ನವದೆಹಲಿ: ಬಹು ನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮತಗಟ್ಟೆ ಸಮೀಕ್ಷೆಗಳಂತೆ ಬಿಜೆಪಿಯೇ ಗೆದ್ದಿದೆ. ಅಂದ ಹಾಗೆ 2019ರ ಲೋಕಸಭೆ ಚುನಾವಣೆಗೆ ಇನ್ನು 18 ತಿಂಗಳ ಸಮಯ ಮಾತ್ರವಿದೆ. 2018ರಲ್ಲಿ ಕರ್ನಾಟಕ ಸೇರಿದಂತೆ ಒಟ್ಟು ಎಂಟು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ವಿಧಾನಸಭೆ ಚುನಾವಣೆಗಳು ಮತ್ತು 2019ರ ಲೋಕಸಭೆ ಚುನಾವಣೆ ಮೇಲೆ ಗುಜರಾತ್ ಫಲಿತಾಂಶ ಪ್ರಮುಖವಾಗಿ ಪ್ರಭಾವ ಬೀರುವುದು ಖಚಿತ.
ಸೋಮವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಪಕ್ಷದ ಮುಂದಿನ ಗುರಿ ಕರ್ನಾಟಕ ಎಂದಿದ್ದಾರೆ. 8 ರಾಜ್ಯಗಳು ಚುನಾವಣೆ ಎದುರಿಸುವುದಿದ್ದರೂ, ಲೋಕಸಭೆಯಲ್ಲಿ ಸಂಖ್ಯಾಬಲದ ದೃಷ್ಟಿಯಿಂದ ಗಣನೆಗೆ ಬರುವುದು ರಾಜಸ್ಥಾನ ಮತ್ತು ಮಧ್ಯಪ್ರದೇಶ. ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 26 ಮತ್ತು 29 ಸ್ಥಾನಗಳಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಿಂದ 27 ಮತ್ತು ರಾಜಸ್ಥಾನದ ಎಲ್ಲಾ ಸ್ಥಾನಗಳಲ್ಲಿಯೂ ಬಿಜೆಪಿ ಗೆದ್ದಿತ್ತು. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಾಯ್ದುಕೊಳ್ಳಬೇಕಾದರೆ ಈ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ.
ಇನ್ನು ಈಶಾನ್ಯ ರಾಜ್ಯಗಳಾಗಿರುವ ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ಕ್ರಮವಾಗಿ ಕಾಂಗ್ರೆಸ್, ಎನ್‌ಡಿಎ ಮತ್ತು ಸಿಪಿಎಂ ಆಡಳಿತ ನಡೆಸುತ್ತಿವೆ. ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇನ್ನು ನಾಗಾಲ್ಯಾಂಡ್‌ನಲ್ಲಿ ಮೈತ್ರಿಕೂಟದ ಭಾಗವಾಗಿದೆ. ಅಸ್ಸಾಂ ವಿಧಾನಸಭೆ ಚುನಾವಣೆ ಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ದೇಶದ ಈಶಾನ್ಯ ಭಾಗದಲ್ಲಿ ಗೆಲ್ಲುವ ಶಕೆ ಆರಂಭಿಸಿದೆ.ಲೋಕಸಭೆ, ರಾಜ್ಯಸಭೆಗಳಲ್ಲಿ ಸಂಖ್ಯಾಬಲವೇ ಪ್ರಮುಖವಾಗಿರುವುದರಿಂದ ಸಣ್ಣ ರಾಜ್ಯಗಳತ್ತಲೂ ಶಾ – ಮೋದಿ ಜೋಡಿ ಗಮನ ಹರಿಸಿದೆ.
ಇನ್ನು ಛತ್ತೀಸ್‌ಗಢದ ಬಗ್ಗೆ ಮಾತನಾಡುವುದಿದ್ದರೆ ಮೂರನೇ ಬಾರಿಗೆ ಅಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಡಾ.ರಮಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ.