ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಿತ ಗುರುನಾರಾಯಣ ರಾತ್ರಿ ಶಾಲೆಯ ಹತ್ತನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮವು ಫೆ. 16ರಂದು ನಡೆಯಿತು.
ಶಾಲಾ ಕಾರ್ಯಾಧ್ಯಕ್ಷರಾದ ಬಿ. ರವೀಂದ್ರ ಅಮೀನ್ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಕಾರ್ಯಾಧ್ಯಕ್ಷರಿಗೆ ಹಾಗೂ ಶಿಕ್ಷಕ ವೃಂದದವರಿಗೆ ಪುಷ್ಪ ಗೌರವವನ್ನು ಅರ್ಪಿಸಿ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳು ಮಾತನಾಡಿ, ಶಾಲೆಯಲ್ಲಿ ಪಡೆದ ಅನುಭವ, ಶಿಕ್ಷಕರು ಕಲಿಕಾ ನ್ಯೂನತೆಯನ್ನು ಗುರುತಿಸಿ, ಸೂಕ್ತ ಸಲಹೆಯನ್ನಿತ್ತು ಕಲಿಕೆಯಲ್ಲಿ ಅಭಿರುಚಿಯನ್ನು ಹೊಂದುವಂತೆ ಮಾಡಿದ್ದಾರೆ, ಶಿಕ್ಷಕ ವೃಂದದಿಂದ ದೊರೆತ ಮಾರ್ಗದರ್ಶನ ನಮಗೆ ಅಮೂಲ್ಯವಾದದ್ದು ಎಂದು ಹೇಳಿ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಶಾಲೆಯ ಫಲಿತಾಂಶ ಕಳೆದ 5 ವರ್ಷಗಳಿಂದ ನಿರಂತರ ನೂರು ಪ್ರತಿಶತ ಬರುತ್ತಿದೆ. ಈ ವರ್ಷವೂ ಅದನ್ನು ಸಾಧ್ಯಗೊಳಿಸುವೆವು ಎಂದು ಭರವಸೆ ನೀಡಿದರು.
ಕಾರ್ಯಾಧ್ಯಕ್ಷರಾದ ಬಿ. ರವೀಂದ್ರ ಅಮೀನ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ವಿದ್ಯಾಭ್ಯಾ ಸದೊಂದಿಗೆ ಶಿಸ್ತು, ಉತ್ತಮ ಸಂಸ್ಕಾರ ಅಳವಡಿಸಿಕೊಂಡಾಗ ನಮ್ಮ ಸಮಾಜ ಸುಸಂಸ್ಕೃತವಾಗುತ್ತದೆ. ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿ ಗಳಾಗದೇ ಸುಸಂಸ್ಕೃತರಾಗಬೇಕು. ವಿದ್ಯಾರ್ಥಿಗಳಾದ ನಿಮ್ಮಲ್ಲಿ ಸಾಧನೆ ಛಲ, ಕಠಿಣ ಪರಿಶ್ರಮ ಇರಬೇಕು. ಸಾಧನೆಗೆ ಆಸಾಧ್ಯವಾದದ್ದು ಯಾವು ದೂ ಇಲ್ಲ, ಆದರೆ ಸಾಧಿಸುವ ಛಲ ಬೇಕು ಅದರೊಂದಿಗೆ ಪ್ರಾಮಾಣಿಕತೆ ಇದ್ದರೆ ನೀವು ನಿಮ್ಮ ಗುರಿಯನ್ನು ತಲುಪಲು ಸಾಧ್ಯವಿದೆ. ನಮ್ಮ ಮಾರ್ಗದರ್ಶಕರಾದ ಜಯ ಸುವರ್ಣರ ಮಾರ್ಗದರ್ಶನ ಹಾಗೂ ಮಾತೃಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಎಲ್ಲ ಸೌಕರ್ಯ ಗಳನ್ನು ಒದಗಿಸಿ ನಿಮ್ಮ ಸಾಧನೆಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತರಬೇಕು ಎಂದರು.
ಶಾಲಾ ಶಿಕ್ಷಕ ವೃಂದದವರು ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು ಎಂದರು, ಪರೀಕ್ಷೆ ಯ ಕುರಿತು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾರ್ಗದರ್ಶನ ನೀಡಿ ಶುಭಕೋರಿದರು. ಶಾಲಾ ಮುಖ್ಯೋಪಾಧ್ಯಾಯ ರಾಮ ಚಂದ್ರಯ್ಯ ಸಿ. ಅವರು ಮಾತನಾಡಿ, ಮಾತೃ ಸಂಸ್ಥೆಯ ಸಹಕಾರ, ಸೌಹಾರ್ದತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಉತ್ತಮ ರೀತಿಯಲ್ಲಿ ಸಹಕರಿಸಿದ ಅಧ್ಯಕ್ಷರಿಗೆ, ಕೃತಜ್ಞತೆಗೈದರು.
ಶಿಕ್ಷಕಿ ವಿಮಲಾ ಡಿ. ಎಸ್., ಮೋಹಿನಿ ಪೂಜಾರಿ, ಶಿಕ್ಷಕರಾದ ಸಿದ್ಧರಾಮ ದಶಮಾನೆ, ಶಿವಾನಂದ ಪಾಟೀಲ, ಸುನೀಲ್ ಕಾಂಬಳೆ, ಶಾಲಾ ಸಿಬಂದಿಗಳಾದ ನಮೀತಾ ಪೂಜಾರಿ, ಸುನೀಲ್ ಪಾಟೀಲ್ ಇವರೆಲ್ಲರ ಒಮ್ಮತದ ಸಹಕಾರದಿಂದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಜರಗಿತು. ವಿದ್ಯಾರ್ಥಿನಿ ಪೂಜಾ ಚವ್ಹಾಣ್ ಕಾರ್ಯಕ್ರಮ ನಿರ್ವಹಿಸಿದರು. ದಿವ್ಯಾ ಚವ್ಹಾಣ್ ವಂದಿಸಿದರು.