ಗುರುಗ್ರಾಮ : ಏಳು ವರ್ಷ ಪ್ರಾಯದ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಯಾನ್ ಶಾಲಾ ಮಾಲಕನ ಬಂಧನಕ್ಕೆ ತಡೆಯಾಜ್ಞೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು ಬುಧವಾರ ನಿರಾಕರಿಸಿದೆ.
ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್‌ನ ಕೊಲೆ ಪ್ರಕರಣದಲ್ಲಿ ರಯಾನ್ ಇಂಟರ್‌ನ್ಯಾಶನಲ್ ಶಾಲೆಯ ಮಾಲಕರಾದ ಪಿಂಟೋ, ಗ್ರೇಸ್ ಪಿಂಟೋ ಮತ್ತು ಫ್ರಾನ್ಸಿಸ್ ಪಿಂಟೋ ಅವರನ್ನು ಅರೋಪಿಗಳನ್ನಾಗಿ ಹೆಸರಿಸಲಾಗಿದೆ.
ಈ ವಿಷಯದಲ್ಲಿ ಬೇಗನೆ ತನ್ನ ಉತ್ತರವನ್ನು ಸಲ್ಲಿಸುವಂತೆ ಹೈಕೋರ್ಟ್ ಹರಿಯಾಣ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
“ಪ್ರಕರಣದ ವಿಚಾರಣೆಯ ಮುಂದಿನ ದನವನ್ನು ಸೆ.2ಕ್ಕೆ ನಿಗದಿಸಲಾಗಿದೆ. ಇದೊಂದು ಗಂಭೀರ ಪ್ರಕರಣವೆಂದು ಹೈಕೋರ್ಟ್ ಹೇಳಿದೆ. ಪ್ರಕರಣದ ಎಲ್ಲ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸದೆ ತಾನು ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದೂ ಹೈಕೋರ್ಟ್ ಹೇಳಿದೆ’ ಎಂಬುದಾಗಿ ಕೊಲೆಗೀಡಾದ ಬಾಲಕ ಪ್ರದ್ಯುಮ್ನನ ತಂದೆಯ ವಕೀಲರು ಹೇಳಿದ್ದಾರೆ.
ಹರಿಯಾಣ ಸರಕಾರ ಕಳೆದ ವಾರ ಪ್ರದ್ಯುಮ್ನ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಇದನ್ನು ಘೋಷಿಸುವ ಮೊದಲು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕೊಲೆಗೀಡಾದ ಬಾಲಕನ ಹೆತ್ತವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದರು. ಮುಂದಿನ ಮೂರು ತಿಂಗಳ ಮಟ್ಟಿಗೆ ರಯಾನ್ ಶಾಲೆಯ ಆಡಳಿತೆಯನ್ನು ಹರಿಯಾಣ ಸರಕಾರ ವಹಿಸಿಕೊಳ್ಳಲಿದೆ ಎಂದೂ ಅವರು ಪ್ರಕಟಿಸಿದ್ದರು.