ಮುಂಬಯಿ: ಬಿಜೆಪಿ ವಿರುದ್ಧ ನಿರಂತರವಾಗಿ ವಾಗ್ಧಾಳಿ ನಡೆಸುತ್ತಲೇ ಬಂದಿರುವ ಶಿವಸೇನೆ ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಸ್ವತಂತ್ರವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದರೂ ಪಕ್ಷದ ಅಭ್ಯರ್ಥಿಗಳಿಗೆ ವಿಧಾನಸಭೆ ಪ್ರವೇಶಿಸುವುದು ಬಿಡಿ, ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಚುನಾವಣಾ ಕಣದಲ್ಲಿದ್ದ ಶಿವಸೇನೆಯ ಎಲ್ಲಾ 42 ಅಭ್ಯರ್ಥಿಗಳೂ ಇಡುಗಂಟು ಕಳೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಆರನೇ ಒಂದರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲವಾದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ತಾವು ಇರಿಸಿದ್ದ ಠೇವಣಿ ಹಣವನ್ನು ಕಳೆದುಕೊಳ್ಳುತ್ತಾರೆ. ಶಿವಸೇನೆಯಿಂದ ಸ್ಪರ್ಧಿಸಿದ್ದ 42 ಅಭ್ಯರ್ಥಿಗಳು ಒಟ್ಟಾರೆಯಾಗಿ 33,893 ಮತಗಳನ್ನು ಮಾತ್ರವೇ ಗಳಿಸಿದ್ದಾರೆ. ಈ ಪೈಕಿ 11 ಅಭ್ಯರ್ಥಿಗಳು 1,000ಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸುವಲ್ಲಿ ಸಫಲರಾಗಿಲ್ಲ. ಲಿಂಬಾಯತ್ ಕ್ಷೇತ್ರದಲ್ಲಿ ಶಿವಸೇನೆಯಿಂದ ಸ್ಪರ್ಧಿಸಿದ್ದ ಸಾಮ್ರಾಟ್ ಪಾಟೀಲ್ ಅವರಿಗೆ 4,075 ಮತಗಳು ಲಭಿಸಿದ್ದು ಇದು ಶಿವಸೇನೆ ಅಭ್ಯರ್ಥಿಯೋರ್ವರು ಗಳಿಸಿದ ಗರಿಷ್ಠ ಸಂಖ್ಯೆಯ ಮತಗಳಾಗಿವೆ.
ಈ ಹಿಂದೆಯೂ ಗುಜರಾತ್‌ನಲ್ಲಿ ಶಿವಸೇನೆ ಇಂತಹುದೇ ಮುಖಭಂಗವನ್ನು ಅನುಭವಿಸಿತ್ತು. 2007ರ ಚುನಾವಣೆಯಲ್ಲಿ ಶಿವಸೇನೆ 33 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ ಎಲ್ಲಾ ಅಭ್ಯರ್ಥಿಗಳೂ ಸೋಲು ಅನುಭವಿಸಿದ್ದರು.
ಚುನಾವಣಾ ಪ್ರಚಾರಕ್ಕೆ ಸಮಯಾವಕಾಶದ ಕೊರತೆ
ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಇಷ್ಟೊಂದು ಹೀನಾಯವಾಗಿ ಪರಾಭವ ಅನುಭವಿಸಲು ಪ್ರಚಾರಕ್ಕೆ ತೀರಾ ಕಡಿಮೆ ಸಮಯಾವಕಾಶ ಲಭಿಸಿದುದೇ ಪ್ರಮುಖ ಕಾರಣ ಎಂದು ಶಿವಸೇನೆಯ ಸ್ಥಳೀಯ ನಾಯಕರೋರ್ವರು ಹೇಳಿದರು.
ಪಕ್ಷ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿತ್ತು. ಪ್ರಚಾರಕ್ಕೆ 15ದಿನಗಳಿಗೂ ಕಡಿಮೆ ಸಮಯಾವಕಾಶ ಲಭಿಸಿತ್ತು. ಒಂದು ವೇಳೆ ಸುಮಾರು ನಾಲ್ಕು ತಿಂಗಳುಗಳಷ್ಟು ಹಿಂದೆಯೇ ಪಕ್ಷ ಬಿಜೆಪಿ ವಿರುದ್ಧ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದ್ದಲ್ಲಿ ಪಕ್ಷ ರಾಜ್ಯದಲ್ಲಿ ಉತ್ತಮ ಸಾಧನೆ ತೋರುತ್ತಿತ್ತು ಎಂದವರು ಹೇಳಿದರು.