Advertisement
ಸುತ್ತಲೂ ಕಲ್ಲಿನ ಗುಡ್ಡ. ವಿದ್ಯುತ್ ಸಂಪರ್ಕ ಇಲ್ಲ. ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹೋಗುವಂತಿಲ್ಲ. ಇನ್ನು ಆ ಪ್ರದೇಶ ತಲುಪಲು ಅರ್ಧ ಕಿ.ಮೀ. ನಡೆದುಕೊಂಡೇ ಹೋಗಬೇಕು. ಇಂಥ ಕಲ್ಲು-ಮುಳ್ಳುಗಳಿಂದ ಕೂಡಿದ ಗುಡ್ಡವನ್ನೇ ಕಡಿದು ಹೊಲವನ್ನಾಗಿ ಪರಿವರ್ತಿಸಿದರೆ ಹೇಗೆ?
Related Articles
ಗುಡ್ಡದ ಬಳಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಮಹಾಗುಂಡಪ್ಪ ಕಮತರ ಅವರಿಗೆ, 2005ರಲ್ಲಿ ಪಿತ್ರಾರ್ಜಿತ ಆಸ್ತಿ ಭಾಗವಾಯಿತು. ಆಗ ಕೃಷಿ ಜಮೀನಿನ ನೋಂದಣಿಗೆ ಮುಂದಾದರು. ಸರ್ವೇ ವೇಳೆ ಇವರ ಜಮೀನು ಬೇರೆಡೆ ಗುರುತಿಸಲ್ಪಟ್ಟಿತ್ತು. ಅನಿವಾರ್ಯವಾಗಿ ಕೃಷಿ ಕಾಯಕ ನಿಲ್ಲಿಸಬೇಕಾಯಿತು. ಇದರಿಂದ ಮಹಾಗುಂಡಪ್ಪ ವಿಚಲಿತರಾದರೂ, ಕೃಷಿ ಬಗೆಗಿನ ಆಸಕ್ತಿ ಸುಮ್ಮನಿರಲು ಬಿಡಲಿಲ್ಲ. ಎಲ್ಲರ ಮಾತನ್ನು ಧಿಕ್ಕರಿಸಿ ತಮ್ಮ ಪಾಲಿಗೆ ಬಂದ ಕಲ್ಲಿನ ಗುಡ್ಡವನ್ನೇ ಸಮತಟ್ಟು ಮಾಡಲು ಮುಂದಾದರು. ಸತತ 5 ವರ್ಷಗಳ ಕಾಲ ಗುಡ್ಡವನ್ನು ಅಗೆದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಬಗೆದರು. ಬುಟ್ಟಿಗಟ್ಟಲೇ ಮಣ್ಣು ಹೊತ್ತು ಹಾಕಿದರು. ನಂತರ ಕೃಷಿಗೆ ಮುಂದಾದಾಗ ಎದುರಾಗಿದ್ದು ನೀರಿನ ಸಮಸ್ಯೆ. ಆಗ ತಾವೇ ಸುಮಾರು 12-14 ಅಡಿ ಆಳ, 6 ಅಡಿ ಅಗಲದ ವಿಸ್ತೀರ್ಣದ ಬಾವಿ ತೆಗೆದರು. ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಈ ಬಾವಿಯಲ್ಲಿ ಸಂಗ್ರಹಿಸಿದರು. ಈಗಲೂ ಅದೇ ನೀರನ್ನೇ ಬೆಳೆಗಳಿಗೆ ಉಪಯೋಗಿಸತ್ತಿದ್ದಾರೆ. ತನ್ನ ಜಮೀನಿನಲ್ಲಿರುವ ಒಂದು ಅಡಿ ಜಾಗವನ್ನು ಇವರು ಹಾಗೆ ಬಿಡುವುದಿಲ್ಲ. ಹೊಲದ ಬದುವಿನಲ್ಲೂ ವಿವಿಧ ಬಗೆಯ ಬಳ್ಳಿಗಳನ್ನು ಇವರು ಬೆಳೆಸಿದ್ದಾರೆ.
Advertisement
ಹೊಲದಲ್ಲಿ ಏನೇನುಂಟು?ಒಂದು ಎಕರೆ ಜಮೀನಿನಲ್ಲಿ ನುಗ್ಗೆ (20 ಗಿಡ), ಲಿಂಬು (30), ಪೇರು (30), ಕರಿಬೇವು (20), ಚಿಕ್ಕು (5), ಮಾವು (9), ಬೆಟ್ಟದ ನೆಲ್ಲಿ (02), ಒಂದೊಂದು ಮೋಸಂಬಿ, ದಾಳಿಂಬೆ ಗಿಡ ಬೆಳೆಸಿದ್ದಾರೆ. ಜೊತೆಗೆ ವರ್ಷಕ್ಕೆರಡು ಹಂತದಲ್ಲಿ ಹಿರೇಕಾಯಿ, ಸೌತೆ, ಬೆಂಡೆ, ಟೊಮೆಟೊ, ಬದನೆ, ಮೆಣಸಿನಕಾಯಿ ಬೆಳೆಗಳನ್ನು ಮಿಶ್ರ ಪದ್ಧತಿಯಲ್ಲಿ ಬೆಳೆಯುತ್ತಾರೆ. ಪ್ರಮುಖ ಹಬ್ಬಗಳಿಗೆ ಚೆಂಡು ಹೂ, ಕಬ್ಬು, ಬಗೆ ಬಗೆಯ ಸೊಪ್ಪು (ಕೊತ್ತಂಬರಿ, ಮೆಂತ್ಯೆ, ಪಾಲಕ್, ಪುಂಡಿಪಲ್ಲೆ, ಸಬ್ಬಸಗಿ, ಹಕ್ಕರಕಿ) ಕಟಾವಿಗೆ ಬರುವಂತೆ ಬೇಸಾಯ ಮಾಡುತ್ತಾರೆ. ಸಮೀಪದ ಗುಳೇದಗುಡ್ಡಕ್ಕೆ ಹೋಗಿ ತರಕಾರಿ ಮಾರುತ್ತಾರೆ. ವರ್ಷಕ್ಕೆ ಬರೀ ತರಕಾರಿಯಿಂದಲೇ ಬರುವ ಸುಮಾರು 50-60 ಸಾವಿರ ರೂ. ಲಾಭದಲ್ಲಿ ಖರ್ಚು-ವೆಚ್ಚ 15 ಸಾವಿರ ರೂ. ಆದರೂ ಕನಿಷ್ಠ 45 ಸಾವಿರ ರೂ. ಆದಾಯವಂತೂ ಗ್ಯಾರಂಟಿ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಅಭಾವ ಆದಾಗ ಜನರೇಟರ್ ಮೂಲಕ ಬಾವಿ ನೀರನ್ನು ಬೆಳೆಗಳಿಗೆ ಪೂರೈಸುತ್ತಾರೆ. ಹೀಗಾಗಿ ವರ್ಷವಿಡೀ ತರಕಾರಿ ಬೆಳೆಯುತ್ತಾರೆ. ತರಕಾರಿ ಮತ್ತು ಇತರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ತಮ್ಮ ಎರಡು ಆಕಳಿನ ಕೊಟ್ಟಿಗೆ ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತಿರುವುದರಿಂದ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಕುಟುಂಬದ ಸದಸ್ಯರು ಇವರಿಗೆ ಸಾಥ್ ನೀಡುತ್ತಾರೆ. ವಿನೂತನ ಯತ್ನ
ಗುಡ್ಡದಲ್ಲಿನ ತಮ್ಮ ಜಮೀನಿನ ಉಳುಮೆ ಮಾಡಲು ಹತ್ತಾರು ಸಮಸ್ಯೆ. ಕೊನೆಗೆ ಸೈಕಲ್‌ನಿಂದ ತಾವೇ ಕೈ ಕುಂಟೆ ತಯಾರಿಸಿಕೊಂಡು, ಇದರಿಂದಲೇ ಉಳುಮೆ ಮಾಡ ತೊಡಗಿದರು. ಬಿತ್ತನೆಯನ್ನು ಸಹ ಇದರಿಂದಲೇ ಮಾಡುವುದು ವಿಶೇಷ. ಬಹಳಷ್ಟು ಜನ ಕೃಷಿಯತ್ತ ವಿಮುಖವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಶ್ರಮಜೀವಿ ಮಹಾ “ಗುಂಡಪ್ಪ’ ಇತರರಿಗೆ ಮಾದರಿಯಾಗಿದ್ದಾರೆ. ಇವರ ಸಾಧನೆ ಗುರುತಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯ 2015ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಶರಣು ಹುಬ್ಬಳ್ಳಿ