ಗುಂಟೂರು : ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಇಂದು ಸೋಮವಾರ ಬೆಳಗ್ಗೆ ಶಾಲಾ ಬಸ್ಸೊಂದು ಮಗುಚಿ ಕೊಂಡ ದುರಂತದಲ್ಲಿ ಕನಿಷ್ಠ 17 ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಗಾಯಾಳುಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಿದ್ದು ಇತರ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಯಾಳು ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.
ಶಾಲಾ ಬಸ್ಸಿನ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದ್ದಾರೆ. ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 50 ವಿದ್ಯಾರ್ಥಿಗಳು ಇದ್ದರು. ಅವಘಡಕ್ಕೆ ಕಾರಣವೇನು ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ.
ಅವಘಡ ಸಂಭವಿಸಿದೊಡನೆಯೇ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಗಾಯಾಳು ಮಕ್ಕಳನ್ನು ರಕ್ಷಿಸುವ ಕೆಲಸದಲ್ಲಿ ನೆರವಾದರು.
ಈ ನಡುವೆ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಸಿಬಂದಿಗಳು ಇಲ್ಲದಿದ್ದ ಕಾರಣ ಸ್ವೀಪರ್‌ಗಳೇ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದುದು ಕಂಡು ಬಂದಿದೆ. ಈ ಬಗ್ಗೆ ನಿರ್ಲಕ್ಷ್ಯದ ಕೇಸನ್ನು ದಾಖಲಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.