Advertisement

ಆರ್ ಸಿಬಿಗೆ ಮತ್ತೆ ಸೋಲು : ಗೆದ್ದು ಬೀಗಿದ ಗುಜರಾತ್ ಟೈಟಾನ್ಸ್

11:31 PM Apr 30, 2022 | Team Udayavani |

ಮುಂಬಯಿ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಹೊಸ ತಂಡವಾದ ಗುಜರಾತ್‌ ಟೈಟಾನ್ಸ್‌ ತಂಡವು ಶನಿವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.

Advertisement

ಈ ಗೆಲುವಿನ ಮೂಲಕ ಗುಜರಾತ್‌ ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿದ ಸಾಧನೆ ಮಾಡಿದ್ದರೆ ಇದು ಆರ್‌ಸಿಬಿಗೆ ಸತತ ಮೂರನೇ ಸೋಲು ಆಗಿದೆ.

ಡೇವಿಡ್‌ ಮಿಲ್ಲರ್‌ ಮತ್ತು ರಾಹುಲ್‌ ತೆವಾಟಿಯ ಅವರ ಭರ್ಜರಿ ಆಟದಿಂದಾಗಿ ಗುಜರಾತ್‌ ತಂಡವು 19.3 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು 174 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಈ ಮೊದಲು ವಿರಾಟ್‌ ಕೊಹ್ಲಿ ಅವರ ಅರ್ಧಶತಕದಿಂದಾಗಿ ಆರ್‌ಸಿಬಿ ತಂಡವು 6 ವಿಕೆಟಿಗೆ 170 ರನ್‌ ಪೇರಿಸಿತ್ತು.

ಈ ಐಪಿಎಲ್‌ನಲ್ಲಿ ಎಂಟನೇ ಗೆಲುವು ದಾಖಲಿಸಿದ ಗುಜರಾತ್‌ ತಂಡವು 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಲೀಗ್‌ ಹಂತದ ಸ್ಪರ್ಧೆಗಳು ಮುಗಿಯುವ ವೇಳೆ ತಂಡವು ಅಗ್ರ ಎರಡರ ಒಳಗಿನ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಪಂದ್ಯದಲ್ಲೂ ಗುಜರಾತ್‌ನ ಬೌಲರ್‌ಗಳು ಮತ್ತು ಬ್ಯಾಟ್ಸ್‌ ಮನ್‌ ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಈ ಗೆಲುವಿನಿಂದಾಗಿ ಗುಜರಾತ್‌ ತಂಡವು ರವಿವಾರದ ಗುಜರಾತ್‌ ಡೇ ಆಚರಣೆಯನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುವ ಸಾಧ್ಯತೆಯಿದೆ.

ಉತ್ತಮ ಆರಂಭ
ಆರಂಭಿಕರಾದ ವೃದ್ಧಿಮಾನ್‌ ಸಾಹಾ ಮತ್ತು ಶುಭಮನ್‌ ಗಿಲ್‌ ಅವರು ಮೊದಲ ವಿಕೆಟಿಗೆ 51 ರನ್‌ ಪೇರಿಸುವ ಮೂಲಕ ಗುಜರಾತ್‌ ತಂಡ ಉತ್ತಮ ಆರಂಭ ಪಡೆಯಿತು. ಆಬಳಿಕ ಕುಸಿತ ಕಂಡ ಗುಜರಾತ್‌ 13 ಓವರ್‌ ಮುಗಿದಾಗ 95 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುವ ಸ್ಥಿತಿಗೆ ಬಿತ್ತು. ಆದರೆ ತೆವಾಟಿಯ ಮತ್ತು ಮಿಲ್ಲರ್‌ ಸ್ಫೋಟಕವಾಗಿ ಆಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಭರ್ಜರಿಯಾಗಿ ಆಡಿದ ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 79 ರನ್‌ ಪೇರಿಸಿದರು. ತೆವಾಟಿಯ 25 ಎಸೆತ ಎದುರಿಸಿ 5 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 43 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರಿಗೆ ಉತ್ತಮ ಬೆಂಬಲ ನೀಡಿದ ಮಿಲ್ಲರ್‌ 24 ಎಸೆತಗಳಿಂದ 39 ರನ್‌ ಹೊಡೆದರು. 4 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

Advertisement

ಕೊಹ್ಲಿ ಅರ್ಧಶತಕ
ಇನ್ನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಆರಂಭಿಕ ಫಾ ಡು ಪ್ಲೆಸಿಸ್‌ ಬೇಗನೇ ಔಟಾದರೂ ಕೊಹ್ಲಿ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಎಚ್ಚರಿಕೆಯ ಆಟವಾಡಿದ ಕೊಹ್ಲಿ ಮತ್ತು ರಜತ್‌ ಪಾಟಿದಾರ್‌ ಅವರು ದ್ವಿತೀಯ ವಿಕೆಟಿಗೆ 99 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಿದರು.

ಕೊಹ್ಲಿ ಆಟ ಸ್ಫೋಟಕವಾಗಿರಲಿಲ್ಲ, ಆದರೆ ಬಹಳಷ್ಟು ಎಚ್ಚರ ವಹಿಸಿ ಆಡುವ ಮೂಲಕ ಫಾರ್ಮ್ಗೆ ಮರಳಿರುವ ಸೂಚನೆಯಿತ್ತರು. 53 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 58 ರನ್‌ ಗಳಿಸಿದರು. ಇದು ಈ ಋತುವಿನ 9 ಸಹಿತ ಕಳೆದ 14 ಐಪಿಎಲ್‌ ಪಂದ್ಯಗಳಲ್ಲಿ ಕೊಹ್ಲಿ ಹೊಡೆದ ಮೊದಲ ಅರ್ಧಶತಕವಾಗಿದೆ. ಅರ್ಧಶತಕ ಸಿಡಿಸಿ ಮರಳಿದಾಗ ಅವರಿಗೆ ವಾಂಖೇಡೆ ಕ್ರೀಡಾಂಗಣದಲ್ಲಿನ ಅಭಿಮಾನಿಗಳು ಎದ್ದು ನಿಂತು ಗೌರನವ ಸಲ್ಲಿಸಿದರು.

ಕೊಹ್ಲಿ ಅವರಿಗಿಂತ ಹೆಚ್ಚು ಬಿರುಸಿನಿಂದ ಆಡಿದ ಪಾಟಿದಾರ್‌ 32 ಎಸೆತಗಳಿಂದ 52 ರನ್‌ ಹೊಡೆದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು. ಕೊನೆ ಹಂತದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿದ ಕಾರಣ ಆರ್‌ಸಿಬಿ ಸವಾಲೆಸೆಯುವ ಮೊತ್ತ ಪೇರಿಸುವಂತಾಯಿತು. ಮ್ಯಾಕ್ಸ್‌ವೆಲ್‌ 18 ಎಸೆತಗಳಿಂದ 33 ರನ್‌ ಹೊಡೆದರು.

ಬಿಗು ದಾಳಿ ಸಂಘಟಿಸಿದ ಪ್ರದೀಪ್‌ ಸಂಗವಾನ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್‌ ನೀಡಿ ಎರಡು ವಿಕೆಟ್‌ ಹಾರಿಸಿದ್ದರು. ಇನ್ನುಳಿದ ಬೌಲರ್‌ಗಳಾದ ಶಮಿ, ರಶೀದ್‌, ಜೋಸೆಫ್ ಮತ್ತು ಫ‌ರ್ಗ್ಯುಸನ್‌ ತಲಾ ಒಂದು ವಿಕೆಟ್‌ ಉರುಳಿಸಿದರು.

ಚೇಸಿಂಗ್‌ ಸಾಧನೆ
ನೂತನ ತಂಡವಾದ ಗುಜರಾತ್‌ ಟೈಟಾನ್ಸ್‌ ಜಂಟಿ ಚೇಸಿಂಗ್‌ ದಾಖಲೆ ಬರೆಯಿತು. ಈ ಐಪಿಎಲ್‌
ಸೀಸನ್‌ನ ಅಂತಿಮ ಓವರ್‌ನಲ್ಲಿ ಅತ್ಯಧಿಕ 5 ಪಂದ್ಯಗಳನ್ನು ಚೇಸ್‌ ಮಾಡಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು. ಇದಕ್ಕೂ ಮುನ್ನ 2018ರಲ್ಲಿ ಚೆನ್ನೈ ಮತ್ತು 2019ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ಕೂಡ ಕೊನೆಯ ಓವರ್‌ನಲ್ಲಿ 5 ಪಂದ್ಯಗಳ ಚೇಸಿಂಗ್‌ ಸಾಧನೆಗೈದಿದ್ದವು. ಇನ್ನೂ ಸಾಕಷ್ಟು ಪಂದ್ಯಗಳನ್ನು ಆಡಲಿರುವುದರಿಂದ ಈ ದಾಖಲೆಯನ್ನು ಮುರಿಯುವ ಅವಕಾಶವೊಂದು ಗುಜರಾತ್‌ಗೆ ಒದಗಿ ಬಂದಿದೆ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಬಿ ಮೊಹಮ್ಮದ್‌ ಶಮಿ 58
ಫಾ ಡು ಪ್ಲೆಸಿಸ್‌ ಸಿ ಸಾಹಾ ಬಿ ಸಂಗವಾನ್‌ 0
ರಜತ್‌ ಪಾಟಿದಾರ್‌ ಸಿ ಗಿಲ್‌ ಬಿ ಸಂಗವಾನ್‌ 52
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ರಶೀದ್‌ ಬಿ ಫೆರ್ಗ್ಯುಸನ್‌ 33
ದಿನೇಶ್‌ ಕಾರ್ತಿಕ್‌ ಸಿ ಶಮಿ ಬಿ ರಶೀದ್‌ 2
ಶಾಬಾಜ್‌ ಅಹ್ಮದ್‌ ಔಟಾಗದೆ 2
ಮಹಿಪಾಲ್‌ ಲೊನ್ರೋರ್‌ ಸಿ ಮಿಲ್ಲರ್‌ ಬಿ ಜೋಸೆಫ್ 16
ಇತರ: 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 170
ವಿಕೆಟ್‌ ಪತನ: 1-11, 2-110, 3-129, 4-138, 5-150, 6-170
ಬೌಲಿಂಗ್‌:
ಮೊಹಮ್ಮದ್‌ ಶಮಿ 4-0-39-1
ಪ್ರದೀಪ್‌ ಸಂಗವಾನ್‌ 4-0-19-2
ಅಲ್ಜಾರಿ ಜೋಸೆಫ್ 4-0-42-1
ರಶೀದ್‌ ಖಾನ್‌ 4-0-29-1
ಲೂಕಿ ಫ‌ರ್ಗ್ಯುಸನ್‌ 4-0-36-1

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಪಾಟಿದಾರ್‌ ಬಿ ಹಸರಂಗ 29
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಬಿ ಶಾಬಾಜ್‌ 31
ಸಾಯ್‌ ಸುದರ್ಶನ್‌ ಸಿ ಬದಲಿಗ ಬಿ ಹಸರಂಗ 20 ಹಾರ್ದಿಕ್‌ ಪಾಂಡ್ಯ ಸಿ ಲೊನ್ರೋರ್‌ ಬಿ ಶಾಬಾಜ್‌ 3
ಡೇವಿಡ್‌ ಮಿಲ್ಲರ್‌ ಔಟಾಗದೆ 39
ರಾಹುಲ್‌ ತೆವಾಟಿಯ ಔಟಾಗದೆ 43
ಇತರ: 9
ಒಟ್ಟು (19.3 ಓವರ್‌ಗಳಲ್ಲಿ 4 ವಿಕೆಟಿಗೆ) 174
ವಿಕೆಟ್‌ ಪತನ: 1-51, 2-68, 3-78, 4-95
ಬೌಲಿಂಗ್‌:
ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-10-0
ಮೊಹಮ್ಮದ್‌ ಸಿರಾಜ್‌ 4-0-35-0
ಜೋಶ್‌ ಹ್ಯಾಝೆಲ್‌ವುಡ್‌ 3.3-0-36-0
ಶಾಬಾಜ್‌ ಅಹ್ಮದ್‌ 3-0-26-2
ಹರ್ಷಲ್‌ ಪಟೇಲ್‌ 4-0-35-0
ವನಿಂದು ಹಸರಂಗ 4-0-28-2
ಪಂದ್ಯಶ್ರೇಷ್ಠ: ರಾಹುಲ್‌ ತೆವಾಟಿಯ

Advertisement

Udayavani is now on Telegram. Click here to join our channel and stay updated with the latest news.

Next