ಸಿನಿಮಾದಲ್ಲಿ “ಫಸ್ಟ್ ರ್‍ಯಾಂಕ್’ ಪಡೆದ ರಾಜು ಅಲ್ಲಲ್ಲ, ಗುರುನಂದನ್, ಆ ಬಳಿಕ “ಸ್ಮೈಲ್ ಪ್ಲೀಸ್’ ಎನ್ನುತ್ತಲೇ ನಗಿಸುವ ಪ್ರಯತ್ನ ಮಾಡಿದರು. ಆದರೆ, ಅವರ ಸ್ಮೈಲ್‌ಗೆ ಯಾರೂ ಅಷ್ಟಾಗಿ ಸ್ಮೈಲ್ ಮಾಡಲಿಲ್ಲ. ಆ ನಂತರ “ಕನ್ನಡ ಮೀಡಿಯಂ ಸ್ಟೂಡೆಂಟ್’ ಆಗಿ “ಮಿಸ್ಸಿಂಗ್ ಬಾಯ್’ ಎನಿಸಿಕೊಂಡರು. ಅದಾದ ಮೇಲೆ ಗುರುನಂದನ್ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಅದಕ್ಕೆ ಉತ್ತರ ಇರಲಿಲ್ಲ. ಈಗ ಸ್ವತಃ ಗುರುನಂದನ್ ಅವರೇ, ಹೊಸದೊಂದು ಚಿತ್ರ ಮಾಡುತ್ತಿರುವ ಕುರಿತು ಹೇಳಿಕೊಂಡಿದ್ದಾರೆ.
ಹೌದು, ಗುರುನಂದನ್ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ವಿಶೇಷ. ಇನ್ನು, ಇತ್ತೀಚೆಗೆ “ಸಿಂಗ’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಿರಣ್ ಅವರು, ಗುರುನಂದನ್ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಅದು ಸ್ವಮೇಕಾ ಅಥವಾ ರಿಮೇಕಾ ಎಂಬುದನ್ನು ಸಿನಿಮಾ ಬಂದಮೇಲೆ ತಿಳಿದುಕೊಳ್ಳಬೇಕು. ಅಂದಹಾಗೆ, ಸಿನಿಮಾ ಕುರಿತು ಹೇಳಿಕೊಳ್ಳುವ ಗುರುನಂದನ್, “ಅದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ.
ಇಲ್ಲಿ ಲವ್‌ಸ್ಟೋರಿಯೂ ಇದೆ. ಹಾಸ್ಯವೂ ಮೇಳೈಸಲಿದೆ. ಜೊತೆಗೆ ಒಂದಷ್ಟು ಎಮೋಷನ್ಸ್ ಕೂಡ ಇದೆ. ಸದ್ಯಕ್ಕೆ ನಾಯಕಿಯ ಆಯ್ಕೆ ನಡೆದಿಲ್ಲ. ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕಾಂಬಿನೇಷನ್‌ನಲ್ಲಿ ಸುಮಾರು ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದು ವಿವರ ಕೊಡುವ ಗುರುನಂದನ್, ಸೋಮವಾರ ಚಿತ್ರದ ಪೂಜೆ ನೆರವೇರಲಿದ್ದು, ಚಿತ್ರತಂಡ ಚಿತ್ರೀಕರಣಕ್ಕೆ ಅಣಿಯಾಗಲಿದೆ ಎನ್ನುತ್ತಾರೆ. ಅದೇನೆ ಇರಲಿ, “ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ಭರ್ಜರಿ ಯಶಸ್ಸು ಪಡೆದ ಬಳಿಕ ಗುರುನಂದನ್ ಅವರಿಗೆ ಹೊಸ ಇಮೇಜ್ ಸಿಕ್ಕಿದ್ದು ಸುಳ್ಳಲ್ಲ.
ಅದೇ ಗೆಲುವಿನ ನಿರೀಕ್ಷೆ ಇಟ್ಟುಕೊಂಡು “ಸ್ಮೈಲ್ ಪ್ಲೀಸ್’ ಚಿತ್ರ ಮಾಡಿದರೂ, ಅದು ಯಶಸ್ಸು ಕೊಡಲಿಲ್ಲ. ಎಲ್ಲೋ ಒಂದು ಕಡೆ ಗುರುನಂದನ್ ಅವರಿಗೆ ಭಯ ಕಾಡಿದ್ದು ನಿಜ. ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕು ಅಂದುಕೊಂಡ ಗುರುನಂದನ್ ಅವರಿಗೆ ಪುನಃ, “ಫಸ್ಟ್ ರ್‍ಯಾಂಕ್ ರಾಜು’ ತಂಡ ಸೇರಿ “ರಾಜು ಕನ್ನಡ ಮೀಡಿಯಂ’ ಚಿತ್ರ ಮಾಡಿತು. ಅದು ಗುರುನಂದನ್ ಮೊಗದಲ್ಲಿ ಮಂದಹಾಸ ಮೂಡಿಸಿದಂತೂ ನಿಜ. ಈಗ ಮತ್ತೂಂದು ಹೊಸ ಚಿತ್ರದ ಹಿಂದೆ ಹೊರಟಿದ್ದಾರೆ. ಈ ಸಿನಿಮಾ ಕೂಡ ಗೆಲುವು ಕೊಡುತ್ತೆ ಎಂಬ ಭವ್ಯ ಭರವಸೆ ಅವರದು.