ವರದಿ : ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಅನ್ನದಾಸೋಹ ಕೈಗೊಂಡಿದ್ದ ಗುರುನಾನಕ್ ಮಿಷನ್ ಟ್ರಸ್ಟ್ ಇದೀಗ ತನ್ನ ಕಾರ್ಯ ಪುನಾರಂಭಿಸಿದ್ದು, ಸೇವಾ ಭಾರತಿ ಮೂಲಕ ಮಹಾನಗರದ ವಿವಿಧ ಆಸ್ಪತ್ರೆಗಳಲ್ಲಿರುವ ರೋಗಿಗಳ ಸಂಬಂಧಿಕರಿಗೆ ಆಹಾರ ಪೂರೈಸಲು ಮುಂದೆ ಬಂದಿದೆ.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಎರಡು ಹೊತ್ತು ಆಹಾರ ಪೂರೈಸುವ ಮೂಲಕ ಜಿಲ್ಲಾಡಳಿತಕ್ಕೆ ದೊಡ್ಡ ಆಸರೆಯಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಗೆ ಬರುವ, ಇಲ್ಲಿಂದ ಹೋಗುವ ಕಾರ್ಮಿಕರು, ನಿರ್ಗತಿಕರು, ವಲಸಿಗರಿಗೆ ಆಹಾರ ಪೊಟ್ಟಣ ನೀಡಿ ಹಸಿವು ನೀಗಿಸಿದ್ದರು. ಲಾಕ್‌ಡೌನ್ ಪೂರ್ಣಗೊಂಡು ಸಹಜ ಸ್ಥಿತಿಗೆ ಮರಳುವ ವೇಳೆಗೆ ನಿತ್ಯ 2000-4000ದಂತೆ ಸುಮಾರು 1.87 ಲಕ್ಷ ಆಹಾರ ಪೊಟ್ಟಣ ವಿತರಿಸಿದ್ದರು. ಇದೀಗ ಪುನಃ ಆಹಾರ ಪೂರೈಕೆಗೆ ಮುಂದೆ ಬಂದಿದ್ದು, 800 ಜನರಿಗೆ ಬೇಕಾಗುವ ಆಹಾರ ತಯಾರಿಸುತ್ತಿದ್ದಾರೆ.
ರೋಗಿಗಳ ಸಂಬಂಧಿಕರಿಗೆ ಆಹಾರ: ಪ್ರಸಕ್ತ ಕರ್ಫ್ಯೂ ಆರಂಭದಿಂದ ಈ ಕಾರ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಷ್ಟೊಂದು ಬೇಡಿಕೆಯಿಲ್ಲದ ಪರಿಣಾಮ ಮುಂದುವರಿದಿರಲಿಲ್ಲ. ಆದರೆ ಮಹಾನಗರದ ವಿವಿಧ ಆಸ್ಪತ್ರೆಗಳ ರೋಗಿಗಳ ಸಂಬಂಧಿಕರಿಗೆ ಆಹಾರದ ಸಮಸ್ಯೆ ಉಂಟಾಗಿತ್ತು. ಇದನ್ನು ಗಮನಿಸಿದ ಸೇವಾ ಭಾರತಿ ಟ್ರಸ್ಟ್ ಗುರುನಾನಕ್ ಮಿಷನ್ ಟ್ರಸ್ಟ್ ಪ್ರಮುಖರನ್ನು ಭೇಟಿಯಾಗಿ ಆಹಾರದ ಬೇಡಿಕೆ ಸಲ್ಲಿಸಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ಮಧ್ಯಾಹ್ನ ಮತ್ತು ರಾತ್ರಿ ಎರಡು ಸಮಯದಲ್ಲಿ ಸುಮಾರು 400 ಜನರಿಗೆ ಬೇಕಾಗುವ ಆಹಾರ ಪೂರೈಸುತ್ತಿದ್ದಾರೆ.
ಸೇವಾ ಭಾರತಿ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನದ ಕಾರ್ಯಕರ್ತರು ಮಹಾನಗರದ ವಿವಿಧ ಆಸ್ಪತ್ರೆಗಳಿಗೆ ತೆರಳಿ ಅಗತ್ಯವುಳ್ಳವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸ್ವತ್ಛ-ರುಚಿ ರುಚಿ ಅಡುಗೆ: ಸಿಖ್ ಹಾಗೂ ಸಿಂಧಿ ಪಂಚಾಯತ್ ಸಮುದಾಯದ ಜನರು ತಮ್ಮ ಗಳಿಕೆಯ ಒಂದಿಷ್ಟು ಭಾಗವನ್ನು ಈ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಜನರು ನಿರಂತರವಾಗಿ ಕೆಲಸಕ್ಕೆ ಮುಂದಾಗಿದ್ದಾರೆ. ದಿನಸಿ ವಸ್ತು, ತರಕಾರಿ ತರುವುದರಿಂದ ಹಿಡಿದು ಪ್ರತಿಯೊಂದು ಕೆಲವನ್ನು ಇವರೇ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಅಡುಗೆ ಮನೆ ಇದೆ. ಬಹುತೇಕ ಅಡುಗೆ ಸ್ಪರ್ಶ ರಹಿತವಾಗಿ ತಯಾರಾಗುತ್ತಿದ್ದು, ಶುಚಿತ್ವ, ರುಚಿ, ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ.
ಪರವಾನಗಿಗೆ ಅಲೆದಾಟ: ಕಳೆದ ವರ್ಷ ಇವರ ನಿಸ್ವಾರ್ಥ ಸೇವೆ ಅರಿತು ಜಿಲ್ಲಾಡಳಿತ ಪಾಸ್ ವಿತರಣೆ ಮಾಡಿತ್ತು. ಈ ಬಾರಿಯೂ ಜನರಿಗೆ ತಮ್ಮಿಂದ ಸಹಾಯವಾಗಲಿ ಎನ್ನುವ ಕಾರಣಕ್ಕೆ ಕರ್ಫ್ಯೂ ಆರಂಭದಲ್ಲಿ ಜಿಲ್ಲಾಡಳಿತದ ಅನುಮತಿ ಪಡೆಯಲು ಅಲೆದಾಡಿದರು. ಆದರೆ ಈ ಬಾರಿ ಯಾವುದೇ ಪಾಸ್ ನೀಡುತ್ತಿಲ್ಲ. ಅಗತ್ಯವಿದ್ದರೆ ಶುರು ಮಾಡಿ ಎನ್ನುವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೂ ಸೆಮಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಷ್ಟೊಂದು ಬೇಡಿಕೆಯಿಲ್ಲ ಎನ್ನುವ ಕಾರಣಕ್ಕೆ ಹಿಂದೇಟು ಹಾಕಿದ್ದರು.
ಸೇವಾ ಭಾರತಿ ಟ್ರಸ್ಟ್ , ರಾಷ್ಟ್ರೋತ್ಥಾನ, ಗುರುನಾನಕ್ ಮಿಷನ್ ಟ್ರಸ್ಟ್,