ಗುಳೇದಗುಡ್ಡ: ಭಾರತದಲ್ಲಿ ಕೃಷಿಯತ್ತ ಯುವ ಜನಾಂಗದ ಆಸಕ್ತಿ ಕಡಿಮೆಯಾಗುತ್ತಿದೆ. ಇಂದು ಯುವಕರು ಕೃಷಿಯ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಅಮೂಲಾಗ್ರ ಪ್ರಗತಿ ಮಾಡಬೇಕಾಗಿದೆ ಜೊತೆಗೆ ಈಗಿರುವ ಕೃಷಿ ಪದ್ದತಿ ಬದಲಾವಣೆ ಮಾಡಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ ಹೇಳಿದರು.
ಮುರುಡಿ ಗ್ರಾಮದ ಕರಿಯಪ್ಪ ಸೀತಿಮನಿ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳ ಕ್ಷೇತ್ರೋತ್ಸವ ಮತ್ತು
ವಿಚಾರ ಸಂಕಿರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ವಿವಿಧ ಹಣ್ಣುಗಳ ಬೆಳೆಗೆ ಸಹಾಯಧನ ನೀಡುತ್ತಿದೆ. ರೈತರು ಹಿರಿಯರು ಗಳಿಸಿದ ಭೂಮಿಯನ್ನು ಉಳಿಸಿಕೊಂಡು, ನೀರನ್ನು ಮಿತವಾಗಿ ಬಳಸಿ ತೋಟಗಾರಿಕೆ ಬೆಳೆ ಬೆಳೆದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಅಮರೇಶ್ವರ ಮಠದ ಡಾ| ನೀಲಕಂಠ ಶಿವಾಚಾರ್ಯ ಶ್ರೀ ಸಾನಿಧ್ಯವಹಿಸಿ ಮಾತನಾಡಿ, ಅಧಿ ಕ ಹಾಗೂ ತಕ್ಷಣದ ಲಾಭಕ್ಕೆ ದಲ್ಲಾಳಿಗಳು ಬಾಳೆಹಣ್ಣನ್ನು ರಾಸಾನಿಕಯುಕ್ತ ಮಾಡದೇ, ನೈಸರ್ಗಿಕವಾಗಿ ಹಣ್ಣಾಗಲು ಬಿಡುವ ಕ್ರಮವನ್ನು ಸರ್ಕಾರ ಮತ್ತು ತೋಟಗಾರಿಕೆ ವಿಜ್ಞಾನಿಗಳು ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕರಿಯಪ್ಪ ಸೀತಿಮನಿ ಅವರನ್ನು ವಿವಿಧ ಸಂಘ ಸಂಸ್ಥೆಯವರು ಸನ್ಮಾನಿಸಿದರು. ಬಾಗಲಕೋಟೆಯ ತೋಟಗಾರಿಕೆ ವಿ.ವಿ.ಯ ಹಣ್ಣು ವಿಭಾಗದ ಪ್ರಾಧ್ಯಾಪಕ ಆನಂದ ನಂಜಪ್ಪನವರ್, ಕೃಷಿ ಅಧಿಕಾರಿ ಆನಂದಗೌಡ ಗೌಡರ ಮಾತನಾಡಿದರು. ಬಾದಾಮಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಾನುಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾನಾಪುರ ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ಕವಿಶೆಟ್ಟಿ, ಗುರುರಾಜ ಮುಕುಂದ, ಪಿ.ವಿ.ಜಾಧವ, ಎಂ.ಪಿ.ಮಾಗಿ, ಎನ್.ಬಿ.ಮಾಚಾ ಉಪಸ್ಥಿತರಿದ್ದರು.
ರೈತರು ಬೆಳೆದ ಹಣ್ಣುಗಳಿಗೆ ರಾಸಾಯನಿಕ ಸಿಂಪಡಿಸಿ ಬೇಗ ಹಣ್ಣು ಮಾಡಿ ಮಾರುಕಟ್ಟೆಗೆ ತರುವ ಪದ್ಧತಿಯನ್ನು ಸರ್ಕಾರ ನಿರ್ಬಂಧಿ ಸಬೇಕು. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬೆಳೆ, ಹಣ್ಣು ಕೆಡದಂತೆ ಇಡಲು ಬೇರೆ ಮಾರ್ಗವನ್ನು ಸರ್ಕಾರ ಹಾಗೂ ತೋಟಗಾರಿಕೆ ಮತ್ತು ಕೃಷಿ ವಿಜ್ಞಾನಿಗಳು ಕಂಡುಕೊಳ್ಳಬೇಕು.
ಎಸ್.ಎಸ್.ನಾರಾ ಪ್ರಗತಿಪರ ರೈತರು,
ಗುಳೇದಗುಡ್ಡ