Advertisement

ಗುರುಗುಂಟಿರಾಯರ ಬೋನಸ್‌ ಅಧ್ಯಯನ 

06:02 PM Mar 23, 2019 | Team Udayavani |

ಒಂದು ಕಂಪೆನಿ ಗಳಿಸಿದ ಲಾಭವನ್ನು ಅದಕ್ಕಾಗಿ ದುಡಿದ ಕಾರ್ಮಿಕರೊಡನೆ ಹಂಚಿಕೊಳ್ಳುವುದು ಈ ಕಾನೂನಿನ ಮೂಲ ಉದ್ದೇಶ. ಇದು ಲಾಭಾಂಶದ ಮೇರೆಗೆ ಅಥವಾ ಉತ್ಪಾದನೆ ಮೇರೆಗೂ ಇರಬಹುದು. ಇದು ವೈಯಕ್ತಿಕ ಸಾಧನೆಯ ಮೇಲೆ ನಿರ್ಧಾರವಾಗುವುದಿಲ್ಲ.

Advertisement

ಬಹೂರಾಣಿಗೆ ಒಮ್ಮೊಮ್ಮೆ ಈ ಜಗಮೊಂಡ ರಾಯರ ವರ್ತನೆಯ ಮೇಲೆ ಜೋರಾಗಿ ಸಿಟ್ಟು ಬರುವುದುಂಟು. ಆದರೆ ತನ್ನ ಗಂಡನ ಹತ್ತಿರ ಜಗಳ ಕುಟ್ಟಿದಂತೆ ಮಾವಯ್ಯನವರ ಹತ್ತಿರ ಕಾದಾಡಲು ಸಾಧ್ಯವೇ? ಗಂಡ ಎಂಬ ಪ್ರಾಣಿ ಆಗಿದ್ದರೆ ಜೋರಾಗಿ ಕೂಗಾಡಿ ಕಣ್ಣೀರು ಹರಿಸಿ (ಯಾರ?) ಇಲ್ಲದ ರಾದ್ಧಾಂತ ಮಾಡಿ ಅಪ್ಪಟ ಗಾಂಧಿ ಮಾರ್ಗದಲ್ಲಿಯೇ ಅಸಹಕಾರ ಚಳವಳಿಗೆ ಇಳಿಯಬಹುದಿತ್ತು. ಆದರೆ ಈ ಪ್ರಾಣಿ ಗಂಡ ಅಲ್ವಲ್ಲ? ಗುರುಗುಂಟಿರಾಯರಲ್ವೇ? ಹೆಸರು ಕೇಳಿದರೇನೇ ಮೂರು ಲೋಕ ನಡುಗುವ ರಾಯರ ಬಳಿ ಜಗಳ ಮಾಡುವುದು ಅಂದ್ರೆ ಅದೇನು ತಮಾಷೆಯಾ? ಇಂತಹ ಸಂದರ್ಭಗಳಲ್ಲಿ ನಮ್ಮ ಕುಶಾಗ್ರಮತಿ ಬಹೂರಾಣಿಯು ರಾಯರ ತಲೆ ಮೇಲೆ ಯಾವುದಾದರೊಂದು ಕ್ಲಿಷ್ಟ ಸಮಸ್ಯೆಯನ್ನು ಎಳೆದು ಹಾಕಿ ಅವರು ಅದರೊಡನೆ ಗುದ್ದಾಡುವುದನ್ನು ನೋಡುತ್ತಾ ತಣ್ಣನೆ ಆನಂದಿಸುತ್ತಾಳೆ. ಅದರಲ್ಲೇ ಅವಳ ಜಗಳ, ಕೋಪ, ಸೇಡು ಎಲ್ಲಾ ತೀರುತ್ತದೆ. ಮತ್ತೆ ನೇರವಾಗಿ ಅವರನ್ನು ಎದುರು ಹಾಕಿಕೊಳ್ಳುವುದು ಮೂರ್ಖತನವೇ ಸರಿ.

ಇದೇ ಮೊನ್ನೆ ಬಹೂರಾಣಿಯ ಮೂಡಾಫ್ ಆಗಿರುವ ಸುಸಂದರ್ಭದಲ್ಲಿ ಗುರುಗುಂಟಿರಾಯರು ತಮ್ಮ ಮಾಮೂಲಿನ ಕಿರಿಕಿರಿ ಶುರುವಿಟ್ಟರು. ಚಾ ಕೊಟ್ಟದ್ದು ಸರಿಯಾಗಲಿಲ್ಲ, ಯಾವ ಪೆಟ್ಟಿಗೆಯಲ್ಲಿ ಯಾವ ಮಾತ್ರೆ ಇಟ್ಟದ್ದು? ಮೊಮ್ಮಗನಿಗೆ ಜೋರು ಮಾಡಿದ್ದು ಯಾಕೆ? ತಾಳ್ಮೆಯಿಂದ ವ್ಯವಹರಿಸಬಹುದಿತ್ತಲ್ವ? – ಇವೆಲ್ಲಾ ರಾಯರ ಮಾಮೂಲಿನ ಕಿರಿಕಿರಿಯ ಸಿಲೆಬಸ್‌! ಹೀಗೇ ಯಾವುದೋ ಒಂದು ಚಾಪ್ಟರ್‌ ಹಿಡ್ಕೊಂಡು ಮೆತ್ತಗೆ ಆಲಾಪನೆ ಆರಂಭಿಸಿದ್ದರಷ್ಟೆ ರಾಯರು. ಆಫೀಸಿನಲ್ಲೂ ದಣಿದು ಮನೆಗೆ ಬಂದು ಡಬ್ಬಲ್‌ ಡ್ನೂಟಿ ಮಾಡಬೇಕಾದ ಕರ್ಮಕ್ಕೆ ಹಳಿಯುತ್ತಾ ತಲೆನೋವು ಬೇರೆ ಕಾಡುತ್ತಿದ್ದ ಬಹೂರಾಣಿಗೆ ಇವತ್ತಿನ ವರಾತ ತಡೆಯಲಾಗಲಿಲ್ಲ. ಆದರೂ ನೇರವಾಗಿ ಏನೂ ಹೇಳುವಂತಿಲ್ಲವಲ್ಲ? ಒಳಗೊಳಗೆ ಬುಸುಗುಟ್ಟುತ್ತಿದ್ದರೂ ಕೋಪ ಸಂದಾಯನಾರ್ಥಾಯ ಹೊರಗಿನಿಂದ ಸಿಹಿಜೇನಿನಂತೆ ಮಾತು ಉದುರಿಸಿದಳು. ನಮ್‌ ಕಂಪೆನಿಯವ್ರು ನಂಗೆ ದೀಪಾವಳಿ ಬೋನಸ್ಸೇ ಕೊಡ್ತಿಲ್ಲ ಮಾವಯ್ನಾ. ಬೇರೆ ಎಲ್ರಿಗೂ ಕೊಡ್ತಿದಾರೆ. ಕೇಳಿದ್ರೆ ನಿಮ್ಗೆ ಎಲಿಜಿಬಿಲಿಟಿ ಇಲ್ಲ ಅಂತ ದಬಾಯ್ಸಿ ಬಿಟ್ರಾ ಮಾವಾ. ನೀವು ಒಂದ್ಸಲ್ಪ ನೋಡಿ ಹೇಳ್ತೀರಾ ರೂಲ್ಸ… ಏನು ಅಂತ? ಹಬ್ಬ ಅಂದಮೇಲೆ ಒಂದಿಷ್ಟು ಬೋನಸ್‌ ಬೇಡ್ವಾ? ಸೊಸೆಯ ದುಃಖಭರಿತ ಮಧುರವಾಣಿಯನ್ನೂ, ಬೇಸರದ ಕಾರ್ಮೋಡ ಮುಸುಕಿದ ವದನಾರವಿಂದವನ್ನೂ ಕಂಡ ರಾಯರ ಮನಸ್ಸು ಆಷಾಡದ ಮೋಡದಂತೆ ಕರಗಿ ನೀರಾಯ್ತು. ಒಂದು ಪಿಲೋ ಸೈಜಿನ ಬೋನಸ್‌ ಆ್ಯಕ್ಟ್ 1965 ಎಂಬ ಕೈಪಿಡಿ ಯನ್ನು ರಾಯರ ಕೈಯಲ್ಲಿ ಪಿಡಿಸಿ ತಾನು ಸೀದಾ ಬೆಡ್ರೂಮಿಗೆ ಹೋಗಿ ಎರಡು ಮಾತ್ರೆ ನುಂಗಿ ಉಸ್ಸಪ್ಪ ಅಂತ ನಿರಾಳಾಗಿ ಬಿದ್ದುಕೊಂಡಳು ಬಹೂರಾಣಿ. ಈ ಅಯೋಗ್ಯ ಮಗ ಒಬ್ಬ ಸರಿ ಇದ್ದಿದ್ರೆ ಇದೆಲ್ಲಾ ಅವ°ತ್ರ ಮಾಡಿಸºಹುದಿತ್ತು. ಏನ್‌ ಮಾಡೊದು? ಎಲ್ಲಾ ನಾನೇ ಮಾಡ್ಬೇಕು ಕರ್ಮ ಅನ್ನುತ್ತಾ ರಾಯರು ಸೊಸೆ ಕೊಟ್ಟ ತಲೆದಿಂಬು ಓಪನ್‌ ಮಾಡಿ ಬೋನಸ್‌ ಆ್ಯಕ್ಟ್ಬಗ್ಗೆ ಸೀರಿಯಸ್‌ ಅಧ್ಯಯನ ಆರಂಭಿಸಿದರು.

ಯಾವುದೇ ವಿಚಾರ ತೆಗೆದುಕೊಳ್ಳಿ, ಅದು ಎರಡನೆಯ ಮಹಾಯುದ್ಧದ ಸಮಯದಲ್ಲಿ ಆರಂಭವಾದದ್ದು ಅನ್ನುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಆರಂಭವಾದದ್ದು ಯುದ್ಧ ಮಾತ್ರವೇ? ನಮ್ಮ ಜನರು ಯುದ್ಧ ಬಿಟ್ಟು ಬೇರೇನೂ ಮಾಡಲೇ ಇಲ್ಲವೇ? ಊಟಾನಾದ್ರೂ ಮಾಡಿದಾರೋ ಇಲ್ವೋ? ಎಂಬ ಸಂಶಯ ಕಾಡುತ್ತದೆ. ಪ್ರಾಯಶಃ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಆರಂಭಗೊಂಡ ಏಕೈಕ ಉತ್ತಮ ವಿಚಾರ ಎಂದರೆ ನೌಕರರಿಗೆ ಕೊಡುವ ಬೋನಸ್‌ ಮಾತ್ರ ಅಂತ ಕಾಣುತ್ತದೆ!!! 1917ರಲ್ಲಿ ಗುಜರಾತಿನ ಬಟ್ಟೆಯ ಉದ್ಯಮದಲ್ಲಿ ನೌಕರರಿಗೆ ಕಂಪೆನಿಯ ಲಾಭಾಂಶದ ಪಾಲು ಎಂದು ಶೇ.10 ಬೋನಸನ್ನು ಮೊತ್ತ ಮೊದಲ ಬಾರಿಗೆ ನೀಡಲಾಯಿತಂತೆ. ಆ ಬಳಿಕ ಸ್ವತಂತ್ರ ಭಾರತದಲ್ಲಿ ಪೇಯೆ¾ಂಟ್‌ ಆಫ್ ಬೋನಸ್‌ ಆ್ಯಕ್ಟ್ ಎಂಬ ಕಾನೂನು 1965ರಲ್ಲಿ ಅಸ್ತಿತ್ವಕ್ಕೆ ಬಂತು. ಆ ಕಾನೂನೇ ಈ ತನಕ ಹಲವಾರು ಪರಿಷ್ಕರಣೆಯೊಂದಿಗೆ ಊರ್ಜಿತದಲ್ಲಿದೆ. 

ಉದ್ದೇಶ 
ಒಂದು ಕಂಪೆನಿ ಗಳಿಸಿದ ಲಾಭವನ್ನು ಅದಕ್ಕಾಗಿ ದುಡಿದ ಕಾರ್ಮಿಕರೊಡನೆ ಹಂಚಿಕೊಳ್ಳುವುದು ಈ ಕಾನೂನಿನ ಮೂಲ ಉದ್ದೇಶ. ಇದು ಲಾಭಾಂಶದ ಮೇರೆಗೆ ಅಥವಾ ಉತ್ಪಾದನೆ/ಉತ್ಪಾದಕತೆ ಮೇರೆಗೂ ಇರಬಹುದು. ಇದು ವೈಯಕ್ತಿಕ ಸಾಧನೆ/ಕಾರ್ಯಕ್ಷಮತೆಯ ಮೇಲೆ ನಿರ್ಧಾರವಾಗುವುದಿಲ್ಲ. ಬೋನಸ್‌ ಎಂಬುದು ಸಮಷ್ಠಿಯಲ್ಲಿ ಶೇಕಡಾವಾರು ಲೆಕ್ಕದಲ್ಲಿ ಎಲ್ಲರಿಗೂ ಸಮಾನವಾಗಿ ಸಲ್ಲುವ ಬಾಬ್ತು. 

Advertisement

ಯಾರಿಗೆ ಅನ್ವಯ?
ಯಾವುದೇ ಕಾರ್ಖಾನೆ ಮತ್ತು ವರ್ಷದ ಯಾವುದೇ ಒಂದು ದಿನವಾದರೂ 20 ಜನರಿಂದ ಹೆಚ್ಚು ಉದ್ಯೋಗಿಗಳಿರುವ ಯಾವುದೇ ಸಂಸ್ಥೆಗೆ ಇದು ಅನ್ವಯ. ಅದಲ್ಲದೆ 10 ಜನರಿಂದ ಜಾಸ್ತಿ ಉದ್ಯೋಗಿಗಳಿರುವ ಯಾವುದೇ ಸಂಸ್ಥೆಯನ್ನು ಇದರಡಿಯಲ್ಲಿ ತರಲು ಸರಕಾರಕ್ಕೆ ಹಕ್ಕು ಇರುತ್ತದೆ. ಯಾವುದೇ ಸಂಸ್ಥೆಗೆ ನಿರ್ದಿಷ್ಟ ವಿನಾಯತಿ ನೀಡುವ ಹಕ್ಕೂ ಸರಕಾರಕ್ಕೆ ಇರುತ್ತದೆ. ಒಂದು ಬಾರಿ ಬೋನಸ್‌ ಕಾಯ್ದೆಯಡಿಯಲ್ಲಿ ಬಂದರೆ ಆಮೇಲೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾದರೂ ಬೋನಸ್‌ ಕಾಯ್ದೆಯಿಂದ ಸಂಸ್ಥೆ ಹೊರಬರಲಾಗುವುದಿಲ್ಲ. ಅಲ್ಲದೆ, ಇಲ್ಲಿ ಸಂಸ್ಥೆ ಅಂದರೆ ಒಂದು ಸಂಸ್ಥೆ, ಅದರ ಸ್ವಾಯತ್ತೆಯ ಸಂಸ್ಥೆ, ಬ್ರಾಂಚುಗಳು, ಡಿಪಾರ್ಟ್‌ಮೆಂಟುಗಳು ಇತ್ಯಾದಿ ಎಲ್ಲದರ ಸಮಷ್ಠಿ. 

ಇಂತಹ ಸಂಸ್ಥೆಗಳಲ್ಲಿ ಮಾಸಿಕ ರೂ. 21,000 (1.4.2014 ರಿಂದ ಪರಿಷ್ಕರಿಸಲ್ಪಟ್ಟ ಮಿತಿ) ಕ್ಕಿಂತ ಕಡಿಮೆ ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಈ ಕಾನೂನು ಅನ್ವಯವಾಗುತ್ತದೆ. (ಈ ಮಿತಿ ಆ ಮೊದಲು ರೂ. 10,000 ಆಗಿತ್ತು) ಅಲ್ಲದೆ ಅವರು ಒಂದು ವರ್ಷದಲ್ಲಿ ಕನಿಷ್ಠ 30 ದಿನವಾದರೂ ಕೆಲಸ ಮಾಡಿರಬೇಕು. ಉಳಿದ ಉದ್ಯೋಗಿಗಳಿಗೆ ಬೋನಸ್‌ ನೀಡುವುದು ಕಡ್ಡಾಯವಲ್ಲ. ಇಲ್ಲಿ ಸಂಬಳ ಅಂದರೆ, ಬೇಸಿಕ್‌+ಡಿಎ ಮಾತ್ರ ತೆಗೆದುಕೊಳ್ಳಬೇಕು. ಇತರ ಸಂಬಳ/ಭತ್ತೆಗಳು ಇಲ್ಲಿ ಲೆಕ್ಕಕ್ಕಿಲ್ಲ.

ಬೋನಸ್‌ ಕಾನೂನಿನಲ್ಲಿ ಒಬ್ಬ ಉದ್ಯೋಗಿಯ ದರ್ಜೆ ಮುಖ್ಯವಾಗುವುದಿಲ್ಲ. ಆತ ಕೂಲಿಯವ, ಕಾರ್ಮಿಕ, ಗುಮಾಸ್ತ, ಸೂಪರ್‌ವೈಸರ್‌, ಮ್ಯಾನೇಜರ್‌ ಇತ್ಯಾದಿ ತಾರತಮ್ಯದೊಂದಿಗೆ ಬೋನಸ್‌ ಅರ್ಹತೆ ಬದಲಾಗುವುದಿಲ್ಲ. ಸಂಬಳದ ಮಿತಿಯೊಳಗೆ ಬರುವ ಪ್ರತಿಯೊಬ್ಬ ಉದ್ಯೋಗಿಯೂ ಕಡ್ಡಾಯವಾಗಿ ಬೋನಸ್‌ಗೆ ಅರ್ಹನಾಗುತ್ತಾನೆ, ಸೀಸನಲ್‌ ಉದ್ಯೋಗಿಗಳೂ ಸಹಿತ. ಕೇಂದ್ರ ಮತ್ತು ರಾಜ್ಯ ಸರಕಾರದ ಉದ್ದಿಮೆಗಳು, ಶೈಕ್ಷಣಿಕ ಸಂಸ್ಥೆಗಳು, ಎಲ್ಲೆ„ಸಿ, ಸಾಮಾನ್ಯ ವಿಮೆ, ಕೆಲವು ನಿರ್ದಿಷ್ಟ ವಿತ್ತೀಯ ಸಂಸ್ಥೆಗಳು ಇತ್ಯಾದಿ ಕೆಲವು ಸಂಸ್ಥೆಗಳು ಈ ಕಾನೂನಿನಡಿಯಲ್ಲಿ ಬರುವುದಿಲ್ಲ. (ಇದರ ಪಟ್ಟಿ ಆ್ಯಕ್ಟ್‌ನಲ್ಲಿ ನೀಡಲಾಗಿದೆ). ಯಾವುದೇ ಹೊಸ ಸಂಸ್ಥೆಗೆ ಕಾರ್ಯಾರಂಭ ಮಾಡಿದ ವರ್ಷದ ನಂತರದ 5 ವರ್ಷಗಳ ಕಾಲ ಬೋನಸ್‌ ನೀಡುವಿಕೆಯಿಂದ ವಿನಾಯತಿ ಇರುತ್ತದೆ. ಮೋಸ, ಕಂಪೆನಿಯ ಒಳಗೆ ಗಲಭೆ, ಹಿಂಸೆ, ಕಂಪೆನಿಯ ದುಡ್ಡನ್ನು ಅಥವಾ ಸೊತ್ತನ್ನು ಕಳ್ಳತನ, ನಾಶ ಇತ್ಯಾದಿ ಮಾಡಿದವರಿಗೆ ಬೋನಸ್‌ ಅನ್ನು ನಿರಾಕರಿಸಬಹುದಾಗಿದೆ. 

ಬೋನಸ್‌ ಎಷ್ಟು? 
ಬೋನಸ್‌ ನೀಡುವಲ್ಲಿ ಕನಿಷ್ಠ ಗರಿಷ್ಟ ಮಿತಿಗಳಿವೆ. ಸಂಬಳದ ಶೇ.8.33 ಕನಿಷ್ಠ ಬೋನಸ್‌ ಮೊತ್ತವಾದರೆ ಶೇ.20 ಗರಿಷ್ಟ ಮೊತ್ತ. ಇಲ್ಲಿ ಬೋನಸ್‌ ಅರ್ಹತೆ ಬೇರೆ; ಬೋನಸ್‌ ಮೊತ್ತ ಬೇರೆ. ಮಾಸಿಕ ಸಂಬಳದ ಮಿತಿ ರೂ. 21,000 ಆದರೂ ಬೋನಸ್‌ ಮಿತಿ ರೂ. 7,000ದ ಮೇಲೆ ಮಾತ್ರವೇ ಲೆಕ್ಕ ಹಾಕಲಾಗುತ್ತದೆ. ಅಂದರೆ, ರೂ.7,000 ಕ್ಕಿಂತ ಜಾಸ್ತಿ ಸಂಬಳ ಪಡೆದವರ ಬೋನಸ್‌ ಕೂಡಾ ರೂ. 7,000 ಗರಿಷ್ಠ ಮಿತಿಯ ಮೇಲೆಯೇ ಲೆಕ್ಕ ಹಾಕಲಾಗುತ್ತದೆ. 

ಕನಿಷ್ಠ ಸಂಬಳದ ಶೇ.8.33 ಅಥವಾ ರೂ. 100. ಕಂಪೆನಿಯ ಬಳಿ ಹಂಚಲು ಲಾಭಾಂಶ ಇರಲಿ, ಇಲ್ಲದೆ ಇರಲಿ, ಕನಿಷ್ಠ ಇಷ್ಟಾದರೂ ನೀಡಲೇ ಬೇಕು. ಇನ್ನು ಲಾಭಾಂಶವನ್ನು ನೋಡಿಕೊಂಡು, ಲಭ್ಯ ಮಿಗತೆಯನ್ನು ನೋಡಿಕೊಂಡು ಕಾನೂನಾನುಸಾರ ಕಂಪೆನಿಗಳು ಗರಿಷ್ಠ ಸಂಬಳದ ಶೇ. 20 ವರೆಗೆ ಹೋಗಬಹುದು. ಶೇ.20 ಮೀರಿ ಬೋನಸ್‌ ಕೊಡುವುದು ಕಂಪೆನಿಯ ಇಚ್ಚೆ, ಅದಕ್ಕೆ ನಿರ್ಬಂಧವಿಲ್ಲ.

ಉದಾ: ಒಬ್ಟಾತನ ಒಟ್ಟು ಸಂಬಳ ಮಾಸಿಕ ರೂ. 14,000. ಆತನ ಬೇಸಿಕ್‌ ಮತ್ತು ಡಿಎ ರೂ. 6,000 ಆಗಿದ್ದಲ್ಲಿ ಆತನ ಬೇಸಿಕ್‌ ಮತ್ತು ಡಿಎ ರೂ. 21,000ಕ್ಕಿಂತ ಒಳಗೆ ಇರುವ ಕಾರಣ ಆತನಿಗೆ ಬೋನಸ್‌ ಸಿಗುತ್ತದೆ. ಆದರೆ ಬೋನಸ್‌ ಮಿತಿ ಗರಿಷ್ಟ ರೂ. 7,000ರ ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ. ಆ ಸಂಸ್ಥೆ ಶೇ. 20 ಬೋನಸ್‌ ಘೋಷಣೆ ಮಾಡಿದ್ದಲ್ಲಿ ಆತನಿಗೆ ರೂ. 7000x12x20% = ರೂ. 16,800 ಆ ವರ್ಷಕ್ಕೆ. ಬೋನಸ್‌ ಮೊತ್ತವನ್ನು ಲೆಕ್ಕವರ್ಷ ಮುಗಿದು 8 ತಿಂಗಳ ಅವಧಿಯ ಒಳಗಾಗಿ ಪಾವತಿ ಮಾಡತಕ್ಕದ್ದು. 

ಆದಾಯ ಕರ
ಬೋನಸ್‌ ಪಾವತಿಯು ಸಂಪೂರ್ಣವಾಗಿ ಕರಾರ್ಹ ಸಂಪಾದನೆಯಾಗುತ್ತದೆ. ಬೋನಸ್‌ ಮೊತ್ತವನ್ನು ನಿಮ್ಮ ಸಂಬಳದ ಆದಾಯದ ಅಡಿಯಲ್ಲಿ ಲೆಕ್ಕ ಹಾಕಿ ಅದರ ಮೇಲೆ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ಕರ ಕಟ್ಟತಕ್ಕದ್ದು. 

ಲಾಭದ ಲೆಕ್ಕ ಹೇಗೆ? 
ಬೋನಸ್‌ ಲೆಕ್ಕಾಚಾರಕ್ಕಾಗಿ ಕಂಪೆನಿಯ ಲಾಭಾಂಶವನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಬೇಕು, ಯಾವ ರೀತಿ ಬೋನಸ್‌ ಹಂಚಿಕೆಗಾಗಿ ಲಭ್ಯ ಮಿಗತೆಯನ್ನು ಲೆಕ್ಕ ಹಾಕಬೇಕು ಮತ್ತು ಯಾವ ರೀತಿ ಇವುಗಳನ್ನು ವರ್ಷದಿಂದ ವರ್ಷಕ್ಕೆ ಹೊಂದಿಸಿಕೊಂಡು ಹೋಗಬಹುದು ಎನ್ನುವ ವಿವರಗಳನ್ನೂ ಬೋನಸ್‌ ಕಾಯಿದೆ 1965ರಲ್ಲಿ ವಿವರವಾಗಿ ಕೊಟ್ಟಿದೆ. ಆ ಪ್ರಕಾರ ಕಾನೂನಿನ ಅಡಿಯಲ್ಲಿ ಬೋನಸ್‌ ಶೇಕಡಾ ನಿಗದಿಯಾಗುತ್ತದೆ. ಕಂಪೆನಿಗಳು ಮನಬಂದಂತೆ ಲಾಭ ಲೆಕ್ಕ ಹಾಕಿ ಬೋನಸ್‌ ಕಳ್ಳತನ ಮಾಡುವುದನ್ನು ಈ ಮೂಲಕ ನಿವಾರಿಸಲಾಗಿದೆ. 

ಈ ವಿವರಗಳನ್ನು ನಾನು ಇಂದಿನ ಕಾಕುವಿನಲ್ಲಿ ಕೊಡುವುದಿಲ್ಲ. ಮಿತಿ ಮೀರಿ ತುಂಬಿಸಿದರೆ ಮೆದುಳಿಗೆ ಅಜೀರ್ಣವಾದೀತು. ಒಬ್ಬ ಉದ್ಯೋಗಿಯ ದೃಷ್ಟಿಯಿಂದ ಅಗತ್ಯವಿರುವ ಕನಿಷ್ಟ ಮಾಹಿತಿಗಳನ್ನು ಇಲ್ಲಿ ಕಲೆಹಾಕಿದ್ದೇನೆ. ಇದು ಬೋನಸ್‌ ಆ್ಯಕ್ಟ್ 1965ರ ಯಥಾ ನಕಲು ಅಲ್ಲ. ಒಂದು ರೀತಿಯ ಭಾವಾನುವಾದ! ಕಾಯಿದೆಯ ಸಂಪೂರ್ಣ ಮಾಹಿತಿಗಾಗಿ ಕಾನೂನನ್ನೇ ಓದಬೇಕಷ್ಟೆ. 

Advertisement

Udayavani is now on Telegram. Click here to join our channel and stay updated with the latest news.

Next