂದರು. ನಮ್ಮ ಜೀವನದಲ್ಲಿ ನಿರಂತರವಾಗಿ ಗುರುವಿನ ತತ್ವಾದರ್ಶ, ಸಮರ್ಪಣಾ ಭಾವ ಅಳವಡಿಸಿಕೊಳ್ಳುತ್ತ ಬರಬೇಕು. ನಮ್ಮಲ್ಲಿ ಹೆಚ್ಚು-ಹೆಚ್ಚು ಸಮರ್ಪಣಾ ಭಾವ ಬೆಳೆಯಬೇಕು. ಗುರುಗಳಿಗೆ ಸಂಪೂರ್ಣ ಶರಣಾಗತರಾಗಬೇಕು.
ಸಂಘದಲ್ಲಿ ತತ್ವಾದರ್ಶಗಳನ್ನು ಸೂಚಿಸುವ, ಚೈತನ್ಯ ಸಂಕೇತವಾದ, ತ್ಯಾಗ-ಸೇವಾಭಾವದ ಪ್ರತೀಕವಾದ ಭಗವಾ ಧ್ವಜವನ್ನುಗುರುವೆಂದು ಅಂಗೀಕರಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಗುರುವಾದ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಗುರುದಕ್ಷಿಣೆ ಸಲ್ಲಿಸಿದರು.
ವಿದ್ಯಾಕೇಂದ್ರದ ಕಾರ್ಯದರ್ಶಿ ಶ್ರೀನಿವಾಸ ನಾಡಗೀರ, ಪ್ರಾಚಾರ್ಯರಾದ ಅನಿತಾ ರೈ, ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ ಇದ್ದರು. ಪ್ರಜ್ವಲ ಪ್ರಾರ್ಥಿಸಿದರು. ಸಿದ್ದಾರ್ಥ ಎಚ್ ಸ್ವಾಗತಿಸಿ, ಪರಿಚಯಿಸಿದರು. ದಿಗ್ವಿಜಯ ಘೋರ್ಪಡೆ ನಿರೂಪಿಸಿದರು. ಪ್ರಮೋದ ವಂದಿಸಿದರು.