Advertisement
ಸುತ್ತಲೂ ಕಲ್ಲಿನ ಗುಡ್ಡ. ಸಮರ್ಪಕ ರಸ್ತೆ, ವಿದ್ಯುತ್ ಸಂಪರ್ಕ ಇಲ್ಲ. ಅಲ್ಲಿಗೆ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹೋಗುವಂತಿಲ್ಲ. ಇನ್ನು ಆ ಪ್ರದೇಶ ತಲುಪಲು ಅರ್ಧ ಕಿ.ಮೀ. ನಡೆದುಕೊಂಡೇ ಹೋಗಬೇಕು. ಇಂಥ ಕಲ್ಲು-ಮುಳ್ಳುಗಳಿಂದ ಕೂಡಿದ ಗುಡ್ಡವನ್ನೇ ಕಡಿದು ಹೊಲವನ್ನಾಗಿ ಪರಿವರ್ತಿಸಿಕೊಂಡ ರೈತನೊಬ್ಬ ಸಮಗ್ರ ಕೃಷಿ ಪದ್ಧತಿಯಡಿ ವಿವಿಧ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಾವಿರಾರು ರೂ. ಆದಾಯ ಗಳಿಸುತ್ತಿದ್ದಾನೆ.
Related Articles
ಗುಡ್ಡದ ಬಳಿ ಕೃಷಿ ಮಾಡುತ್ತಿದ್ದ ಮಹಾಗುಂಡಪ್ಪ ಕಮತರ 2005ರಲ್ಲಿ ಪಿತ್ರಾರ್ಜಿತ ಆಸ್ತಿ ಕೃಷಿ ಜಮೀನಿನ ನೋಂದಣಿಗೆ ಮುಂದಾದರು. ಸರ್ವೆಯ ವೇಳೆ ಇವರ ಜಮೀನು ಬೇರೆಡೆ ಗುರುತಿಸಲ್ಪಟ್ಟಿತ್ತು. ಪರಿಣಾಮವಾಗಿ, ಕೃಷಿ ಕಾಯಕವನ್ನೇ ನಿಲ್ಲಿಸಬೇಕಾಯಿತು. ಇದರಿಂದ ಮಹಾಗುಂಡಪ್ಪ ವಿಚಲಿತರಾದರೂ ಕೃಷಿ ಬಗ್ಗೆ ಇವರಿಗಿರುವ ಆಸಕ್ತಿ ಸುಮ್ಮನಿರಲು ಬಿಡಲಿಲ್ಲ. ಎಲ್ಲರ ಮಾತನ್ನು ಧಿಕ್ಕರಿಸಿ, ತಮ್ಮ ಪಾಲಿಗೆ ಬಂದ ಕಲ್ಲಿನ ಗುಡ್ಡವನ್ನೇ ಸಮತಟ್ಟು ಮಾಡಲು ಮುಂದಾದರು. ಸತತ 5 ವರ್ಷಗಳ ಕಾಲ ಗುಡ್ಡವನ್ನು ಅಗೆದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಬಗೆದರು. ಬುಟ್ಟಿಗಟ್ಟಲೇ ಮಣ್ಣು ಹೊತ್ತು ಹಾಕಿದರು. ನಂತರ ಕೃಷಿಗೆ ಮುಂದಾದಾಗ ಎದುರಾಗಿದ್ದು ನೀರಿನ ಸಮಸ್ಯೆ. ಆಗ ತಾವೇ ಸುಮಾರು 12-14 ಅಡಿ ಆಳ, 6 ಅಡಿ ಅಗಲದ ವಿಸ್ತೀರ್ಣದ ಬಾವಿ ತೆಗೆದರು. ತಮ್ಮ ಹೊಲಕ್ಕೆ ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಬಾವಿಯಲ್ಲಿ ಸಂಗ್ರಹಿಸಿ ಬಳಸಲು ಆರಂಭಿಸಿದರು. ಈಗಲೂ ಅದೇ ನೀರನ್ನೇ ಬೆಳೆಗಳಿಗೆ ಉಪಯೋಗಿಸುತ್ತಾರೆ. ತನ್ನ ಜಮೀನಿನಲ್ಲಿರುವ ಒಂದು ಅಡಿ ಜಾಗವನ್ನೂ ಇವರು ಖಾಲಿ ಬಿಡುವುದಿಲ್ಲ. ಹೊಲದ ಬದುವಿನಲ್ಲೂ ವಿವಿಧ ಬಗೆಯ ಬಳ್ಳಿಗಳನ್ನು ಬೆಳೆಸಿದ್ದಾರೆ.
Advertisement
ಹೊಲದಲ್ಲಿ ಏನುಂಟು?ಕಲ್ಲು ಬಂಡೆಗಳ ನಡುವಿನ ಗರಸು ಮಣ್ಣಿನ ಭೂಮಿಯಲ್ಲಿ ಅಸಾಧ್ಯ ಎಂಬುದನ್ನು ಮಹಾಗುಂಡಪ್ಪ ಸಾಧ್ಯವನ್ನಾಗಿಸಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ನುಗ್ಗೆ (20 ಗಿಡ), ಲಿಂಬು (30), ಪೇರು (30), ಕರಿಬೇವು (20), ಚಿಕ್ಕು (5), ಮಾವು (9), ಬೆಟ್ಟದ ನೆಲ್ಲಿ (02), ಒಂದೊಂದು ಮೋಸಂಬಿ, ದಾಳಿಂಬೆ ಗಿಡ ಬೆಳೆಸಿದ್ದಾರೆ. ವರ್ಷಕ್ಕೆರಡು ಹಂತದಲ್ಲಿ ವಿವಿಧ ತರಕಾರಿ ಬೆಳೆಯುತ್ತಾರೆ. ಮುಖ್ಯವಾಗಿ ಹಿರೇಕಾಯಿ, ಸೌತೆ, ಬೆಂಡಿ, ಟೋಮೆಟೋ, ಬದನೆ, ಮೆಣಸಿನಕಾಯಿ ಬೆಳೆಗಳನ್ನು ಮಿಶ್ರ ಪದ್ಧತಿಯಲ್ಲಿ ಬೆಳೆಯುತ್ತಾರೆ. ಪ್ರಮುಖ ಹಬ್ಬಗಳಿಗೆ ಚೆಂಡು ಹೂ, ಕಬ್ಬು, ಬಗೆ-ಬಗೆಯ ಸೊಪ್ಪು (ಕೋತ್ತಂಬರಿ, ಮೆಂತೆ, ಪಾಲಕ್, ಪುಂಡಿಪಲ್ಲೆ, ಸಬ್ಬಸಗಿ, ಹಕ್ಕರಕಿ) ಕಟಾವಿಗೆ ಬರುವಂತೆ ಬೇಸಾಯ ಮಾಡುತ್ತಾರೆ. ಸಮೀಪದ ಗುಳೇದಗುಡ್ಡಕ್ಕೆ ಹೋಗಿ ತರಕಾರಿ ಮಾರುತ್ತಾರೆ. ಇವರಿಗೆ ಒಂದು ವರ್ಷಕ್ಕೆ ಬರೀ ತರಕಾರಿಯಿಂದಲೇ ಬರುವ ಆದಾಯವೆಷ್ಟು ಗೊತ್ತೆ? ಸುಮಾರು 50-60 ಸಾವಿರ ರೂ. ಅದರಲ್ಲಿ ತರಕಾರಿ ಬೆಳೆಗೆ ತಗುಲಿದ ಖರ್ಚು-ವೆಚ್ಚ 15 ಸಾವಿರ ರೂ. ಅಂದರೆ, ತರಕಾರಿ ಕೃಷಿಯಿಂದ ವರ್ಷಕ್ಕೆ ಕನಿಷ್ಠ 45 ಸಾವಿರ ರೂ. ಆದಾಯವಂತೂ ಗ್ಯಾರಂಟಿ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಅಭಾವ ಆದಾಗ ಜನರೇಟರ್ ಮೂಲಕ ಬಾವಿಯ ನೀರನ್ನು ಬೆಳೆಗಳಿಗೆ ಪೂರೈಸುತ್ತಾರೆ. ಹೀಗಾಗಿ ವರ್ಷವಿಡೀ ತರಕಾರಿ ಬೆಳೆಯುತ್ತಾರೆ. ತರಕಾರಿ ಮತ್ತು ಇತರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ಆಕಳಿನ ಕೊಟ್ಟಿಗೆ ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತಿರುವುದರಿಂದ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ವಿನೂತನ ಯತ್ನ
ಗುಡ್ಡದಲ್ಲಿನ ತಮ್ಮ ಜಮೀನನಿನ ಉಳುಮೆ ಮಾಡಲು ಹತ್ತಾರು ಸಮಸ್ಯೆ ಎದುರಿಸಿದ ಇವರು, ಕೊನೆಗೆ ವಿನೂತನ ಯತ್ನದಿಂದ ಕೃಷಿ ಆರಂಭಿಸಿದರು. ಸೈಕಲ್‌ನಿಂದ ತಾವೇ ಕೈ ಕುಂಟೆ ತಯಾರಿಸಿಕೊಂಡಿದ್ದು ಇದರಿಂದಲೇ ಉಳುಮೆ ಮಾಡುವ ಇವರಿಗೆ ಎತ್ತು, ಟ್ರಾÂಕ್ಟರ್ ಎಲ್ಲವೂ ಈ ಕೈ ಕುಂಟೆ. ಬಿತ್ತನೆಯನ್ನು ಸಹ ಇದರಿಂದಲೇ ಮಾಡುವುದು ವಿಶೇಷ.ಬಹಳಷ್ಟು ಜನ ಕೃಷಿಯತ್ತ ವಿಮುಖವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಶ್ರಮಜೀವಿ ಮಹಾ “ಗುಂಡಪ್ಪ’ ರೈತರಿಗೆ ಮಾದರಿಯಾಗಿದ್ದಾರೆ. ಈತನ ಸಾಧನೆ ಗುರುತಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯ 2015ರಲ್ಲಿ “ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಶರಣು ಹುಬ್ಬಳ್ಳಿ