Advertisement

ಗುರು ರಾಘವೇಂದ್ರ ಬ್ಯಾಂಕ್‌ ಹಗರಣ: ವರದಿ ಸಲ್ಲಿಸಲು ಇಡಿಗೆ ನಿರ್ದೇಶನ

06:01 AM Jun 24, 2020 | Lakshmi GovindaRaj |

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಹಾಗೂ ಗುರು ಸಾರ್ವಭೌಮ ಸೌಹರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ನ‌ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್‌ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ನಿರ್ದೇಶನ ನೀಡಿದೆ.

Advertisement

ಹಗರಣದ ತನಿಖೆಗೆ ಡಿಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿ ಬಸವನಗುಡಿ ನಿವಾಸಿ ಕೆ.ಆರ್‌. ನರಸಿಂಹಮೂರ್ತಿ  ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯ,  ಪ್ರಕರಣದ ಸಂಬಂಧ ಎಸಿಬಿ ಮತ್ತು ಸಿಐಡಿ ಎರಡೂ ಪ್ರತ್ಯೇಕ ಎಫ್‌ಐಆರ್‌ ಗಳನ್ನು ದಾಖಲಿಸಿವೆ.

ಅವುಗಳನ್ನು ಒಂದೇ ಕಡೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತು. ಅಲ್ಲದೆ, ಆರ್‌ಬಿಐ ಸದ್ಯ  ಠೇವಣಿದಾರರ ಹಣ ವಾಪಸ್‌ ಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಿದೆ. ಆ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಠೇವಣಿದಾರರು ಜೂ.22ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಿದ ಹೈಕೋರ್ಟ್‌ ವಿಚಾರಣೆಯನ್ನು ಜು.1ಕ್ಕೆ ಮುಂದೂಡಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಆನ್‌ಲೈನ್‌ ಮೂಲಕ ಠೇವಣಿ ಹಣ ವರ್ಗಾವಣೆ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಪೀಠ, ಹಗರಣ ಸಂಬಂಧ ಬಾಣಸವಾಡಿ ಹಾಗೂ ಬಸವನಗುಡಿ ಪೊಲೀಸರ ವಿರುದ ಕ್ರಮ ಕೈಗೊಂಡಿರುವ  ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿತು. ರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ಸೊಸೈಟಿ  ಮತ್ತು ಬ್ಯಾಂಕ್‌ನ ಕೆಲವು ಪದಾಧಿಕಾರಿಗಳ ಆಸ್ತಿ  ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next