ಬೀದರ: ಬಾನಂಗಳದಲ್ಲಿ ಪಟಾಕಿಗಳ ಬೆಳಕಿನ ಚಿತ್ತಾರ..ಗಮನ ಸೆಳೆದ ನೀಲಿ ಮತ್ತು ಹಳದಿ ಧ್ವಜಗಳು(ನಿಶಾನೆ ಸಾಹೇಬ್).. ಮೈ ಜುಮ್ಮೆನ್ನಿಸಿದ ಪಾರಂಪರಿಕ ಕಲಾ ಪ್ರದರ್ಶನಗಳು..ಮುಗಿಲು ಮುಟ್ಟಿದ “ಬೊಲೆ ಸೋನಿಹಾಲ್, ಸಶ್ರೀಯಾ ಅಕಾಲ್’ ಜಯಘೋಷಗಳು..
ಸಿಖ್ಖರ ಧರ್ಮಗುರು ಗುರುನಾನಕ್ ದೇವ ಮಹಾರಾಜರ 548ನೇ ಜನ್ಮೋತ್ಸವ ನಿಮಿತ್ತ ನಗರದಲ್ಲಿ ಕಂಡು ಬಂದ ವೈಭವದ ದೃಶ್ಯಗಳಿವು. ಜಯಂತಿ ನಿಮಿತ್ತ ನಗರದಲ್ಲಿ ಶನಿವಾರ ಜರುಗಿದ ಭವ್ಯ ಮೆರವಣಿಗೆಯ ಅಭೂತಪೂರ್ವ ಕ್ಷಣಕ್ಕೆ ದೇಶ-ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್ ಧರ್ಮೀಯರು ಸಾಕ್ಷಿಯಾದರು.
ಸಂಜೆ 4 ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ 7ರವರೆಗೆ ನಡೆಯಿತು. ಸಿಖ್ ಧಾರ್ಮಿಕ ಮುಖಂಡರು ನಿಶಾನೆ ಸಾಹೇಬ್‌ಗಳೆಂಬ ನೀಲಿ ಮತ್ತು ಹಳದಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಆಕರ್ಷಿಸಿತು. ವಿಶೇಷ ಅಲಂಕೃತ ವಾಹನದಲ್ಲಿ ಗುರುನಾನಕರ ಭಾವಚಿತ್ರ ಕಣ್ಮನ ಸೆಳೆಯಿತು. ಸಿಖ್ ಧರ್ಮಿಯರು ಭಕ್ತಿ-ಭಾವದೊಂದಿಗೆ ಭಾಗಿಯಾಗಿ ಹಾಡಿ, ಕುಣಿದು ಸಂಭ್ರಮಿಸಿದರಲ್ಲದೇ ಧಾರ್ಮಿಕ ಗ್ರಂಥ ಪಠಣ ನಡೆಸಿದರು.
ಮೆರವಣಿಗೆ ಮಾರ್ಗದುದ್ದಕ್ಕೂ “ಬೊಲೆ ಸೋನಿಹಾಲ್, ಸಶ್ರೀಯಾ ಅಕಾಲ್’ ಜಯ ಘೋಷಣೆಗಳು ಮುಗಿಲು ಮುಟ್ಟಿದವು. ಅಲಂಕೃತ ಕುದುರೆಗಳ ಮೇಲೆ ಸಿಖ್ ಧರ್ಮೀಯರು ಪಾರಂಪರಿಕ ತಲವಾರ್ ಮತ್ತು ಚಕ್ರ ತಿರುಗಿಸುವುದು, ಕೈಯಲ್ಲಿ ತಲವಾರ್ ಹಿಡಿದು ಓಡುವುದು ನೋಡುಗರನ್ನು ಸೆಳೆಯಿತು. ಬಾಲಕ ಮತ್ತು ಬಾಲಕಿಯರು ತಲವಾರ್ ತಿರುಗಿಸಿ ಸೈ ಎನಿಸಿಕೊಂಡರು.
ಐತಿಹಾಸಿಕ ಗುರುದ್ವಾರದಿಂದ ಆರಂಭವಾದ ಮೆರವಣಿಗೆ ಮಡಿವಾಳ ವೃತ್ತ, ಕರಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಸಾಗಿ ಪುನಃ ಗುರುನಾನಕ ದೇವಸ್ಥಾನಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿಖ್ ಬಾಂಧವರಿಗಾಗಿ ವಿವಿಧ ಸಂಘಟನೆಗಳಿಂದ ರಸ್ತೆಯುದ್ದಕ್ಕೂ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಯಂತಿ ನಿಮಿತ್ತ ಗುರುದ್ವಾರದಲ್ಲಿ ಮಂಗಳವಾರ ರಾತ್ರಿಯಿಡಿ ಗುರುನಾನಕ ದೇವ ಪ್ರಬಂಧಕ ಕಮಿಟಿ ವತಿಯಿಂದ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆದವು. ವಿಶೇಷ ಗ್ರಂಥ ಪಠಣ, ಭಜನೆ ಮತ್ತು ಕೀರ್ತನೆ ಜರುಗಿದವು. ಧಾರ್ಮಿಕ ಮುಖಂಡರು ವಿಧ್ಯುಕ್ತ ಚಾಲನೆ ಕೊಟ್ಟು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬೆಂಗಳೂರು, ನಾಂದೇಡ್, ಉದಗೀರ, ಲಾತೂರ, ಪುಣೆ, ಹೈದ್ರಾಬಾದ ಸೇರಿದಂತೆ ವಿವಿಧೆಡೆಯಿಂದ ಸಿಖ್ಖರು ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ರಹೀಮ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ವಾಲಿ, ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಬ್, ಪ್ರಮುಖರಾದ ಮನಪ್ರಿತಸಿಂಗ್ ಬಂಟಿ, ದರ್ಬಾರ್ಸಿಂಗ್, ಪ್ರದೀಪಸಿಂಗ್, ತೇಜಪಾಲಸಿಂಗ್, ದರ್ಶನಸಿಂಗ್, ಗುರುಪ್ರಿತಸಿಂಗ್ ಮತ್ತಿತರ ಮುಖಂಡರು
ಪಾಲ್ಗೊಂಡಿದ್ದರು.