Advertisement

ಯಕ್ಷ ವಿದ್ಯಾರ್ಥಿಗಳ‌ “ಗುರುದಕ್ಷಿಣೆ’

12:30 AM Mar 01, 2019 | Team Udayavani |

 ಯಕ್ಷಗಾನ ಕಲಿಕಾ ಕೇಂದ್ರ ಗೇರುಕಟ್ಟೆಯ ವಿದ್ಯಾರ್ಥಿಗಳು ಇತ್ತೀಚೆಗೆ ನೂರಾಳ್‌ಬೆಟ್ಟುವಿನಲ್ಲಿ ಗುರುದಕ್ಷಿಣೆ ತಾಳಮದ್ದಳೆ ಆಯೋಜಿಸಿದ್ದರು.ವಿದ್ಯಾರ್ಜನೆಯಲ್ಲಿ ಶ್ರದ್ಧೆ, ಪರಿಶ್ರಮ ಮತ್ತು ಗುರುಭಕ್ತಿಯ ಮಹತ್ತನ್ನು ಸಾರುವ ಈ ಪ್ರಸಂಗವು ಯುವ ಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡುವ ಮಹಾಭಾರತದ ಒಂದು ಆಖ್ಯಾನ. ಬಡತನದ ಬೇಗೆಯಿಂದ ಬಳಲಿದ ದ್ರೋಣರು ಪೂರ್ವಮಿತ್ರನಾದ ದ್ರುಪದನಿಂದ ಅವಮಾನಿತನಾಗಿ ಹಸ್ತಿನಾವತಿಗೆ ಬರುವ ಸಂದರ್ಭದಲ್ಲಿ ನಡೆದ ಘಟನೆಯ ನಿಮಿತ್ತವಾಗಿ ಕೌರವ ಪಾಂಡವ ರಾಜಕುವರರಿಗೆ ಶಸ್ತ್ರವಿದ್ಯಾ ಗುರುವಾಗಿ ನಿಯೋಜಿತರಾಗುತ್ತಾರೆ. ಅಲ್ಲಿಗೆ ಧನುರ್ವಿದ್ಯೆಯನ್ನು ಕಲಿಯುವ ಅಪೇಕ್ಷೆಯಿಂದ ಬಂದ ಏಕಲವ್ಯನನ್ನು ತಿರಸ್ಕರಿಸಿದಾಗ ದ್ರೋಣರನ್ನು ಪರೋಕ್ಷ ಗುರುವಾಗಿ ತಿಳಿದ ಏಕಲವ್ಯನೂ ಬಿಲ್ವಿದ್ಯೆಯಲ್ಲಿ ಪ್ರೌಢಿಮೆಯನ್ನು ಸಾಧಿಸುತ್ತಾನೆ ಈ ವಿಚಾರ ಅರ್ಜುನನ ಗಮನಕ್ಕೆ ಬಂದಾಗ ದ್ರೋಣರು ಏಕಲವ್ಯನ ಬಳಿಬಂದು ಆತನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯುತ್ತಾರೆ. ಮುಂದಕ್ಕೆ ಅರ್ಜುನನ ಮೂಲಕ ದ್ರುಪದನ ಗರ್ವಭಂಗವಾಗಿ ದ್ರೋಣರಿಗೆ ಗುರುದಕ್ಷಿಣೆ ಸಲ್ಲಿಕೆಯಾಗುತ್ತದೆ.

Advertisement

ಈ ಪ್ರಸಂಗದ ಚೊಚ್ಚಲ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಪಾತ್ರೋಚಿತವಾಗಿ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಮಕ್ಕಳ ಭಾವವನ್ನರಿತು ಭಾಗವತಿಕೆಯಲ್ಲಿ ರಂಜಿಸಿದವರು ಮಹಿಳಾ ಭಾಗವತರಾದ ಕು| ಅಮೃತಾ ಅಡಿಗ ಪಾಣಾಜೆ. ಮದ್ದಳೆಯಲ್ಲಿ ಸತ್ಯನಾರಾಯಣ ಅಡಿಗ, ಎರಡು ಚೆಂಡೆಗಳ ವಾದನದ ಮೂಲಕ ಪ್ರದರ್ಶನಕ್ಕೆ ಕಳೆಯೇರಿಸಿದ ಕೌಶಿಕ್‌ ಭಟ್‌ ಪುತ್ತಿಗೆ, ಚಕ್ರತಾಳದಲ್ಲಿ ವರದರಾಜ ಆಚಾರ್ಯ ರೆಂಜಾಳರ ಹಿಮ್ಮೇಳ ಕಲಾವಿದರಿಗೆ ಸ್ಪೂರ್ತಿಯನ್ನು ನೀಡುವಂತಿತ್ತು. ದ್ರೋಣನಾಗಿ ಮಾ| ಸೌರವ್‌ ಕೊಡುಗೆ ಗಮನಾರ್ಹ. 

ದ್ರುಪದನಾಗಿ ಮಾ| ಯಶವಂತ್‌, ಅರ್ಜುನ ಪಾತ್ರದಲ್ಲಿ ಮಾ| ಸತ್ಮಣಿ, ಮಾ| ಹೇಮನ್‌ ಏಕಲವ್ಯನಾಗಿ ಅಚ್ಚುಕಟ್ಟಾಗಿ ಪಾತ್ರ ಪೋಷಣೆ ಮಾಡಿದ ಮಾ| ರಾಹುಲ್‌ ಮತ್ತು ಮಾ| ಅನುಷ್‌ ಮೆಚ್ಚುಗೆ ಪಡೆದರು. 

ದಿವಾಕರ ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next