ಸುವರ್ಣ ಸೌಧ: ಮಾಜಿ ಸಚಿವ, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಗುರುವಾರ ವಿಧಾನಸಭೆಯಲ್ಲಿ ಮತಾಂತರದ ತೀವ್ರತೆಯನ್ನು ತೆರೆದಿಟ್ಟು, ನಾನು ಅನುಭವಿಸಿದ ಯಾತನೆ ಯಾರಿಗೂ ಬೇಡ ಎಂಡಿದ್ದಾರೆ.
ನಮ್ಮ ಮನೆ ಬಾಗಿಲಿಗೆ ಹಾಕಿರುವ ಗಣೇಶ ಮೂರ್ತಿ ತೆಗೆದು ಶಿಲುಬೆ ಹಾಕಿದರೆ ಮಾತ್ರ ಮನೆಗೆ ಬರುತ್ತೇನೆ ಎಂದು ನನ್ನ ಅಮ್ಮ ಪಟ್ಟು ಹಿಡಿದಿದ್ದರು. ಕ್ರಿಸ್ತನ ಭಜನೆಯ ರಿಂಗ್ ಟೋನ್ ಹಾಕಿಕೊಂಡಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಇಂಥ ನೂರಾರು ಘಟನೆ ನಡೆದಿದೆ ಎಂದು ನೋವು ತೋಡಿಕೊಂಡರು.
ನಮ್ಮ ಕ್ಷೇತ್ರದಲ್ಲಿ ಅನೇಕ ಕುಟುಂಬಗಳು ಮತಾಂತರದಿಂದ ಒಡೆದು ಹೋಗಿವೆ. ಸಂಬಂಧಗಳು ನಾಶ ಆಗಿವೆ. ನನ್ನ ತಾಯಿ ಮನೆಯಲ್ಲಿದ್ದ ದೇವರ ಫೋಟೊ, ದೇವರ ಪೂಜಾ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ಕೊಟ್ಟು ಬಂದಿದ್ದರು. ಮನೆಯಲ್ಲಿ ಶಿಲುಬೆ, ಫೋಟೊ ಮೊಬೈಲ್‌ನಲ್ಲಿ ರಿಂಗ್ ಟೋನ್ ಕೂಡಾ ಕ್ರೃೈಸ್ತ ಧರ್ಮದ್ದು. ಇದರಿಂದ ನಾನು ಅನುಭವಿಸಿದ ಯಾತನೆ ಯಾರಿಗೂ ಬೇಡ ಎಂದರು.
ನಮ್ಮ ಊರಲ್ಲಿ ಒರಿಜಿನಲ್ ಕ್ರೈಸ್ತರಿಂದ ಯಾವ ತೊಂದರೆಯೂ ಇಲ್ಲ. ಎಲ್ಲ ಬೆರಕೆಗಳಿಂದಲೇ ಸಮಸ್ಯೆ ಆಗಿರುವುದು. ನಮ್ಮಲ್ಲಿ ಲಿಂಗಾಯಿತ, ಭೋವಿ ಸಮಾಜದ ಪಾದ್ರಿಗಳಿರುವ ಚರ್ಚ್‌ಗಳಿವೆ. ಅಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು ಅನೇಕ ಮಂದಿ ಹೋಗುತ್ತಿದ್ದಾರೆ. ಇವು ಕಾನೂನು ಬದ್ಧ ಚರ್ಚ್‌ಗಳಲ್ಲ. ಇಲ್ಲಿ ಕಾನೂನು ಬಾಹಿರವಾಗಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದರು.
ಇಂತವರ ವಿರುದ್ಧ ಮಾತನಾಡಿದರೆ ದಲಿತ ದೌರ್ಜನ್ಯದ ಕೇಸ್‌ಗಳನ್ನು ಮತಾಂತರಗೊಂಡವರಿಂದಲೇ ಹಾಕಿಸುತ್ತಾರೆ. ನಮ್ಮ ಸರಕಾರವೇ ಇದ್ದರೂ ಕೇಸ್ ಗಳನ್ನು ವಾಪಸ್ ಪಡೆಯಲು ಅಸಾಧ್ಯವಾಗಿದೆ. ನಾನು ಸಚಿವನಾಗಿದ್ದಾಗ ಮತಾಂತರವನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧವೇ ಪ್ರತಿಭಟನೆಗಳನ್ನು ನಡೆಸಿದ್ದರು ಎಂದು ಬೇಸರ ವ್ಯಕ್ತ ಪಡಿಸಿದರು.