ಗುಂಡ್ಲುಪೇಟೆ(ಚಾಮರಾಜನಗರ): ಜಮೀನೊಂದರಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಸುಮಾರು 510 ಚೀಲಗಳ ರಸ ಗೊಬ್ಬರದ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.
ಜಮೀನಿನಲ್ಲಿ ಅಕ್ರಮವಾಗಿ ರಸ ಗೊಬ್ಬರ ದಾಸ್ತಾನಿರಿಸಿ ತಮಿಳುನಾಡಿಗೆ ಲಾರಿ ಮೂಲಕ ಸಾಗಿಸಲು ಸಿದ್ದತೆ ನಡೆಸುತ್ತಿದ್ದ ವೇಳೆ ಪೊಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಗೊಬ್ಬರದ ಚೀಲಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಇನ್ನು ಅಕ್ರಮ ರಸ ಗೊಬ್ಬರ ದಾಸ್ತಾನು ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ತನಿಖೆ ನಂತರವಷ್ಟೇ ತಿಳಿದು ಬರಬೇಕಿದೆ.
ದೊಡ್ಡ ಜಾಲವೇ ಇರುವ ಶಂಕೆ: ಗುಂಡ್ಲುಪೇಟೆ ತಾಲೂಕು ಕೇರಳ ಮತ್ತು ತಮಿಳುನಾಡಿನ ಗಡಿಯಾಗಿರುವ ಹಿನ್ನೆಲೆ ರಾಜ್ಯದಿಂದ ನಿರಂತರವಾಗಿ ರಸ ಗೊಬ್ಬರ ಅಕ್ರಮವಾಗಿ ತಮಿಳುನಾಡಿಗೆ ಸಾಗಣೆಯಾಗುತ್ತಿದೆ. ಇಲ್ಲಿ ಕಡಿಮೆ ಬೆಲೆಗೆ ಗೊಬ್ಬರ ತೆಗೆದುಕೊಂಡು ತಮಿಳುನಾಡಿನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವಿದ್ದು, ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕೆಂದು ರೈತ ಮುಖಂಡ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಗಾಂಜಾದ ಮತ್ತಿನಲ್ಲಿ 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆಗೈದ ಯುವಕರು