Advertisement

ಅರಿವಿಗೆ ಗುರು ಮೂಲ: ರಂಭಾಪುರಿ ಶ್ರೀ

11:46 AM Mar 13, 2018 | |

ಆಳಂದ: ಜಗದ ಕತ್ತಲೆ ಕಳೆಯಲು ಸೂರ್ಯಬೇಕು. ಬದುಕಿನ ಕತ್ತಲೆ ಕಳೆಯಲು ಗುರುಬೇಕು. ಗುರಿ ಮತ್ತು ಗುರುವಿನ ಮೂಲಕ ಜೀವನ ಉತ್ಕರ್ಷತೆ ಸಾಧ್ಯ. ಅಧ್ಯಾತ್ಮದ ಅರಿವಿಗೆ ಗುರು ಮೂಲ ಕಾರಣವೆಂಬುದನ್ನು ಮರೆಯಬಾರದೆಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ತಾಲೂಕಿನ ಮಾದನ ಹಿಪ್ಪರಗಿ ಗುರುಶಾಂತೇಶ್ವರ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ವೀರಶೈವ ಧರ್ಮದಲ್ಲಿ ತತ್ವತ್ರಯಗಳ ಪಾತ್ರ ಬಹಳ ಹಿರಿದು. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ಜೀವನ ವಿಕಾಸಕ್ಕೆ ಸೋಪಾನ. ಅಷ್ಟಾವರಣದಲ್ಲಿ ಗುರುವಿಗೆ ಅತ್ಯಂತ ಮಹತ್ವವಿದೆ ಎಂದರು.

ಪರಶಿವನ ಸಾಕಾರ ರೂಪ ಗುರು ಎಂದು ಸಿದ್ಧಾಂತ ಶಿಖಾಮಣಿಯಲ್ಲಿ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ
ಉಲ್ಲೇಖೀಸಿದ್ದಾರೆ. ಸಂಸ್ಕಾರ ಸದ್ವಿಚಾರ ಮೌಲ್ಯಾಧಾರಿತ ಜೀವನ ವಿಕಾಸಕ್ಕೆ ಮೂಲವಾದ ಜ್ಞಾನವನ್ನು ಬೋಧಿ ಸುವುದೇ ಗುರು ಧರ್ಮವಾಗಿದೆ.

ಹೆತ್ತ ತಂದೆ-ತಾಯಿ ಮತ್ತು ಗುರುವನ್ನು ಮರೆಯಬಾರದೆಂದು ಶಾಸ್ತ್ರ ಹೇಳುತ್ತದೆ. ವೈಚಾರಿಕತೆಯ ಹೆಸರಿನಲ್ಲಿ ಸಭ್ಯತೆ
ಸಂಸ್ಕೃತಿ ನಾಶಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮಠಗಳ ಪಾತ್ರ ಮಹತ್ವ ಪಡೆದಿದೆ. ಅರಿವು-ಆಚಾರ ಕಲಿಸುವ ಕೇಂದ್ರಗಳಾಗಿ ಮಠಗಳು ಕಾರ್ಯ ಮಾಡಬೇಕಾಗಿದೆ. ಅವಗುಣಗಳನ್ನು ದೂರಮಾಡಿ ಲಿಂಗ ಗುಣ ಸಂಪನ್ನರನ್ನಾಗಿ ಮಾಡುವುದೇ ಗುರು ಧರ್ಮವಾಗಿದೆ ಎಂದು ಹೇಳಿದರು.

ಮಾದನಹಿಪ್ಪರಗಿ ಗುರುಶಾಂತೇಶ್ವರ್‌ ಹಿರೇಮಠವು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶಾಖಾಮಠವಾಗಿದೆ. ಈ ಮಠದ ಹಿಂದಿನ ಪಟ್ಟಾಧ್ಯಕ್ಷರು ಧರ್ಮದ ಬೆಳಕನ್ನು ಬೀರಿದ್ದನ್ನು ಮರೆಯಲಾಗದು. 46 ವರುಷಗಳಿಂದ ಖಾಲಿಯಾಗಿದ್ದ ಈ ಗುರು ಸ್ಥಾನವನ್ನು ನೂತನ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಪಟ್ಟಾಭಿಷಿಕ್ತರಾಗಿ ತುಂಬಿದ್ದಾರೆ. ನಾಗಠಾಣ ಹಿರೇಮಠದ ಚನ್ನಮಲ್ಲಿಕಾರ್ಜುನ  ಶಿವಾಚಾರ್ಯರು ನೂತನ ಶ್ರೀಗಳಿಗೆ ಧಾರ್ಮಿಕ ಸಂಸ್ಕಾರವಿತ್ತು ಷಟ್‌ಸ್ಥಲ ಬ್ರಹ್ಮೋಪದೇಶ ಮಾಡಿದರು. ನೂತನ ಶಾಂತವೀರ ಶಿವಾಚಾರ್ಯ ಸ್ವಾಮಿಗಳಿಗೆ ದಂಡಕ ಮಂಡಲು ಸಮೇತ ಪಂಚಮುದ್ರೆಗಳನ್ನಿತ್ತು ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

Advertisement

ಪಟ್ಟಾಧಿಕಾರ ಸಮಾರಂಭದಲ್ಲಿ ಚಿಣಮಗೇರಾ, ಮುಖೇಡ ಕಾಸರಳ್ಳಿ, ಆತನೂರು, ಕೊಣ್ಣೂರು, ಮೈಂದರ್ಗಿ, ಹತ್ತಳ್ಳಿ, ಉಡಗೀರ್‌, ದೋರನಳ್ಳಿ, ದುಧನಿ ಶ್ರೀಗಳು ಪಾಲ್ಗೊಂಡಿದ್ದರು. ಗೌಡಗಾಂವ್‌ ಹಿರೇಮಠದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ನೇತೃತ್ವವನ್ನು ಶಿವಲಿಂಗೇಶ್ವರ ವಿರಕ್ತಮಠದ ಅಭಿನವ ಶಿವಲಿಂಗ ಸ್ವಾಮಿಗಳು ವಹಿಸಿದ್ದರು.

ನೂತನ ಪಟ್ಟಾಧ್ಯಕ್ಷ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಪಟ್ಟಾಧಿ ಕಾರದ ವೈದಿಕ ಕಾರ್ಯಗಳನ್ನು ಸೊಲ್ಲಾಪುರದ ಡಾ| ಶಿವಯೋಗಿ ಶಾಸ್ತ್ರಿಗಳು, ಮಾದನಹಿಪ್ಪರಗಿ ಸೋಮನಾಥ ಶಾಸ್ತ್ರಿಗಳು, ಕಡಗಂಚಿ ಪಶುಪತಿ ವಿಶ್ವನಾಥಮಠ ಅವರು ನೆರವೇರಿಸಿದರು. ಸಮಾರಂಭದ ನಂತರ ನೂತನ ಶ್ರೀಗಳ ಪಲ್ಲಕ್ಕಿ ಮಹೋತ್ಸವ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next