Advertisement

ಗುಳೇದಗುಡ್ಡ: ನಿತ್ಯವೂ ಧೂಳಿನ ಮಜ್ಜನ; ಬೇಸತ್ತ ಜನ!

05:35 PM Jan 31, 2024 | Team Udayavani |

ಉದಯವಾಣಿ ಸಮಾಚಾರ
ಗುಳೇದಗುಡ್ಡ: ಕಲ್ಲುಪುಡಿ ಘಟಕದ ಧೂಳಿನಿಂದ ನಾಲ್ಕೂರಿನ ಜನರಿಗೆ ನಿತ್ಯವೂ ಧೂಳಿನ ಮಜ್ಜನವಾಗುತ್ತಿದ್ದು, ಧೂಳು ಹೊರ ಬರದಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

Advertisement

ಹೌದು. ಸಮೀಪದ ಮುರಡಿ ಬಳಿ ಇರುವ ಸ್ಟೋನ್‌ ಮತ್ತು ಸಿಲ್ಕ್ ಸ್ಯಾಂಡ್‌ ಕಾರ್ಖಾನೆಯಿಂದ ನಡೆಯುತ್ತಿರುವ ಗಣಿಗಾರಿಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ಧೂಳು ಬರುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಮುರುಡಿ ಗ್ರಾಮದ ಹೊರ ವಲಯದ ಗುಡ್ಡದಲ್ಲಿ ನಡೆಯುತ್ತಿರುವ ಈ ಕಾರ್ಖಾನೆಯಿಂದ ಹೊರ ಬರುವ ಧೂಳಿನಿಂದ ಹಾನಾಪೂರ, ಖಾನಾಪೂರ, ಮುರುಡಿ, ಹುಲ್ಲಿಕೇರಿ ಎಸ್‌.ಪಿ. ಗ್ರಾಮಸ್ಥರು ರೋಸಿ ಹೋಗಿದ್ದು, ಸಂಜೆಯಾದರೆ ಸಾಕು ಧೂಳು ಆವರಿಸಿಕೊಳ್ಳುತ್ತದೆ.

ಗುಳೇದಗುಡ್ಡ ಹೋಬಳಿಯ ಕೋಟೆಕಲ್‌ ಪಂಚಾಯಿತಿ ವ್ಯಾಪ್ತಿಯ ಈ ಕಲ್ಲು ಗಣಿಗಾರಿಕೆಯಿಂದ ಪರಿಸರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಸಾರ್ವನಿಕರಿಗೆ, ಪ್ರಾಣಿ ಸಂಕುಲಗಳಿಗೆ ಹಾನಿಯಾಗದ ರೀತಿಯಲ್ಲಿ ಕ್ರಷರ್‌ ನಡೆಸಬೇಕೆಂಬ ನಿಯಮವಿದ್ದರೂ ಬೇಕಾಬಿಟ್ಟಿಯಾಗಿ ಈ ಕ್ರಷರ್‌ ನಡೆಸಲಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಸುಮಾರು ಮೂರು ಕಿಮೀ ವ್ಯಾಪ್ತಿ ಧೂಳು ಆವರಿಸಿಕೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಸ್ತಮಾ ಭೀತಿ: ಈ ಕ್ರಷರ್‌ ಕಾರ್ಖಾನೆಯಿಂದ ಹೊರ ಸೂಸುವ ಧೂಳು ನೇರವಾಗಿ ಮುರುಡಿ, ಖಾನಾಪೂರ ಎಸ್‌.ಪಿ, ಹುಲ್ಲಿಕೇರಿ, ಹಾನಾಪೂರ ಎಸ್‌.ಪಿ ಗ್ರಾಮಗಳ ಸುತ್ತ ಬೀಳುತ್ತಿದೆ. ಹೀಗಾಗಿ ಇಲ್ಲಿಯ ಜನ ಅಸ್ತಮಾದಂತಹ ಕಾಯಿಲೆ ಬರುವ
ಭೀತಿಯಲ್ಲಿ ವಾಸಿಸುತ್ತಿದ್ದಾರೆ.

Advertisement

ಬೆಳೆ ಗಿಡ ಧೂಳುಮಯ: ಖಾನಾಪುರ ವ್ಯಾಪ್ತಿಯಲ್ಲಿ ಸುಮಾರು 100 ಹೆಕ್ಟೇರ್‌ ಪ್ರದೇಶ ವ್ಯಾಪ್ತಿಯಲ್ಲಿ ಈ ಧೂಳು ಆವರಿಸುತ್ತಿದ್ದು ಬೆಳೆದ ಬೆಳೆಯಲ್ಲ ಧೂಳುಮಯವಾಗುತ್ತಿದೆ. ಮುರುಡಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ಅನೇಕ ಗಿಡಗಳಿಗೂ ಈ ಧೂಳು ಆವರಿಸಿದೆ. ಧೂಳು ನಿಯಂತ್ರಿಸಿ, ಪರಿಸರ ಕಾಳಜಿ ತೋರುವ ನಿಟ್ಟಿನಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಮುಂದಾಗಬೇಕಿದೆ ಎಂಬ ಒತ್ತಾಯ ಕೇಳಿ ಬಂದಿದೆ.

ಮುರುಡಿ ಗ್ರಾಮದ ಕ್ರಷರ್‌ ಕಾರ್ಖಾನೆಯಿಂದ ಹೊರ ಬರುವ ಧೂಳು ನಿಯಂತ್ರಿಸಲು ಕಾರ್ಖಾನೆ ಮಾಲೀಕರು ಜನವರಿ  ಅಂತ್ಯದೊಳಗೆ ಯಂತ್ರ ಅಳವಡಿಸುತ್ತೇವೆಂದು ತಿಳಿಸಿದ್ದಾರೆ. ನಾನು ಕೂಡಾ ಮತ್ತೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೂ ಈ ಕುರಿತು ಮಾತನಾಡುತ್ತೇನೆ.
*ಮಂಗಳಾ ಎಂ, ತಹಸೀಲ್ದಾರ್‌, ಗುಳೇದಗುಡ್ಡ.

ಮುರುಡಿ, ಹುಲ್ಲಿಕೇರಿ ಎಸ್‌.ಪಿ, ಹಾನಾಪುರ ಎಸ್‌.ಪಿ. ಕೋಟೆಕಲ್‌, ಖಾನಾಪುರ ಗ್ರಾಮದಲ್ಲಿ ಎಲ್ಲವೂ ಧೂಳಮಯವಾಗುತ್ತಿದೆ.
ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ತಹಸೀಲ್ದಾರರು ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಸರಕಾರದ ನಿಯಮ ಪಾಲನೆಯಾಗುತ್ತಿಲ್ಲ. ಜನರ ಆರೋಗ್ಯ ಹದಗೆಟ್ಟರೆ ಅಧಿಕಾರಿಗಳೇ ಹೊಣೆ.
*ಪಿಂಟು ರಾಠೊಡ, ಹುಲ್ಲಿಕೇರಿ ಎಸ್‌ಪಿ,
ಶಿವು ವಾಲಿಕಾರ, ಮುರುಡಿ ಗ್ರಾಮಸ್ಥರು

ಜನರ ದೇಹದೊಳಗೆ ಧೂಳಿನ ಖಣಗಳು ಸೇರುತ್ತಿದ್ದು, ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಕೂಡಲೇ ಕ್ರಷರ್‌ನಿಂದ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಬೇಕು. ಧೂಳು ಗ್ರಾಮಗಳಿಗೆ ಬರದಂತೆ ಮಾಲಿಕರಿಗೆ ಸೂಚನೆ ನೀಡಬೇಕು.
*ಮಾರುತಿ ದ್ಯಾಮನಗೌಡ್ರ,
ಪಾಂಡು ಗೌಡರ, ಮುರುಡಿ ಗ್ರಾಮಸ್ಥರು.

ಕಾರ್ಖಾನೆಗೆ ಸದ್ಯ ಒಂದು ವಾಟರ್‌ ಫಾಗ್‌ ಅಳವಡಿಸಲಾಗಿದ್ದು, ಇನ್ನೊಂದು ವಾಟರ್‌ ಫಾಗ್‌ ಆರ್ಡರ್‌ ಕೊಡಲಾಗಿದೆ. ಮುಂಬೈನಿಂದ ಆ ಯಂತ್ರ ಬರಲಿದೆ. 2-3 ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ.
*ಮುರುಗೇಶ ಕಡ್ಲಿಮಟ್ಟಿ,
ಕ್ರಷರ್‌ ಮಾಲಿಕರು

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next