Advertisement

ಅಂತಾರಾಜ್ಯ ಡಕಾಯಿತರಿಗೆ ಗುಂಡೇಟು

11:39 AM Dec 13, 2018 | Team Udayavani |

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಡಕಾಯಿತಿ ಮಾಡಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ಇಬ್ಬರು ಆರೋಪಿಗಳಿಗೆ ಕೆ.ಆರ್‌. ಪುರ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಮುನೀರ್‌ ಮತ್ತು ಈತನ ಸಹಚರ ಮಿಲನ್‌ ಬಂಧಿತರು. ಇವರ ಬಳಿಯಿದ್ದ ನಾಲ್ಕೈದು ಡ್ರ್ಯಾಗರ್‌ಗಳು, ಹಗ್ಗ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಪಶ್ಚಿಮ ಬಂಗಾಳದ ಗಡಿ ಮಾರ್ಗವಾಗಿ ಭಾರತದೊಳಗೆ ಅಕ್ರಮವಾಗಿ ನುಸುಳಿರುವ ಆರೋಪಿಗಳು, ಗೋವಾ, ದೆಹಲಿ, ರಾಜಸ್ಥಾನ ಹಾಗೂ ಕರ್ನಾಟಕದಲ್ಲಿ ಡಕಾಯಿತಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಮುನೀರ್‌ ಸಹೋದರ ಕುಕೇನ್‌ ಎಂಬಾತನ ಮೇಲೆ ದೆಹಲಿ ಪೊಲೀಸರು ನವೆಂಬರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಮುನೀರ್‌ ಮತ್ತು ಮಿಲನ್‌ ತಪ್ಪಿಸಿಕೊಂಡು ನೇರವಾಗಿ ಗೋವಾ ತಲುಪಿದ್ದರು. ಬಳಿಕ ಡಿ.1ರಂದು ಬೆಂಗಳೂರು ಪ್ರವೇಶಿಸಿದ್ದರು. ಈ ಮಾಹಿತಿ ಸಂಗ್ರಹಿಸಿದ್ದ ದೆಹಲಿ ಅಪರಾಧ ವಿಭಾಗದ ಪೊಲೀಸರುಘಿ ಕೆ.ಆರ್‌.ಪುರ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.  

ಕಾಲುಗಳಿಗೆ ಗುಂಡೇಟು: ಕಳೆದ ಹತ್ತು ದಿನಗಳಿಂದ ಆರೋಪಿಗಳ ಬೆನ್ನು ಬಿದ್ದಿದ್ದ ವಿಶೇಷ ತಂಡಕ್ಕೆ, ವೈಟ್‌ಫಿಲ್ಡ್‌ ರೈಲು ನಿಲ್ದಾಣದ ಆಸುಪಾಸಿನಲ್ಲಿ ಇಬ್ಬರು ಬಾಂಗ್ಲಾದೇಶದ ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಇಮ್ಮಡಿಹಳ್ಳಿ-ಅಜಗೊಂಡಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ಮುಂದಾಗಿದೆ.

ಈ ವೇಳೆ ಆರೋಪಿ ಮುನೀರ್‌ ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಸಿಬ್ಬಂದಿ ಮಂಜುನಾಥ್‌ರ ಬಲಕೈ ಳಿಗೆ ಇರಿದಿದ್ದಾನೆ. ಕೂಡಲೇ ಪಿಐ ಜಯರಾಜ್‌, ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೂ ಆರೋಪಿ ಹಲ್ಲೆಗೆ ಯತ್ನಿಸಿದಾಗ ಆರೋಪಿಯ ಎಡಗಾಲಿನ ಮಂಡಿಗೆ ಗುಂಡು ಹೊಡೆದು ಬಂಧಿಸಲಾಗಿದೆ. 

Advertisement

ಇದೇ ವೇಳೆ ಮತ್ತೂಬ್ಬ ಆರೋಪಿ ಮಿಲನ್‌ ಕೂಡ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾನೆ. ರೋಪಿಯನ್ನು ಬೆನ್ನಟ್ಟಿದ್ದ ಸಿಬ್ಬಂದಿ ಚಂದ್ರಪ್ಪ ಅವರ ಎಡಗಾಲಿನ ತೊಡೆಗೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪಿಎಸ್‌ಐ ಶ್ರೀನಿವಾಸ್‌ ದೊಡ್ಡಮನಿ, ಆರೋಪಿಯ ಬಲಗಾಲಿನ ಮಂಡಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಜೈಲು ಸೇರಿದ್ದ ಆರೋಪಿ: ಆರೋಪಿಗಳ ಪೈಕಿ ಮುನೀರ್‌ 2002ರಲ್ಲಿ ಉತ್ತರಪ್ರದೇಶದ ನೊಯಿಡಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಬಳಿಕ ಜಾಮೀನು ಪಡೆದು ಹೊರ ಬಂದ ಈತ, 2018ರಲ್ಲಿ ಗೋವಾದ ಮಡಗಾವ್‌ ಮತ್ತು ಪೋಂಡಾ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ. ಮತ್ತೂಬ್ಬ ಆರೋಪಿ ಮಿಲನ್‌ ಕೂಡ 2018ರ ಅಕ್ಟೋಬರ್‌ನಲ್ಲಿ ಗೋವಾದ ಪೋಂಡಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಒಂಟಿ ಮನೆಗಳೇ ಟಾರ್ಗೆಟ್‌?: ಬಾಂಗ್ಲಾ ದೇಶದಿಂದ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಆರೋಪಿಗಳ ಹತ್ತಾರು ಮಂದಿಯ ತಂಡ ದೇಶದ ರಾಜಧಾನಿ ಸೇರಿದಂತೆ ಪ್ರತಿಷ್ಠಿತ ನಗರಗಳ ಹೊರವಲಯದಲ್ಲಿರುವ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಡಕಾಯಿತಿ ಮಾಡುತ್ತಿತ್ತು. ಆರಂಭದಲ್ಲಿ ಆರೋಪಿಗಳು ಅಲ್ಲಲ್ಲಿ ಪೇಪರ್‌ ಆಯುವವರಂತೆ ಸುತ್ತಾಡುತ್ತ, ಶ್ರೀಮಂತರ ಮನೆಗಳನ್ನು ಗುರುತಿಸಿ, ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸಾಮಾನ್ಯವಾಗಿ ಡಕಾಯಿತರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಾರೆ. ಆದರೆ, ಬಂಧಿತರ ತಂಡ, ಕುಟುಂಬ ಸದಸ್ಯರು ಇದ್ದಾಗಲೇ ನಸುಕಿನ 2 ಗಂಟೆ ಸುಮಾರಿಗೆ ಮನೆಯ ಕಿಟಕಿಗಳನ್ನು ಮುರಿದು ಒಳ ಪ್ರವೇಶಿಸುತ್ತಿದ್ದರು. ಬಳಿಕ ಮನೆ ಸದಸ್ಯರ ಕೈ, ಕಾಲು ಕಟ್ಟಿ, ಪಿಸ್ತೂಲ್‌ ಅಥವಾ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಡಕಾಯಿತಿ ಮಾಡುತ್ತಿದ್ದರು. ಕೆಲವೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ಎಸಗುತ್ತಿದ್ದರು. ಹೀಗೆ ಕಳೆದ ಹತ್ತಾರು ವರ್ಷಗಳಿಂದ ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಗೋವಾ, ಪಶಿrಮ ಬಂಗಾಳ, ಮುಂಬೈ, ಕರ್ನಾಟಕ ಸೇರಿದಂತೆ ವಿವಿಧೆಡೆ ಡಕಾಯಿತಿ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಕೆ.ಆರ್‌.ಪುರದಲ್ಲೂ ಕೃತ್ಯ ಎಸಗಿದ್ದ ಆರೋಪಿಗಳು ಬಂಧಿತರ ತಂಡ ಕಳೆದ ವರ್ಷ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ವೈಟ್‌ಸಿಟಿ ಬಡಾವಣೆ ನಿವಾಸಿ, ನೋಕಿಯ ಕಂಪನಿಯಲ್ಲಿ ಲೆಕ್ಕಪರಿಶೋಧರಾಗಿ ಕಾರ್ಯನಿರ್ವಹಿಸುತ್ತಿದ್ದ ಪಾರ್ಥಿಬನ್‌ ಎಂಬುವವರ ಮನೆಗೆ ನುಗ್ಗಿ, ಪಾರ್ಥಿಬನ್‌ರ ಬಾಯಿಗೆ ಪಿಸ್ತೂಲ್‌ ಇಟ್ಟು ಬೆದರಿಸಿ, 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಡಕಾಯಿತಿ ಮಾಡಿದ್ದರು. ಆಗ ಬಂಧಿತ ಮುನೀರ್‌ ಸಹೋದರ ಕುಕೇನ್‌, ತಂಡದ ನೇತೃತ್ವ ವಹಿಸಿದ್ದ. ಸದ್ಯ ದೆಹಲಿಯ ಜೈಲಿನಲ್ಲಿರುವ ಆರೋಪಿ ಕುಕೇನ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಸದ್ಯದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಕೆ.ಆರ್‌.ಪುರ ಪೊಲೀಸರು ಹೇಳಿದರು.

ಗಡಿ ಭದ್ರತಾ ಸಿಬ್ಬಂದಿ ಜತೆ ಹೊಂದಾಣಿಕೆ?
ಪಶ್ಚಿಮ ಬಂಗಾಳದ ಗಡಿ ಭಾಗದಲ್ಲಿ ಅಕ್ರಮವಾಗಿ ಪ್ರವೇಶಿಸುತ್ತಿರುವ ಬಾಂಗ್ಲಾದೇಶದ ಪ್ರಜೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವೈಟ್‌ಫಿಲ್ಡ್‌ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದಾರೆ. ಗಡಿ ಪ್ರದೇಶದಲ್ಲಿರುವ ಭದ್ರತಾ ಪಡೆಯ ಕೆಲ ಸಿಬ್ಬಂದಿ ಜತೆ ಹೊಂದಾಣಿಕೆ ಮಾಡಿಕೊಂಡು ಬಾಂಗ್ಲಾದೇಶಿಗರು ಅಕ್ರಮವಾಗಿ ನುಸುಳುತ್ತಿದ್ದಾರೆ ಎಂಬ ಮಾಹಿತಿಯಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು. 

ಗಡಿ ಮೂಲಕ ಅಕ್ರಮ ಪ್ರವೇಶ ಬಾಂಗ್ಲಾದೇಶದ ಕಮರುಲ್ಲಾ, ದೈದು ಮತ್ತು ಫಾರೂಕ್‌ ಎಂಬುವವರು ಬಾಂಗ್ಲಾದೇಶದ ಕೆಲ ಪ್ರದೇಶಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಹಣದ ಆಮಿಷವೊಡ್ಡಿ ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ಕರೆತರುತ್ತಿದ್ದರು. ಬಳಿಕ ಡಕಾಯಿತಿಗೆ ಸೂಚಿಸಿ ಲಕ್ಷಾಂತರ ರೂ. ಲೂಟಿ ಮಾಡಿ ಆ ಯುವಕರಿಗೆ ಇಂತಿಷ್ಟು ಹಣ ಕೊಟ್ಟು, ಉಳಿದ ಹಣ, ಚಿನ್ನಾಭರಣದ ಜತೆಗೆ ಬಾಂಗ್ಲಾದೇಶಕ್ಕೆ ಪರಾರಿಯಾಗುತ್ತಿದ್ದರು. ಕೆಲವೊಮ್ಮೆ ಭಾರತದಲ್ಲಿರುವ ಬಾಂಗ್ಲಾದೇಶದ ಪ್ರಜೆಗಳ ಮೂಲಕವೂ ಡಕಾಯಿತಿ ಮಾಡಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next