ಅಹ್ಮದಾಬಾದ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ನೂತನ ತಂಡವಾದ ಗುಜರಾತ್ ಟೈಟಾನ್ಸ್ ಚೊಚ್ಚಲ ಪ್ರವೇಶದಲ್ಲಿಯೇ ಐಪಿಎಲ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ.
ರವಿವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಸಮರದಲ್ಲಿ ಗುಜರಾತ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.
ನಾಯಕ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಆಟದಿಂದ ತಂಡ ಅಮೋಘ ಗೆಲುವು ಕಾಣುವಂತಾಯಿತು. 17 ರನ್ನಿಗೆ 3 ಅಮೂಲ್ಯ ವಿಕೆಟ್ ಹಾರಿಸಿದ್ದ ಪಾಂಡ್ಯ ಬ್ಯಾಟಿಂಗ್‌ನಲ್ಲಿ 34 ರನ್ ಗಳಿಸಿ ತಂಡದ ಗೆಲುವಿಗೆ ನೆರವು ನೀಡಿದರು. ಅವರ ಸಹಿತ ಶುಭಮನ್ ಗಿಲ್ ಮತ್ತು ಡೇವಿಡ್ ಮಿಲ್ಲರ್ ಅವರ ಉಪಯುಕ್ತ ಆಟದಿಂದಾಗಿ ಗುಜರಾತ್ ತಂಡವು 18.1 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ರಾಜಸ್ಥಾನ್ ರಾಯಲ್ಸ್ ತಂಡವು ಪಾಂಡ್ಯ ಸಹಿತ ಬೌಲರ್‌ಗಳ ದಾಳಿಗೆ ಕುಸಿದು 9 ವಿಕೆಟಿಗೆ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುಜರಾತ್ ಆರಂಭದ ಎರಡು ವಿಕೆಟನ್ನು ಬೇಗನೇ ಕಳೆದುಕೊಂಡಿತ್ತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ತಂಡವನ್ನು ಆಧರಿಸಿದರಲ್ಲದೇ ಮೂರನೇ ವಿಕೆಟಿಗೆ 63 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಈ ವೇಳೆ 34 ರನ್ ಗಳಿಸಿದ ಪಾಂಡ್ಯ ಔಟಾದರು. ಆಬಳಿಕ ಗಿಲ್ ಅವರನ್ನು ಸೇರಿಕೊಂಡ ಡೇವಿಡ್ ಮಿಲ್ಲರ್ ಮುರಿಯದ ನಾಲ್ಕನೇ ವಿಕೆಟಿಗೆ 47 ರನ್ ಪೇರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಗಿಲ್ 45 ಮತ್ತು ಮಿಲ್ಲರ್ 32 ರನ್ ಗಳಿಸಿ ಅಜೇಯರಾಗಿ ಉಳಿದರು.
Related Articles
ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆರ್‌ಸಿಬಿ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಜಸ್ಥಾನ್ ಇಲ್ಲಿ ಮಂಕು ಬಡಿದವರಂತೆ ಆಡಿತು. ಗುಜರಾತ್ ತಂಡದ ಶಿಸ್ತಿನ ಬೌಲಿಂಗ್ ದಾಳಿಗೆ ಸಿಲುಕಿ ರನ್ನಿಗಾಗಿ ಪರದಾಡಿತು. ನಾಯಕ ಹಾರ್ದಿಕ್ ಪಾಂಡ್ಯ 3 ಬಿಗ್ ವಿಕೆಟ್ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಇವರ ಬುಟ್ಟಿಗೆ ಬಿದ್ದವರೆಂದರೆ ಸಂಜು ಸ್ಯಾಮ್ಸನ್, ಜಾಸ್ ಬಟ್ಲರ್ ಮತ್ತು ಶಿಮ್ರನ್ ಹೆಟ್‌ಮೈರ್. ರಾಜಸ್ಥಾನ್ ಸರದಿಯಲ್ಲಿ 39 ರನ್ ಮಾಡಿದ ಬಟ್ಲರ್ ಅವರದೇ ಸರ್ವಾಧಿಕ ಗಳಿಕೆ.
ಶಮಿ ವರ್ಸಸ್ ಜೈಸ್ವಾಲ್
ಮೊಹಮ್ಮದ್ ಶಮಿ-ಯಶಸ್ವಿ ಜೈಸ್ವಾಲ್ ಮುಖಾಮುಖಿಯೊಂದಿಗೆ ಫೈನಲ್ ಸಮರ ಮೊದಲ್ಗೊಂಡಿತು. ಶಮಿ ಎಸೆದ 3ನೇ ಓವರ್ ಮೂಲಕ ರಾಜಸ್ಥಾನ್ ಬ್ಯಾಟಿಂಗ್‌ಗೆ ಕುದುರಿಕೊಂಡಿತು. ಇದರಲ್ಲಿ ಜೈಸ್ವಾಲ್ ಒಂದು ಫೋರ್, ಒಂದು ಸಿಕ್ಸರ್ ಹೊಡೆದು ಸಿಡಿದು ನಿಂತರು. ಆ ಓವರ್‌ನಲ್ಲಿ 14 ರನ್ ಹರಿದು ಬಂತು.
ಮುಂದಿನ ಓವರ್‌ನಲ್ಲಿ ಯಶ್ ದಯಾಳ್‌ಗೂ ಜೈಸ್ವಾಲ್ ಸಿಕ್ಸರ್ ಬಿಸಿ ಮುಟ್ಟಿಸಿದರು. ಆದರೆ ಮರು ಎಸೆತದಲ್ಲೇ ದಯಾಳ್ ಸೇಡು ತೀರಿಸಿಕೊಂಡರು. ಸ್ಕ್ವೇರ್‌ಲೆಗ್‌ನಲ್ಲಿದ್ದ ಸಾಯಿ ಕಿಶೋರ್‌ಗೆ ಕ್ಯಾಚ್ ನೀಡಿ ವಾಪಸಾದರು. ಜೈಸ್ವಾಲ್ ಗಳಿಕೆ 16 ಎಸೆತಗಳಿಂದ 22 ರನ್ (1 ಬೌಂಡರಿ, 2 ಸಿಕ್ಸರ್). ಸ್ಕೋರ್ 31 ರನ್ ಆಗಿತ್ತು. ಬಟ್ಲರ್ ಸಿಡಿಯಬಹುದೆಂಬ ನಿರೀಕ್ಷೆ ಇತ್ತು.
ಲಾಕಿ ಫರ್ಗ್ಯುಸನ್ ಮತ್ತು ರಶೀದ್ ಖಾನ್ ತಮ್ಮ ಆರಂಭಿಕ ಓವರ್‌ನಲ್ಲಿ ಉತ್ತಮ ನಿಯಂತ್ರಣ ಸಾಧಿಸಿದರು. ಪವರ್ ಪ್ಲೇಯಲ್ಲಿ ರಾಜಸ್ಥಾನ್ ಒಂದು ವಿಕೆಟಿಗೆ 45 ರನ್ ಗಳಿಸಿತ್ತು. ಪವರ್ ಪ್ಲೇ ಬಳಿಕ ಜಾಸ್ ಬಟ್ಲರ್‌ಗೆ ಪವರ್ ಬಂತು. ಫರ್ಗ್ಯುಸನ್‌ಗೆ ಸತತ ಬೌಂಡರಿಗಳ ರುಚಿ ತೋರಿಸಿದರು.
ಈ ನಡುವೆ ಕ್ಯಾಪ್ಟನ್ ಸಂಜು ಸ್ಯಾಮ್ಸನ್ 2 ಬೌಂಡರಿ ಬಾರಿಸಿ ಸಿಡಿಯುವ ಸೂಚನೆಯನ್ನೇನೋ ನೀಡಿದರು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್‌ನಲ್ಲೇ ರಾಜಸ್ಥಾನ್ ನಾಯಕನನ್ನು ಪೆವಿಲಿಯನ್ನಿಗೆ ಅಟ್ಟಿದರು. ಸ್ಯಾಮ್ಸನ್ ಗಳಿಕೆ ಕೇವಲ 14 ರನ್ (11 ಎಸೆತ, 2 ಬೌಂಡರಿ). ಈ ಕ್ಯಾಚ್ ಕೂಡ ಸಾಯಿ ಕಿಶೋರ್ ಪಡೆದರು. ಆ ಓವರ್‌ನಲ್ಲಿ ಪಾಂಡ್ಯ ನೀಡಿದ್ದು ಒಂದೇ ರನ್. ಅರ್ಧ ಹಾದಿ ಮುಗಿಸುವಾಗ ರಾಜಸ್ಥಾನ್ 2 ವಿಕೆಟ್ ನಷ್ಟಕ್ಕೆ 71 ರನ್ ಮಾಡಿತ್ತು. ಅಪಾಯಕಾರಿ ಬಟ್ಲರ್ ಕ್ರೀಸ್ ಆಕ್ರಮಿಸಿಕೊಂಡಿದ್ದರು.
ಅರ್ಧ ಹಾದಿಯ ಬಳಿಕ…
10 ಓವರ್‌ಗಳ ಬಳಿಕ ಗುಜರಾತ್ ಬೌಲಿಂಗ್ ಘಾತಕವಾಗಿ ಪರಿಣಮಿಸಿತು. ದೇವದತ್ತ ಪಡಿಕ್ಕಲ್ ಖಾತೆ ತೆರೆಯಲು ಚಡಪಡಿಸಿದರು. 10 ಎಸೆತಗಳಿಂದ ಬರೀ 2 ರನ್ ಮಾಡಿ ರಶೀದ್ ಖಾನ್ ಮೋಡಿಗೆ ಸಿಲುಕಿದರು. 79ಕ್ಕೆ 3 ವಿಕೆಟ್ ಬಿತ್ತು. ಇದೇ ಮೊತ್ತದಲ್ಲಿ ಕ್ಯಾಪ್ಟನ್ ಪಾಂಡ್ಯ ದೊಡ್ಡ ಬೇಟೆಯೊಂದನ್ನು ಆಡಿದರು. ಬಿಗ್ ಹಿಟ್ಟರ್ ಜಾಸ್ ಬಟ್ಲರ್ ಅವರನ್ನು ಬಲೆಗೆ ಬೀಳಿಸಿದರು. ಆರ್‌ಸಿಬಿ ವಿರುದ್ಧ ಸ್ಫೋಟಕ ಆಟವಾಡಿದ್ದ ಇಂಗ್ಲಿಷ್‌ಮ್ಯಾನ್ ಗಳಿಕೆ 35 ಎಸೆತಗಳಿಂದ 39 ರನ್ (5 ಬೌಂಡರಿ).
ಇದರೊಂದಿಗೆ ಜಾಸ್ ಬಟ್ಲರ್ ಐಪಿಎಲ್ ಸೀಸನ್ ಒಂದರಲ್ಲಿ ಎರಡನೇ ಅತ್ಯಧಿಕ ರನ್ (863) ಬಾರಿಸಿದ ದಾಖಲೆ ಸ್ಥಾಪಿಸಿದರು. ಡೇವಿಡ್ ವಾರ್ನರ್ ಮೊತ್ತವನ್ನು ಹಿಂದಿಕ್ಕಿದರು (848). ವಿರಾಟ್ ಕೊಹ್ಲಿ 2016ರಲ್ಲಿ 973 ರನ್ ಸಂಗ್ರಹಿಸಿದ್ದು ದಾಖಲೆ.
ಬಟ್ಲರ್ ನಿರ್ಗಮನದೊಂದಿಗೆ ರಾಜಸ್ಥಾನದ ದೊಡ್ಡ ಮೊತ್ತದ ಯೋಜನೆ ವಿಫಲವಾಯಿತು. ತಂಡದಲ್ಲಿ ಇನ್ನಿಂಗ್ಸ್ ಕಟ್ಟಬಲ್ಲ ಆಟಗಾರರಿಲ್ಲ ಎಂಬುದು ನಿರ್ಣಾಯಕ ಪಂದ್ಯದಲ್ಲಿ ಸಾಬೀತಾಯಿತು.
ಇನ್ನೇನು ಡೆತ್ ಓವರ್ ಆರಂಭವಾಗಬೇಕು ಎನ್ನುವಾಗಲೇ ಶಿಮ್ರನ್ ಹೆಟ್‌ಮೈರ್ ಔಟಾದದ್ದು ರಾಜಸ್ಥಾನ್‌ನ ಅಲ್ಪ ನಿರೀಕ್ಷೆಗೂ ಪೆಟ್ಟು ಕೊಟ್ಟಿತು. ಈ ವಿಕೆಟ್ ಕೂಡ ಪಾಂಡ್ಯ ಪಾಲಾಯಿತು. ಅವರ ಸಾಧನೆ 17ಕ್ಕೆ 3 ವಿಕೆಟ್. ಇದು ಐಪಿಎಲ್ ಫೈನಲ್‌ನಲ್ಲಿ ಕಪ್ತಾನ 2ನೇ ಅತ್ಯುತ್ತಮ ಬೌಲಿಂಗ್ ಸಾಧನೆ. 2009ರ ಫೈನಲ್‌ನಲ್ಲಿ ಆರ್‌ಸಿಬಿಯ ಅನಿಲ್ ಕುಂಬ್ಳೆ 16 ರನ್ನಿಗೆ 4 ವಿಕೆಟ್ ಕೆಡವಿದ್ದು ದಾಖಲೆ.
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್ ಸಿ ಸಾಯಿ ಕಿಶೋರ್ ಬಿ ದಯಾಳ್ 22
ಜಾಸ್ ಬಟ್ಲರ್ ಸಿ ಸಾಹಾ ಬಿ ಪಾಂಡ್ಯ 39
ಸಂಜು ಸ್ಯಾಮ್ಸನ್ ಸಿ ಸಾಯಿ ಕಿಶೋರ್ ಬಿ ಪಾಂಡ್ಯ 14
ದೇವದತ್ತ ಪಡಿಕ್ಕಲ್ ಸಿ ಶಮಿ ಬಿ ರಶೀದ್ 2
ಶಿಮ್ರನ್ ಹೆಟ್‌ಮೈರ್ ಸಿ ಮತ್ತು ಬಿ ಪಾಂಡ್ಯ 11
ಆರ್. ಅಶ್ವಿನ್ ಮಿಲ್ಲರ್ ಬಿ ಸಾಯಿ ಕಿಶೋರ್ 6
ರಿಯಾನ್ ಪರಾಗ್ ಬಿ ಶಮಿ 15
ಟ್ರೆಂಟ್ ಬೌಲ್ಟ್ ಸಿ ತೆವಾಟಿಯ ಬಿ ಸಾಯಿ ಕಿಶೋರ್ 11
ಒಬೆಡ್ ಮೆಕಾಯ್ ರನೌಟ್ 8
ಪ್ರಸಿದ್ಧ್ ಕೃಷ್ಣ ಔಟಾಗದೆ 0
ಇತರ 2
ಒಟ್ಟು (9 ವಿಕೆಟಿಗೆ) 130
ವಿಕೆಟ್ ಪತನ: 1-31, 2-60, 3-79, 4-79, 5-94, 6-98, 7-112, 8-130, 9-130.
ಬೌಲಿಂಗ್:
ಮೊಹಮ್ಮದ್ ಶಮಿ 4-0-33-1
ಯಶ್ ದಯಾಳ್ 3-0-18-1
ಲಾಕಿ ಫರ್ಗ್ಯುಸನ್ 3-0-22-0
ರಶೀದ್ ಖಾನ್ 4-0-18-1
ಹಾರ್ದಿಕ್ ಪಾಂಡ್ಯ 4-0-17-3
ಆರ್. ಸಾಯಿಕಿಶೋರ್ 2-0-20-2
ಗುಜರಾತ್ ಟೈಟಾನ್ಸ್
ವೃದ್ದಿಮಾನ್ ಸಾಹಾ ಬಿ ಪ್ರಸಿದ್ಧ್ ಕೃಷ್ಣ 5
ಶುಭಮನ್ ಗಿಲ್ ಔಟಾಗದೆ 45
ಮ್ಯಾಥ್ಯೂ ವೇಡ್ ಸಿ ಪರಾಗ್ ಬಿ ಬೌಲ್ಟ್ 8
ಹಾರ್ದಿಕ್ ಪಾಂಡ್ಯ ಸಿ ಜೈಸ್ವಾಲ್ ಬಿ ಚಹಲ್ 34
ಡೇವಿಡ್ ಮಿಲ್ಲರ್ ಔಟಾಗದೆ 32
ಇತರ: 9
ಒಟ್ಟು (18.1 ಓವರ್‌ಗಳಲ್ಲಿ 3 ವಿಕೆಟಿಗೆ) 133
ವಿಕೆಟ್ ಪತನ: 1-9, 2-23, 3-86
ಬೌಲಿಂಗ್:
ಟ್ರೆಂಟ್ ಬೌಲ್ಟ್ 4-1-14-1
ಪ್ರಸಿದ್ಧ್ ಕೃಷ್ಣ 4-0-40-1
ಯಜುವೇಂದ್ರ ಚಹಲ್ 4-0-20-1
ಒಬೆಡ್ ಮೆಕಾಯ್ 3.1-0-26-0
ಆರ್. ಅಶ್ವಿನ್ 3-0-32-0
ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ
ಸರಣಿಶ್ರೇಷ್ಠ: ಜಾಸ್ ಬಟ್ಲರ್
ಆರೆಂಜ್ ಕ್ಯಾಪ್: ಜಾಸ್ ಬಟ್ಲರ್
ಪರ್ಪಲ್ ಕ್ಯಾಪ್: ಯಜುವೇಂದ್ರ ಚಹಲ್