ಗುಂಡ್ಲುಪೇಟೆ(ಚಾಮರಾಜನಗರ): ಬೈಕ್ ಸವಾರನ ಮೇಲೆ ಕಾಡಾನೆಯೊಂದು ದಾಳಿಗೆ ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಸವಾರ ಪಾರಾದ ಘಟನೆ ತಾಲೂಕಿನ ಬಂಡೀಪುರ ಹೆದ್ದಾರಿ ರಸ್ತೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಬೈಕ್ ಸವಾರ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಊಟಿ ಕಡೆಯಿಂದ ಮೈಸೂರಿನ ಕಡೆಗೆ ಬರುವಾಗ ರಸ್ತೆಯ ಬದಿಯಲ್ಲಿ ಆನೆಗಳು ನಿಂತಿರುವುದನ್ನು ಗಮನಿಸದೆ ಚಾಲನೆ ಮಾಡಿಕೊಂಡು ಬಂದಿದ್ದಾನೆ.
ಈ ವೇಳೆ ಆನೆ ಬೈಕ್ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಗಾಬರಿಗೊಂಡ ಸವಾರ ರಸ್ತೆಯಲ್ಲೇ ಬೈಕ್ ಬಿಟ್ಟು ತಪ್ಪಿಸಿಕೊಳ್ಳುವ ಭರದಲ್ಲಿ ಇನ್ನೆರಡು ಆನೆಗಳು ನಿಂತಿರುವ ಕಡೆ ಓಡಿ ಹೋಗಿದ್ದಾರೆ. ತದ ನಂತರ ಆನೆ ಮತ್ತು ಮರಿ ಮೊದಲಿಗೆ ದಾಳಿ ಮಾಡಲು ಬಂದ ಆನೆಯೊಂದಿಗೆ ಕಾಡಿನೊಳಗೆ ಹೋಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮುಂಬದಿಯ ಕಾರು ಚಾಲನೋರ್ವ ಘಟನೆಯ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಬೈಕ್ ಸವಾರ ಗ್ರೇಟ್ ಎಸ್ಕೇಪ್ ಎಂದು ಇತರರೊಂದಿಗೆ ಮಾತನಾಡಿಕೊಂಡಿದ್ದಾರೆ. ಇದೀಗ ಈ ದೃಶ್ಯ ಸಾಕಷ್ಟು ವೈರಲ್ ಆಗಿದ್ದು, ಹಲವರ ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಹರಿದಾಡುತ್ತಿದೆ.
ಈ ಸಂಬಂಧ ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ಪ್ರತಿಕ್ರಿಯೆ ನೀಡಿ, ಬಂಡೀಪುರ-ಊಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಭಯಾರಣ್ಯದಲ್ಲಿ ಬೈಕ್ ಸವಾರರು ಸಂಚಾರ ಮಾಡುವಾಗ ಎಚ್ಚರಿಕೆ ವಹಿಸಬೇಕು. ಆನೆಗಳನ್ನು ರಸ್ತೆ ಬದಿ ಕಂಡರೆ ಪೋಟೋ, ವಿಡಿಯೋ ತೆಗೆಯಲು ಮುಂದಾಗದೆ ದೂರವಿರಬೇಕು. ಮರಿಯಾನೆ ಜೊತೆ ತಾಯಿ ಆನೆ ಇದ್ದರೆ ಏನಾದರೂ ಅಪಾಯ ಮಾಡುತ್ತಾರೆ ಎಂದು ಎದುರಿನವರ ಮೇಲೆ ಆನೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಘಟನೆಗಳು ನಡೆಯದಂತೆ ಪ್ರಯಾಣಿಕರೇ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.