Advertisement

ಗುರುಗುಂಟಿರಾಯರ ಟ್ಯಾಕ್ಸ್‌ ಫೈಲಿಂಗ್‌ ಕಸರತ್ತು

07:45 AM Jul 17, 2017 | |

ಬಹೂರಾನಿಯ ಕೈಯಲ್ಲಿ ರಿಟರ್ನ್ ಫೈಲಿಂಗ್‌ ಬಗ್ಗೆ ಪ್ರಾಥಮಿಕ ಜ್ಞಾನ ಸಿದ್ಧಿಸಿಕೊಂಡ ಗುರುಗುಂಟಿರಾಯರ ಮನಸ್ಸು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆಕೆಗೆ ತಿಳಿಯದಂತೆ ತಾವೇ ಏಕಾಂಗಿಯಾಗಿ ರಿಟರ್ನ್ ಫೈಲಿಂಗ್‌ ಮಾಡಿದರೆ ಆಕೆ ಮೆಚ್ಚಿ ಶಹಬ್ಟಾಶ್‌ ನೀಡಿಯಾಳೆಂಬ ಸಣ್ಣ ಆಸೆಯೊಂದು ಮನದಾಳದಲ್ಲಿ ಅಂಕುರಿಸಿತು. ಈ ಘನಂದಾರಿ ಐಡಿಯಾ ತಲೆಯೊಳಕ್ಕೆ ಹೊಕ್ಕದ್ದೇ ತಡ ರಾಯರು ಕಾರ್ಯ ಪ್ರವೃತ್ತರಾದರು.

Advertisement

ಮೊತ್ತ ಮೊದಲನೆಯ ಸಮಸ್ಯೆಯೇನೆಂದರೆ ಕಂಪ್ಯೂಟರ್‌ ಆನ್‌ ಮಾಡಿ, ಗೂಗಲ… ಸರ್ಚ್‌ ಹಾಕಿ ಕರ ಇಲಾಖೆಯ 
ಪುಟಕ್ಕೆ ಹೋಗಬೇಕಾದರೆ ರಾಯರಿಗೆ ಮೊಮ್ಮಗನ ಸಹಾಯ ಬೇಕೇ ಬೇಕು. ಮಕ್ಕಳ ಸಹಾಯವಿಲ್ಲದೆ ಹಿರಿಯರಿಗೆ ಟೆಕ್ಕಿ ಗ್ಯಾಜೆಟ್ಸ್‌ ಚಲಾಯಿಸಲು ಎಲ್ಲಿ ಬರುತ್ತದೆ. ಹಾಗಾಗಿ ಈ ಪ್ರೊಜೆಕ್ಟಿನಲ್ಲಿ ಮೊಮ್ಮಗನನ್ನು ಪುಸಲಾಯಿಸುವುದು ರಾಯರ ಮೊತ್ತ ಮೊದಲ ಹೆಜ್ಜೆ.

ಒಂದು ಫೈವ್‌ ಸ್ಟಾರಿಗೇ ಪಿರಿಪಿರಿ ಮಾಡುತ್ತಿದ್ದ ರಾಯರು ಆ ದಿನ ವಾಕಿಂಗಿನಿಂದ ಬರುವಾಗ ಎರಡೆರಡು ಫೈವ್‌ ಸ್ಟಾರ್‌ ತಂದು ಮೊಮ್ಮಗನ ಕೈಯಲ್ಲಿಟ್ಟು ಆತನ ಜತೆ ಗುಟ್ಟಾಗಿ ಡೀಲ… ಕುದುರಿಸಿದರು. ಅಮ್ಮ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗುಟ್ಟಾಗಿ ಅಜ್ಜನಿಗೆ ಕಂಪ್ಯೂಟರ್‌ ಆಪರೇಟರ್‌ ಸರ್ವಿಸ್‌ ನೀಡುವ ಒಪ್ಪಂದಕ್ಕೆ ಸಹಿ ಹಾಕಿದ.  ಕೇವಲ ಸಹಿ ಹಾಕ್ಲಿಕ್ಕೇ ಎರಡು ಫೈವ್‌ ಸ್ಟಾರ್‌ ಗಿಟ್ಟಿಸಿಕೊಂಡ ಮೊಮ್ಮಗರಾಯ ಆಕುcವಲ… ಕೆಲಸ ಮಾಡಿಕೊಡಲು ಚಾರ್ಜು, ಸರ್ವಿಸ್‌ ಚಾರ್ಜು, ಸರ್ವಿಸ್‌ ಟ್ಯಾಕÕ…, ಸೆಸ್ಸು, ಗಿಸ್ಸು, ಜಿಎಸ್ಟಿ ಅಂತೆಲ್ಲಾ ಹೇಳಿಕೊಂಡು ಅಜ್ಜನ ಕೈಯಿಂದ ಇನ್ನೆರಡು ಫೈವ್‌ ಸ್ಟಾರ್‌ ಕಿತ್ತುಕೊಂಡ.

ಲಂಚ ಎಷ್ಟೇ ಆದರೂ ಪರವಾಗಿಲ್ಲ; ಗೂಸಾ ಎಷ್ಟೇ ತಿನಿಸಿದರೂ ತಮ್ಮ ಕಾರ್ಯ ಮಾತ್ರ ಸರಿಯಾಗಿ ಆಗಬೇಕೆಂಬ ಹಠಪ್ರೇರಿತ ರಾಯರು ಮುಂದಿನ ರವಿವಾರ ಮೊಮ್ಮಗನ ಜತೆಗೆ ಬಾಗಿಲು ಬಂದ್‌ ಮಾಡಿ ಕಂಪ್ಯೂಟರಿನ ಎದುರು ಕುಳಿತು ಆದಾಯ ಕರ ಇಲಾಖೆಯ ಜಾಲತಾಣ ತೆರೆದು ತಮ್ಮ ಪ್ಯಾನ್‌ ನಂಬರ್‌ ಹಾಗೂ ಪಾಸ್‌ವರ್ಡ್‌ ಕುಟ್ಟಿ ಖಾತೆಯ ಒಳ ಹೊಕ್ಕರು.

ಬಲಗಾಲಿಟ್ಟು ಖಾತೆಯ ಒಳಹೊಕ್ಕು ಒಂದೊಂದೇ ಎಂಟ್ರಿ ಮಾಡುತ್ತಾ ಹೋದಂತೆ ರಾಯರಿಗೆ ತಮ್ಮ ತಪ್ಪಿನ ಅರಿವಾಗತೊಡಗಿತು. ತಾವು ನೆನಸಿದಂತೆ ಯಾವುದೂ ಇರಲಿಲ್ಲ. ಎಲ್ಲ ಎಡವಟ್ಟಾಗತೊಡಗಿತು. ಹೆಜ್ಜೆಗೊಂದು ಗೊಂದಲವನ್ನು ಮೊಮ್ಮಗನ ಬಳಿ ತೋಡಿಕೊಂಡರೆ ತಾನು ಫೀಸು ತೆಗೆದುಕೊಂಡಿದ್ದು ಕಂಪ್ಯೂಟರ್‌ ಚಲಾಯಿಸಲು ಮಾತ್ರ, ಆದಾಯ ಕರದ ಗೊಂದಲಗಳನ್ನು ಪರಿಹರಿಸಲು ಅಲ್ಲ, ಬೇಕಿದ್ರೆ ನೀವೇ ಗೂಗಲ… ಮಾಡಿ ತಿಳ್ಕೊಳಿ ಎನ್ನುವ ಉಡಾಫೆಯ ಉತ್ತರವನ್ನು ಕೊಟ್ಟುಬಿಟ್ಟ. ಮಾಡೋದಿದ್ರೆ ಬೇಗ ಬೇಗ ಮಾಡಿ ನಂಗಂತೂ ಬೇರೆ ಕೆಲಸವಿದೆ ಎಂದು ರಾಯರನ್ನು ಕಂಪ್ಯೂಟರ್‌ ಭೂತದ ಎದುರು ಏಕಾಂಗಿಯಾಗಿ ಬಿಟ್ಟು ಮತ್ತೆರಡು ಫೈವ್‌ ಸ್ಟಾರ್‌ ಕಿಸೆಗೇರಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ. ಆವಾಗ ರಾಯರ ಪರಿಸ್ಥಿತಿಯು ಯುದ್ಧ ಭೂಮಿಯಲ್ಲಿ ಸಾರಥಿ ಶಲ್ಯನು ರಥ ಬಿಟ್ಟು ಹೊರನಡೆದ ಕರ್ಣನಂತಾಯಿತು.

Advertisement

ಬೇರೆ ದಾರಿ ಕಾಣದ ರಾಯರು ಕೊನೆಗೂ ಸೋಲೊಪ್ಪಿ ಕಂಪ್ಯೂಟರ್‌ ಆಫ್ ಮಾಡಿ ರಿಟರ್ನ್ ಫೈಲಿಂಗ್‌ ಎಪಿಸೋಡನ್ನು ಸೊಸೆಗೆ ಅರುಹಿ ತಮ್ಮ ಗೊಂದಲಗಳ ಪಟ್ಟಿಯನ್ನು ಸೊಸೆಯೆದುರು ಮಂಡಿಸಿ ಪರಿಹಾರಾರ್ಥಿಯಾಗಿ ಕೈಯೊಡ್ಡಿದರು.

ಗೊಂದಲ 1:
ರಾಯರು: ಆನ್‌-ಲೈನ್‌ ಫೈಲಿಂಗ್‌ ಕೆಲಸ ಆರಂಭಿಸಿದ ಒಡನೆಯೇ ಅಸೆಂಮೆಂಟ್  ವರ್ಷ ಯಾವುದು ಎಂಬುದಕ್ಕೆ ಆಯ್ಕೆಯ ಮೆನು ಸಿಗುತ್ತದೆ. ಇಲ್ಲಿ ಹಲವಾರು ವರ್ಷಗಳಿವೆ: 2013-14, 2014-15, 2016-17 ಅಲ್ಲದೆ 2017-18 ಕೂಡಾ ಇದೆ. ನಾವು ರಿಟರ್ನ್ ಫೈಲಿಂಗ್‌ ಮಾಡುವುದು ಕಳೆದ ವರ್ಷದ್ದು ಅಂದರೆ, 2016-17. ಈ 2017-18 ಎಲ್ಲಿಂದ ಬಂತು? ಈ ದೇಶದಲ್ಲಿ ಎಡ್ವಾನ್ಸ್‌ ಟ್ಯಾಕ್ಸ್‌ ನಂತೆ ಎಡ್ವಾನ್ಸ್‌ ರಿಟರ್ನ್ ಫೈಲಿಂಗ್‌ ಪದ್ಧತಿಯೂ ಇದೆಯೇ?

ಬಹೂರಾನಿ: ಮಾವಾ, ಈ ವಿಷಯವನ್ನು ಸ್ಪಷ್ಟವಾಗಿ ಕಳೆದ ಬಾರಿಯೇ ನಾನು ನಿಮಗೆ ಹೇಳಿದ್ದೆ . ನಾವು ಈವಾಗ ರಿಟರ್ನ್ ಫೈಲಿಂಗ್‌ ಮಾಡುವುದು ವಿತ್ತ ವರ್ಷ 2016-17. ಅದರ ಪರಿಶೀಲನಾ ವರ್ಷ ಅಥವಾ ಅಸೆಂಮೆಂಟ್  ವರ್ಷ 2017-18 ಆಗಿರುತ್ತದೆ. ನಾವು ಇಲ್ಲಿ ಈಗ ಆಯ್ಕೆ ಮಾಡಬೇಕಾಗಿರುವುದು ಅಸೆಂಮೆಂಟ್  ವರ್ಷ, ವಿತ್ತ ವರ್ಷ ಅಲ್ಲ. ಒಂದು ನಿರ್ದಿಷ್ಠ ವಿತ್ತ ವರ್ಷಕ್ಕೆ ಅದರ ಮುಂದಿನ ವರ್ಷವೇ ಅಸೆಂಮೆಂಟ್  ವರ್ಷ ಆಗಿರುತ್ತದೆ. ಈ ಬಗ್ಗೆ ಗೊಂದಲ ಮಾಡಿಕೊಂಡು ಹೋಗಿ ಹತ್ತು ಹಲವು ಸಮಸ್ಯೆಗಳಿಗೆ ಸಿಕ್ಕು ಹಾಕೊಂಡವರಿದ್ದಾರೆ. ಉದಾಹರಣೆಗೆ 2016-17 ಆಯ್ಕೆ ಮಾಡಿಕೊಂಡವರಿಗೆ ಹಳೆಯ ತೆರಿಗೆ ಕಾನೂನೇ ತಪ್ಪು ತಪ್ಪಾಗಿ ಅನ್ವಯವಾಗುತ್ತದೆ. ನಿಮ್ಮ ರಿಟರ್ನ್ ಫೈಲಿಂಗ್‌ ಸಂಪೂರ್ಣವಾಗಿ ಹಳ್ಳ ಹಿಡಿಯುತ್ತದೆ. ಹಾಗಾಗಿ ಸರಿಯಾದ ಅಸೆಂಮೆಂಟ್  ವರ್ಷವನ್ನು ಆಯ್ಕೆ ಮಾಡುವುದು ಅತ್ಯಗತ್ಯ ಮತ್ತು ಈ ಬಾರಿ ಅದು 2017-18.

ಗೊಂದಲ 2:
ರಾಯರು: ಇಡೀ ರಿಟರ್ನ್ ಫೈಲಿಂಗ್‌ ಪುಟಗಳನ್ನೆಲ್ಲಾ ಜಾಲಾಡಿ ನೋಡಿದೆ ಆದ್ರೆ ನಮ್ಮ ಹೌಸಿಂಗ್‌ ಲೋನ್‌ ಮೇಲಿನ ಬಡ್ಡಿಯನ್ನು ಎಲ್ಲಿ ನಮೂದಿಸಬೇಕೆಂದು ತಿಳಿಯಲಿಲ್ಲ. ಹತ್ತಾರು ಸೆಕ್ಷನ್‌ಗಳ ನಂಬರ್‌ ಉಳ್ಳ ಫಾರ್ಮಿನಲ್ಲಿ ಈ ಸುಡುಗಾಡು ಸೆಕ್ಷನ್‌ ಯಾವುದು?

ಬಹೂರಾನಿ: ಹ ಹ  (ನಗುತ್ತಾ) ಆ ಸುಡುಗಾಡು ಸೆಕ್ಷನ್‌ ನಂಬರ್‌ 24. ಇದನ್ನೂ ನಾನು ಸಂಕ್ಷಿಪ್ತವಾಗಿ ಹೇಳಿದ್ದೇನೆಂದೇ ನನ್ನ ನೆನಪು. ಇರಲಿ, ಈ ಹೌಸಿಂಗ್‌ ಲೋನಿನ ಬಡ್ಡಿಯ ಉಲ್ಲೇಖ ಇಡೀ ಆದಾಯ ಕರ ಆನ್‌-ಲೈನ್‌ ನಮೂನೆಯಲ್ಲಿ ಎಲ್ಲಿಯೂ ಬರುವುದಿಲ್ಲ. ಸರಕಾರದ ಜನಪರ ಸಾಹಿತ್ಯ ಅಂದ್ರೆ ಇದೇ. ಹಾಗಾಗಿ ಜನ ಸಾಮಾನ್ಯರಿಗೆ ಈ ಗೊಂದಲ ಮೂಡಿಸುವುದು ಸಹಜ. ಸ್ವಂತ ವಾಸವುಳ್ಳ ಮನೆಯ ಮೇಲಿನ ಗೃಹ ಸಾಲದ ಬಡ್ಡಿಯ ಅಂಶವನ್ನು Income from House Property ಕಾಲಮ್ಮಿನಲ್ಲಿ ಮೈನಸ್‌ ಚಿನ್ನೆ ಹಾಕಿ ನಮೂದಿಸಬೇಕು. ಅಂದರೆ ಸ್ವಂತ ವಾಸದ ಮನೆಯಲ್ಲಿ ಆದಾಯ ಶೂನ್ಯವಾದ ಕಾರಣ ಬಡ್ಡಿ ಪಾವತಿಯು ಮೈನಸ್‌ ಅಥವಾ ನಷ್ಟದ ಮೊತ್ತವಾಗಿರುತ್ತದೆ. ಒಂದು ವೇಳೆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಲ್ಲಿ ಬಾಡಿಗೆ ಆದಾಯದಿಂದ ಮುನಿಸಿಪಲ… ಟ್ಯಾಕ್ಸ್‌ ಕಳೆದು, ನಿರ್ವಹಣೆಗಾಗಿ 30% ವೆಚ್ಚ ಕಳೆದು, ಸಾಲದ ಮೇಲಿನ ಬಡ್ಡಿಯನ್ನು ಕಳೆದು ಉಳಿದ ಮೊತ್ತವನ್ನು ಪ್ಲಸ್‌ ಅಥವಾ ಮೈನಸ್‌ ಸಂಖ್ಯೆಯಾಗಿ ತುಂಬಬೇಕು. ಇದು ಗೃಹ ಸಾಲದ ಬಡ್ಡಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಕ್ರಮ. ಇನ್ನು, ಗೃಹಸಾಲದ ಅಸಲು ಪಾವತಿಯನ್ನು ಅಲ್ಲೇ ಕೆಳಗೆ ಕೊಟ್ಟಿರುವ 80ಸಿ ಸೆಕ್ಷನ್‌ ಒಳಗೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

ಗೊಂದಲ 3:
ರಾಯರು: ಮೆಡಿಕಲ… ಇನ್ಶೂರೆನ್ಸ್‌ ಪ್ರೀಮಿಯಂ 80ಸಿ ಸೆಕ್ಷನ್‌ ಅಡಿಯಲ್ಲಿ ಬರುವುದಿಲ್ಲವಂತೆ. ಹಾಗಾದರೆ ಅದನ್ನು ಎಲ್ಲಿ ಹಾಕುವುದು? ಅದಕ್ಕೆ ಟ್ರೀಟ್‌ಮೆಂಟ್‌ ಹೇಗೆ?

ಬಹೂರಾನಿ: ಮೆಡಿಕಲ… ಇನ್ಶೂರೆನ್ಸ್‌ ಬರುವುದು ಸೆಕ್ಷನ್‌ 80ಡಿ ಅಡಿಯಲ್ಲಿ, 80ಸಿ ಅಡಿಯಲ್ಲಿ ಅಲ್ಲ. ಹಾಗೂ ಅದಕ್ಕೆ 80ಸಿ ಮೀರಿದ ವಿನಾಯಿತಿ ಇದೆ. ಸೆಕ್ಷನ್‌ 80ಸಿ ಅಡಿಯಲ್ಲಿ ಒಂದಷ್ಟು ಹೂಡಿಕೆ/ವೆಚ್ಚಗಳಿಗೆ ವಾರ್ಷಿಕ ರೂ 1,50,000ದ  ತೆರಿಗೆ ವಿನಾಯಿತಿ ಇದೆಯಾದರೆ ಇಲ್ಲಿ 80ಡಿ ಅಡಿಯಲ್ಲಿ ಅದಕ್ಕೆ ಹೊರತಾಗಿ ಪ್ರತ್ಯೇಕವಾಗಿ ರೂ 25,000ದ ತೆರಿಗೆ ವಿನಾಯಿತಿ ಇದೆ. ಹಿರಿಯ ನಾಗರಿಕರಿಗೆ ಈ ಮಿತಿ ರೂ 30,000.

ಗೊಂದಲ 4:
ರಾಯರು: ಸರಿ ಬಿಡು. ಈವಾಗಿನ್ನು, ನಮ್ಮ SB/Fd ಖಾತೆಗಳ ಬಡ್ಡಿಯನ್ನು ಯಾವ ರೀತಿ ತೋರಿಸಬೇಕು? ಅದಕ್ಕೆ ವಿನಾಯಿತಿ ಗಿನಾಯಿತಿ ಏನೂ ಇಲ್ವಾ?

ಬಹೂರಾನಿ: ಮಾವಾ, ಈ Sb/Fd – ಇವೆರಡೂ ಬಡ್ಡಿಗಳನ್ನು ಒಟ್ಟು ಸೇರಿಸಿ Other Income ಅಡಿಯಲ್ಲಿ ತೋರಿಸಬೇಕು. ಅದರಲ್ಲಿ ಎಸಿº ಖಾತೆಯ ಬಡ್ಡಿಯನ್ನು ಅಲ್ಲೇ ಕೆಳಗೆ ವಿನಾಯಿತಿ ಪಟ್ಟಿಯಲ್ಲಿ ಸೆಕ್ಷನ್‌ 80ಟಿಟಿಎನಲ್ಲಿ ಪುನಃ ತೋರಿಸಬೇಕು. ಅದಕ್ಕೆ ವಾರ್ಷಿಕ ರೂ 10,000 ದವರೆಗೆ ವಿನಾಯಿತಿ ಇದೆ.  Fd ಖಾತೆಯ ಬಡ್ಡಿಯ ಮೇಲೆ ಯಾವುದೇ ವಿನಾಯಿತಿ ಇಲ್ಲ.

ಗೊಂದಲ 5:
ರಾಯರು: ಟ್ಯಾಕ್ಸ್‌ ಪೇಜಿಗೆ ಹೋದರೆ ಅಲ್ಲಿ ಯಾವ್ಯಾವುದೋ ಬ್ಯಾಂಕ್‌ ಹೆಸರಿನಲ್ಲಿ ಬಡ್ಡಿ ಹಾಗೂ ಟ್ಯಾಕ್ಸ್‌ ಪಾವತಿಯ ವಿವರಗಳು ಕಾಣಿಸಿಕೊಳ್ಳುತ್ತದಲ್ವಾ? ಅದೆಲ್ಲಿಂದ ಬಂತು? ಅದರ ಬಗ್ಗೆ ನಾವೇನು ಮಾಡಾಣ?

ಬಹೂರಾನಿ: ಓ ಅದಾ? ಅದು ಇಲಾಖೆಯ ಕಂಪ್ಯೂಟರಿಗೆ ಬ್ಯಾಂಕುಗಳಿಂದ ನೇರವಾಗಿ ಸಿಕ್ಕ ಮಾಹಿತಿ. ಟಿಡಿಎಸ್‌ ಕಡಿತಗೊಂಡ ಬಡ್ಡಿ ಆದಾಯ ಮತ್ತು ಟಿಡಿಎಸ್‌ ಕಡಿತಗೊಂಡ ಸ್ಯಾಲರಿ/ಪೆನ್ಸ್ನ್‌ ಆದಾಯ ಇತ್ಯಾದಿಗಳ ಮಾಹಿತಿ ಆ ಪುಟದಲ್ಲಿ ಸ್ವಯಂ ತುಂಬಿರುತ್ತವೆ. ಅಂತಹ ಆದಾಯದ ವಿವರವನ್ನು ನಿಮ್ಮ ಲೆಕ್ಕದಲ್ಲೂ ತೋರಿಸಲು ಮರೆಯದಿರಿ. ತೋರಿಸದೆ ಹೋದರೂ ಇಲಾಖೆಯ ಕಂಪ್ಯೂಟರ… ಅದನ್ನು ತೆಗೆದುಕೊಂಡೇ ಅಸೆಂಮೆಂಟ್ ನಡೆಸುತ್ತದೆ ಮತ್ತು ಅಗತ್ಯ ಬಂದಲ್ಲಿ ಹೆಚ್ಚುವರಿ ಕರಕ್ಕೆ ಡಿಮಾಂಡ್‌ ನೋಟಿಸು ಜಾರಿ ಮಾಡುತ್ತದೆ.

ರಾಯರು: ಹೌದಾ? ಇಲಾಖೆಯ ಕಂಪ್ಯೂಟರಿಗೆ ಅವೆಲ್ಲಾ ಗೊತ್ತಗುತ್ತಾ? ಇನ್ನು ಏನೇನು ಗೊತ್ತಾಗುತ್ತೆ ಆ ನಿನ್ನ ಇಲಾಖೆಯ ಕಂಪ್ಯೂಟರಿಗೆ?

ಬಹೂರಾನಿ: (ನಗುತ್ತಾ..) ಬಹಳಷ್ಟು ಗೊತ್ತಾಗುತ್ತೆ ಮಾವಾ ಆ ಕಂಪ್ಯೂಟರಿಗೆ. ನೀವು ಪ್ಯಾನ್‌ ನಂಬರ್‌ ಕೊಟ್ಟು ಊರೆಲ್ಲಾ ಮಾಡಿದ ವ್ಯವಹಾರಗಳೆಲ್ಲಾ ಅದಕ್ಕೆ ಗೊತ್ತಾಗುತ್ತೆ. ಅದರಲ್ಲಿ ಕರಾರ್ಹ ವ್ಯವಹಾರಗಳಿದ್ದರೆ ಅದನ್ನು ತೋರಿಸದೆ ಬೇರೆ ದಾರಿ ಇಲ್ಲ. ಅಡಗಿಸಿದರೆ ಒಂದಲ್ಲ ಒಂದು ದಿನ ಬಡ್ಡಿ/ದಂಡ ಸಮೇತ ಕರ ಕಟ್ಟಲು ತಯಾರಾಗಿರಿ. ನಿಮ್ಮ ಖಾತೆಯ ಒಳಗಡೆ ಫಾರ್ಮ್ 26ಎಎಸ್‌ ಎನ್ನುವ ಗುಂಡಿ ಒತ್ತಿದರೆ ಅದು ನಿಮ್ಮ ಬಹಳಷ್ಟು  ಆದಾಯ/ಟಿಡಿಎಸ್‌ ವಿವರಗಳನ್ನು ತೋರಿಸುತ್ತದೆ. ಅವೆಲ್ಲಾ ನಿಮ್ಮ ಆದಾಯ ಸಲ್ಲಿಕೆಯಲ್ಲಿ ಸೇರಿರಲೇಬೇಕು. ಅಡಗಿಸಿದರೆ ನೋಟಿಸ್‌ ಬರುವುದು ಗ್ಯಾರಂಟಿ. ಅದೂ ಅಲ್ಲದೆ ಬ್ಯಾಂಕುಗಳಲ್ಲಿ ನಡೆಸಿದ ದೊಡ್ಡ ಮೊತ್ತದ ವ್ಯವಹಾರಗಳೆಲ್ಲವೂ ನಿಮ್ಮ ಪ್ಯಾನ್‌ ನಂಬರ್‌ ಮೂಲಕ ಇಲಾಖೆಗೆ ತಿಳಿದಿರುತ್ತದೆ. ಅದರಲ್ಲಿ ಕರಾರ್ಹ ವ್ಯವಹಾರ ಇದ್ದಲ್ಲಿ 3-4 ವರ್ಷಗಳ ಬಳಿಕ ನಿಮಗೆ ಇಲಾಖೆಯಿಂದ ಲವ್‌ ಲೆಟರ್‌ ಬರುವುದು ಗ್ಯಾರಂಟಿ. ಈಗಾಗಲೇ ಊರಿಡೀ ನೋಟಿಸ್‌ ಹಂಚಿಕೆಯಾಗಿದೆ. ಮಂದಿ ಬಡ್ಡಿ ಸಹಿತ ಕರ ಕಟ್ಟುತ್ತಿದ್ದಾರೆ.

ಗೊಂದಲ 6:
ರಾಯರು: ಕೊನೆಯ ಪುಟದಲ್ಲಿ Tax payable ಅಂತ ಬರುತ್ತಲ್ವಾ? ಈಗ ಅದನ್ನು ಹಿಡ್ಕೊಂಡು ಎಂತ ಮಾಡುವುದು?

ಬಹೂರಾನಿ: ಕರ ಬಾಕಿ ಇದ್ದಲ್ಲಿ ಮಾತ್ರ ಅದು ಬರುತ್ತದೆ. ಅಷ್ಟು ಮೊತ್ತದ ಕರ ಈವಾಗ ಕಟ್ಟಬೇಕು. ಬ್ಯಾಂಕಿಗೆ ಹೋಗಿ ಚಲನ್‌ ತುಂಬಿ ಕಟ್ಟಬಹುದು ಅಥವಾ ಕರ ಇಲಾಖೆಗೆ ನೇರವಾಗಿ ಇ-ಪಾವತಿ ಮಾಡಬಹುದು. ಅದಕ್ಕಾಗಿ ಈ ಕೊಂಡಿ ಬಳಸಬಹುದು.
https://onlineservices.tin.egov&nsdl.com/etaxnew/tdsnontds.jsp ಅಲ್ಲಿ ಚಲನ್‌ ನಂ ITNS-280 ಬಳಸಿ.  ಕರ ಕಟ್ಟಿದ ಬಳಿಕ ಅದರ ಬಿಎಸ್‌ಆರ್‌ ಕೋಡ್‌ ಹಾಗೂ ಸೀರಿಯಲ… ನಂಬರನ್ನು ಸೆಲ್ಫ್… ಅಸೆಂಮೆಂಟ್ ಟ್ಯಾಕ್ಸ್‌ ಎಂಬುದಾಗಿ ಟ್ಯಾಕ್ಸ್‌ ಡಿಟೈಲ್ಸ… ಪುಟದಲ್ಲಿ ತುಂಬಬೇಕು. ಆ ಬಳಿಕ ರಿಟರ್ನ್ ಫೈಲಿಂಗ್‌ ಸಬಿಟ್‌ ಮಾಡಬೇಕು. ಅದು ಪ್ರೊಸೀಜರ್‌.

ಇಲ್ಲಿಗೆ ರಾಯರ ಗೊಂದಲಗಳು ಒಂದು ಲೆವೆಲಿಗೆ ಪರಿಹಾರವಾದಂತಾಯಿತು. ಬಹೂರಾನಿಯ ಅಗಾಧ ಜ್ಞಾನಕ್ಕೆ ರಾಯರು ಸಂತೋಷ ಪಟ್ಟುಕೊಂಡರು. ತಮ್ಮೆರಡೂ ಕೈಗಳನ್ನು ಸೊಸೆಯ ತಲೆಯ ಮೇಲಿಟ್ಟು ಮನಸಾ ಆಶೀರ್ವಾದ ಮಾಡಿದರು. ಇವನೊಬ್ಬನಿದ್ದಾನೆ ನೋಡಿ ನಾಲಾಯಕ್ಕು ಅಂತ ಮಗನ ಬಗ್ಗೆ ಬೇಸರದ ದನಿ ಅವರನ್ನು ಹಿಂಡದಿರಲಿಲ್ಲ. ಈ ಎಲ್ಲ ವಿದ್ಯಾಮಾನಗಳನ್ನು ಪಕ್ಕದ ಸೋಫಾದಲ್ಲಿ ಚಡಪಡಿಸುತ್ತಾ ಗಮನಿಸುತ್ತಿದ್ದ  ಮಗರಾಯನಿಗೆ ಮಂಡೆಬಿಸಿ ಏರತೊಡಗಿತು. ಇನ್ನು ಮುಂದಿನ  ನಾಲ್ಕಾರು ದಿನಗಳಲ್ಲಿ ರಾಯರು ಆತನಿಗೆ ತೋರಲಿರುವ ಸಿಡುಕು ಮೋರೆಯ ಬಣ್ಣವನ್ನು ನೆನೆಸಿಯೇ ಮಗರಾಯ ಕಂಗಾಲಾದ.

(ವಿ.ಸೂ: ಆನ್‌-ಲೈನ್‌ ಐಟಿಆರ್‌-1 ತುಂಬುವುದರ ಬಗ್ಗೆ ಇರುವ ಗೊಂದಲಗಳನ್ನು ಇ-ಮೈಲ್‌ ಮಾಡಿದರೆ ಆಯ್ದ ಕೆಲವನ್ನು ಪರಿಹಾರ ಸಮೇತ ಮುಂದಿನ ವಾರ ಪ್ರಕಟಿಸಲಾಗುವುದು)

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next