Advertisement

ಆಳಂದ; ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

03:29 PM Jan 12, 2021 | Team Udayavani |

ಆಳಂದ: ಕಳೆದ ಒಂದೂವರೆ ತಿಂಗಳಿಂದಲೂ ಕೇಂದ್ರದ ಮೂರು ಕೃಷಿ ಕಾನೂನುಗಳು ರದ್ದುಪಡಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತರು ಹಮ್ಮಿಕೊಂಡ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸೋಮವಾರ ಪಟ್ಟಣದಲೂ ರೈತರು ಸೇರಿ ಬೃಹತ್‌ ಚಳವಳಿ ನಡೆಸಿ ಭಾರೀ ಬೆಂಬಲ ವ್ಯಕ್ತಪಡಿಸಿದರು.

Advertisement

ಕ್ಷೇತ್ರದ ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ನೇತೃತ್ವದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ರೈತರು ಟ್ರಾಕ್ಟರ್‌, ಬೈಕ್‌ ಮತ್ತು ಜೀಪ್‌ ಮೂಲಕ ರ್ಯಾಲಿಯಲ್ಲಿ ಆಗಮಿಸಿ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ಕೈಗೊಂಡ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

22 ಕಿಮೀ ಅಂತರದ ಕಡಗಂಚಿಯಿಂದ ಬೈಕ್‌ ರ್ಯಾಲಿಯ ಮೂಲಕ ಆಗಮಿಸಿದ್ದ ಬಿ.ಆರ್‌. ಪಾಟೀಲ, ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ ಸೇರಿದಂತೆ ನೂರಾರು ಕಾರ್ಯಕರ್ತರು ಹೊರವಲಯದ ಹಳೆಯ ಚೆಕ್‌ಪೋಸ್ಟ್‌ ಬಳಿ ಕೆಲಕಾಲ ರಸ್ತೆತಡೆ ನಡೆಸಿದ ಬಳಿಕ ಮುಖಂಡರು ಮಾತನಾಡಿ, ರೈತರ ಹೋರಾಟ ಬೆಂಬಲಿಸಿ ಕೇಂದ್ರ ಸರ್ಕಾರ ಕೂಡಲೇ ಕೃಷಿ ಮಸೂದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು.ಇದೇ ವೇಳೆ ಇನ್ನುಳಿದ ಭಾಗಗಳಿಂದ ರೈತ ಕಾರ್ಯಕರ್ತರು ರ್ಯಾಲಿ ಆಗಮಿಸಿ ಪಾಲ್ಗೊಂಡಿದ್ದರು.

ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನು ಜಾರಿಗೆ ತರುವ ಮೂಲಕ ರೈತರನ್ನು ಬೀದಿಪಾಲು ಮಾಡಿ ಬಂಡವಾಳಶಾಹಿಗಳ ಜೇಬುತುಂಬುವ ಕೆಲಸ ಮಾಡಲು ಹೊರಟಿದೆ. ಈ ಕರಾಳ ಕಾನೂನಿನಿಂದ ಸ್ಥಳೀಯ ಮಟ್ಟದ ಕೃಷಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿ ಮುಚ್ಚಲ್ಪಡುತ್ತವೆ. ರೈತರಿಗೆ ಬೇಡವಾದ ಕಾನೂನು ಒತ್ತಾಯ ಪೂರ್ವಕವಾಗಿ ಸರ್ಕಾರ ಏಕೆ ಜಾರಿಗೆ ತರುತ್ತಿದೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಸರ್ಕಾರಗಳ ಕಾಯ್ದೆ ಮೂರು ಆದರೆ ಸುಳ್ಳು ನೂರಾರು ಹೇಳುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಹಾಗೂ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮಾಡಿ ಜನವಿರೋಧಿ ನೀತಿ ಅನುಸರಿಸಿದೆ ಪರಿಸ್ಥಿತಿಯ ಹೀಗೆ ಮುಂದುವರಿದರೆ ದೇಶದ ಅಶಾಂತಿಯ ಸೃಷ್ಟಿಯಾಗಿ ಬಿಜೆಪಿ ತಕ್ಕ ಪಾಠ ಅನುಭವಿಸಲಿದೆ ಎಂದರು.

Advertisement

ಕೋವಿಡ್‌-19 ಭೀಕರ ಸ್ಥಿತಿಯಲ್ಲೂ ಕೇಂದ್ರ, ರಾಜ್ಯ ಸರ್ಕಾರ ಜನ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದವು. ಈ ನಡುವೆ ರೈತರು ಕಾರ್ಮಿಕರು ಬೀದಿಗೆ ಬಿದ್ದು, ದೆಹಲಿಯಲ್ಲಿ 50 ದಿನಗಳಿಂದ ಕೊರೆಯುವ ಚಳಿಯಲ್ಲೂ ವಿವಿಧ ರಾಜ್ಯಗಳಿಂದ ಬಂದ ಲಕ್ಷಾಂತರ ರೈತರು ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಇದುವರೆಗೂ ಸುಮಾರು 50ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ದಿನೇ ದಿನೇ
ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸಿ ಜನರ ಸುಲಿಗೆ ಮಾಡುತ್ತಿದ್ದಾರೆ.

ಜನ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಸಹ ಈ ಜನ ವಿರೋಧಿ  ಸರ್ಕಾರಗಳಿಗೆ ಕಣ್ಣು, ಕಿವಿ ಸತ್ತು ಹೋಗಿವೆ. ಇಂಥ ಕ್ರೂರ ಬಂಡವಾಳ ಶಾಹಿ, ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೆಸೆಯಲು ದೇಶಾದ್ಯಂತ ರೈತರು ಒಗ್ಗೂಡಿ ಹೋರಾಟ ಪ್ರಕರಣಗೊಳಿಸಬೇಕಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ ರಾಶಿ ಮುಗಿದಿದೆ. ಸರ್ಕಾರ ಕೇವಲ 6 ಸಾವಿರ ರೂ. ಮಾತ್ರ ಪ್ರತಿ ಕ್ವಿಂಟಲ್‌ಗೆ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೂ ಸಹ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಕನಿಷ್ಠ 7 ಸಾವಿರ ಪ್ರತಿ ಕ್ವಿಂಟಲ್‌ಗೆ ನೀಡಿ ಬೆಳೆದ ಎಲ್ಲ ತೊಗರಿಯನ್ನು ಸರ್ಕಾರವೇ ಖರೀದಿಸಬೇಕು. ಕಬ್ಬಿಗೆ 2300 ರೂಪಾಯಿ ನೀಡಬೇಕು. ಬೆಳೆ ಹಾನಿ ಅತಿವೃಷ್ಟಿ ಪರಿಹಾರ ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ, ಅಬ್ದುಲ ಸಲಾಂ ಸಗರಿ, ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಥಂಬೆ, ಹಣಮಂತ ಭೂಸನೂರ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಬಾಲಚಂದ್ರ ಸೂರ್ಯವಂಶಿ, ಮಲ್ಲಪ್ಪ ಹತ್ತರಕಿ, ಶ್ರೀಶೈಲ ರೆಡ್ಡಿ, ಗ್ರಾಪಂ ಸದಸ್ಯ ವಿಶ್ವನಾಥ ಪವಾಡಶೆಟ್ಟಿ, ಗಣೇಶ ಪಾಟೀಲ, ರಾಹುಲ ಪಾಟೀಲ, ಶರಣು ಪವಾಡಶೆಟ್ಟಿ, ಸಂಜು ಖೋಬ್ರೆ, ಗಿರೀ ಶ ಪಾಟೀಲ, ರವೀಂದ್ರ ಕೋರಳ್ಳಿ, ರಾಜಶೇಖರ ಮಲಶೆಟ್ಟಿ, ಸುಭಾಶ ಫೌಜಿ, ಲಿಂಗರಾಜ ಪಾಟೀಲ, ರಾಮಮೂರ್ತಿ ಗಾಯಕವಾಡ, ದೋಂಡಿಬಾ ಸಾಳುಂಕೆ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ವೇಳೆ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿದರು. ಅಲ್ಲದೆ, ಈ ಮೂದಲು ಬಿಜೆಪಿ ಸರ್ಕಾರಗಳ ಕಾಯ್ದೆ ಮೂರು ಸುಳ್ಳು ನೂರಾರು ಎಂಬ ಕಿರುಹೊತ್ತಿಗೆಯನ್ನು ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಿ.ಜಿ. ಪಾಟೀಲ ಬಿಡುಗಡೆಗೊಳಿಸಿದರು. ಹೆದ್ದಾರಿ ತಡೆಯಿಂದ ಕೆಲಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಮಂಜುನಾಥ, ಪಿಎಸ್‌ಐ ಉದ್ದಂಡಪ್ಪ ಮುಂದಾಳತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next