Advertisement

ಗುರುಕುಲ ಶಿಕ್ಷಣ ಪದ್ಧತಿ ಇಂದಿನ ಅಗತ್ಯ: ಜಿತಕಾಮಾನಂದ ಸ್ವಾಮೀಜಿ 

05:31 PM Apr 08, 2018 | |

ಪುತ್ತೂರು : ಗುರುಕುಲ ಪದ್ಧತಿಯ ಶಿಕ್ಷಣವನ್ನು ಮರೆತು ಬಿಟ್ಟಿರುವುದರಿಂದ ಅನೇಕ ರೀತಿಯ ಸಮಸ್ಯೆಗಳು ಮುಂದೆ ಬಂದಿವೆ. ಆದ್ದರಿಂದ ನಾವು ಮತ್ತೆ ಗುರುಕುಲ ಶಿಕ್ಷಣ ಪದ್ಧತಿಗೆ ಮರಳಬೇಕು ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು. ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್‌, ಶ್ರೀ ರಾಮಕೃಷ್ಣ ಪ್ರೌಢಶಾಲೆ ವತಿಯಿಂದ ಬಂಟರ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಮ್ಮೇಳನದಲ್ಲಿ ‘ದಿವ್ಯತೆಯ ಅರಿವೇ ಶಿಕ್ಷಣ’ ಬಗ್ಗೆ ಉಪನ್ಯಾಸ ನೀಡಿದರು.

Advertisement

ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿದೆವು. ಇದರಿಂದ ಗುರುಕುಲ ಪದ್ಧತಿ ಕ್ರಮೇಣ ಮರೆಯಾಯಿತು. ಗುರುಕುಲ ಪದ್ಧತಿ ಇಲ್ಲವಾದ್ದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿವೆ. ಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ಬೌದ್ಧಿಕ ಶಿಕ್ಷಣ ಮಾತ್ರ ಲಭ್ಯವಾಗುತ್ತಿದೆ. ಇದು ಬಲವಿಲ್ಲದ ಹಕ್ಕಿಯ ರೆಕ್ಕೆಯಂತೆ. ಪಠ್ಯ ಮಾತ್ರ ಬೋಧನೆ ಮಾಡಲಾಗು ತ್ತಿದೆ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಆತ್ಮಸ್ಥೈರ್ಯ, ಆತ್ಮವಿಶ್ವಾಸ, ಜವಾಬ್ದಾರಿ ಯನ್ನು ತಿಳಿಸಿಕೊಡಬೇಕು. ಈ ಮೂಲಕ ವಿದ್ಯಾರ್ಥಿಗಳನ್ನು ಚಿಕ್ಕಂದಿನಲ್ಲೇ ಉತ್ತಮ ಗುಣವುಳ್ಳ ವ್ಯಕ್ತಿಯನ್ನಾಗಿ ರೂಪಿಸುವ ಅಗತ್ಯ ಇದೆ. ಗುಣ ನಡತೆಯಲ್ಲಿ ಪಾವಿತ್ರ್ಯ ಇರುವ ಪ್ರಜೆಗಳನ್ನು ರೂಪಿಸಬೇಕು. ಇದಕ್ಕೆ ಗುರುಕುಲ ಮಾದರಿ ಶಿಕ್ಷಣ ಪದ್ಧತಿಯೇ ಸೂಕ್ತ ಎಂದರು.

ಎಲ್ಲರಿಗೂ ಬೇಕಾಗಿರುವುದು ಶಾಂತಿ ಹಾಗೂ ನೆಮ್ಮದಿ. ಇದನ್ನು ಪಡೆಯಲು ಇರುವ ಮಾರ್ಗದ ಬಗ್ಗೆ ನಾವು ತಿಳಿದು ಕೊಳ್ಳಬೇಕು. ಹಿರಿಯರು ಹೇಳಿಕೊಟ್ಟ ಆಧ್ಯಾತ್ಮಿಕ ಶಿಕ್ಷಣದಿಂದ ಇದನ್ನು ಪಡೆದು ಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಗಳಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಿ ಎಂದು ಕಿವಿಮಾತು ಹೇಳಿದರು.

ಕಲಬುರಗಿಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಪ್ರೊ| ಎ.ಆರ್‌. ಮಂಜುನಾಥ್‌ ಅವರು ಶಿಕ್ಷಣದಲ್ಲಿ ಆಧ್ಯಾತ್ಮಿಕತೆ, ಸುಬ್ರಹ್ಮಣ್ಯ ಭಟ್‌ ಮಿತ್ತೂರು ಅವರು ಆರೋಗ್ಯ ಶಿಕ್ಷಣ, ಮುದ್ದೇನಹಳ್ಳಿ ಅಮೃತವಾಹಿನಿ ಸಂಪಾದಕ ಕೆ. ಸಂಜೀವ ಶೆಟ್ಟಿ ಅವರು ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು, ಪ್ರಾಧ್ಯಾಪಕ ಕಬೀರ್‌ ಅಡ್ಕಸ್ಥಳ ಅವರು ಮೌಲ್ಯಾಧಾರಿತ ಜೀವನ ಒಂದು ಆದರ್ಶ ಹಾಗೂ ವಿಟ್ಲ ಮೈತ್ರೇಯೀ ಗುರುಕುಲದ ಸೀತಾರಾಮ ಕೆದಿಲಾಯ ಅವರು ರಾಷ್ಟ್ರೀಯತೆ ಇಂದಿನ ಆವಶ್ಯಕತೆ ಕುರಿತು ಉಪನ್ಯಾಸ ನೀಡಿದರು.

ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತಾ ಭಾವಗೀತೆ ಹಾಡಿದರು. ಪ್ರಶಾಂತಿ ಸದ್ಭಾವನಾ ಟ್ರಸ್ಟ್‌ ಸಂಚಾಲಕ ಮಧುಸೂದನ್‌ ನಾಯಕ್‌ ಸ್ವಾಗತಿಸಿದರು. ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಕಲಾ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next