ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕಕರಾಗಿ ಹೆಸರಾಗಿರುವ ಗುರು ದೇಶಪಾಂಡೆ ಇದೀಗ ನಿರ್ಮಾಪಕರಾಗಿಯೂ ಅಡಿಯಿರಿಸಿದ್ದಾರೆ. ಇದೆಲ್ಲದರ ಜೊತೆಗೆ ಅವರು ಜಿ ಅಕಾಡೆಮಿ ಎಂಬ ಸಿನಿಮಾ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಸಿನಿಮಾ ನೋಡೋದೊಂದೇ ಸಿನಿಮಾ ಮಾಡಲು ಇರುವ ಅರ್ಹತೆಯೆಂದು ಅನೇಕರು ಭಾವಿಸಿರುತ್ತಾರೆ. ಆದರೆ ಸಿನಿಮಾವೊಂದು ರೂಪುಗೊಳ್ಳೋದರ ಹಿಂದೆ ಬೇರೆಯದ್ದೇ ವಿಧಾನಗಳಿರುತ್ತವೆ. ಯಾವ ಕಲಿಕೆಯೂ ಇಲ್ಲದೇ ಅಲ್ಲಿಗೆ ತೆರಳಿ ತಬ್ಬಿಬ್ಬಾಗಿ ನಿಲ್ಲುವುದಕ್ಕಿಂತ ಸಂಪೂರ್ಣವಾಗಿ ಎಲ್ಲ ವಿಧಿ ವಿಧಾನಗಳನ್ನೂ ಅರಿತುಕೊಂಡೇ ಎಂಟ್ರಿ ಕೊಟ್ಟರೆ ಸಾಧನೆಯೆಂಬುದು ಸಲೀಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಭಾವಂತರನ್ನು ಸೃಷ್ಟಿಸಿ ಚಿತ್ರರಂಗಕ್ಕೆ ಕಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಗುರು ದೇಶಪಾಂಡೆ ಈ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಈ ತರಬೇತಿ ಸಂಸ್ಥೆ ಅಚ್ಚುಕಟ್ಟಾದ ರೂಪುರೇಷೆಗಳೊಂದಿಗೇ ಸಿದ್ಧಗೊಂಡಿದೆ. ನಿರ್ದೇಶನ, ನಿರ್ಮಾಣ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿಯೂ ಆಯಾ ವಿಭಾಗದಲ್ಲಿ ಯಶಸ್ವಿಯಾದವರಿಂದಲೇ ತರಬೇತಿ ಸೌಕರ್ಯ ಒದಗಿಸಿರೋದು ಜಿ ಅಕಾಡೆಮಿಯ ಪ್ರಧಾನ ಅಂಶ. ನಿರ್ಮಾಪಕರಾದ ಕೆ.ಮಂಜು, ಉದಯ್.ಕೆ ಮೆಹ್ತಾ, ನಿರ್ದೇಶಕರಾದ ದಯಾಳ್ ಪದ್ಮನಾಭನ್, ಭರ್ಜರಿ ಚೇತನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಬಿ.ಎಂ.ಗಿರಿರಾಜ್, ಮೌನೇಶ್ ಬಡಿಗೇರ್, ನವೀನ್ ಕೃಷ್ಣ, ಕೆಂಪರಾಜು, ಕೆ.ಎಸ್.ಚಂದ್ರಶೇಖರ್, ಆರ್.ಜೆ.ನೇತ್ರಾ, ಹೇಮಲತಾ, ಸಂತೋಷ್ ನಾಯಕ್, ಮದನ್ ಹರಿಣಿ, ಗಿರೀಶ್, ಡಿಫರೆಂಟ್ ಡ್ಯಾನಿ, ದೀಪಕ್ ಮತ್ತು ಶ್ರೀನಿವಾಸ್ ಸೇರಿದಂತೆ ಅನೇಕರು ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಿದ್ದಾರೆ.
ಇದೊಂದು ಸುಸಜ್ಜಿತವಾದ ಸಿನಿಮಾ ತರಬೇತಿ ಸಂಸ್ಥೆ. ಇಲ್ಲಿ ಪ್ರತಿಯೊಂದನ್ನೂ ಕೂಡಾ ಪ್ರಾಕ್ಟಿಕಲ್ ಆಗಿಯೇ ಅರಿತುಕೊಳ್ಳುವ ಸದಾವಕಾಶ ಆಕಾಂಕ್ಷಿಗಳಿಗೆ ಸಿಗಲಿದೆ. ನಿದರ್ೇಶನ, ನಟನೆ, ನೃತ್ಯ ಸೇರಿದಂತೆ ಎಲ್ಲ ವಿಭಾಗಗಳಿಗೂ ನುರಿತವರಿಂದಲೇ ತರಬೇತಿ ಕೊಡಿಸಲಾಗುತ್ತದೆ. ಹೀಗೆ ತರಬೇತಿ ಪಡೆದುಕೊಳ್ಳುವ ಪ್ರತಿಭಾವಂತರಿಗೆ ಗುರು ದೇಶಪಾಂಡೆ ತಮ್ಮ ಸಂಸ್ಥೆಯಿಂದ ನಿಮರ್ಾಣಗೊಳ್ಳಲಿರೋ ಚಿತ್ರಗಳಲ್ಲಿಯೂ ಅವಕಾಶ ಕಲ್ಪಿಸಿ ಕೊಡುವ ಇರಾದೆಯನ್ನೂ ಹೊಂದಿದ್ದಾರೆ. ಇದೇ ತಿಂಗಳ 25ರಿಂದ ಜಿ ಅಕಾಡೆಮಿಯಲ್ಲಿ ತರಗತಿಗಳು ಆರಂಭವಾಗಲಿವೆ. ಅದಕ್ಕೂ ಮುಂಚಿತವಾಗಿಯೇ ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು. ಬೆಂಗಳೂರಿನ ನಾಗರಬಾವಿಯಲ್ಲಿ ಜಿ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ
www.gacademy.co ವೆಬ್ ಸೈಟಿಗೆ ಭೇಟಿ ನೀಡಬಹುದು.