Advertisement

ಗುಜರಾತ್‌ ಉಳಿಕೆ ಹಿಮಾಚಲ ಗಳಿಕೆ, ಮುಂದುವರಿದ ಮೋದಿ ವಿಕಾಸ

06:00 AM Dec 19, 2017 | Team Udayavani |

ಹೊಸದಿಲ್ಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳನ್ನು ತನ್ನ ತೆಕ್ಕೆಗೆ ಹಾಕಿ ಕೊಳ್ಳುವ ಮೂಲಕ ಬಿಜೆಪಿ 2017ರ ವರ್ಷವನ್ನು ಖುಷಿಯಿಂದಲೇ ಮುಗಿಸಿದೆ. ಸದ್ಯ ಭಾರತದಲ್ಲಿ ಕಮಲ ಪಕ್ಷವೇ ಶೇ. 60ರಷ್ಟು ಭಾಗದಲ್ಲಿ ಅಧಿಕಾರದಲ್ಲಿದೆ. ಆದರೆ ವರ್ಷಾಂತ್ಯದಲ್ಲಿ ತುಸು ಪ್ರಯಾಸ ವಾಗಿಯೇ ಗುಜರಾತ್‌ ಗೆದ್ದ ಬಿಜೆಪಿ, 2018ರ ಸವಾಲಿನ ರಾಜ್ಯಗಳನ್ನು ಎದುರು ನೋಡುತ್ತಿದೆ.

Advertisement

ಗುಜರಾತ್‌ ಗೆಲುವಿಗೆ ಮೋದಿ ಅವರೇ ಕಾರಣ ಎಂಬುದು ಒಂದು ಸಾಲಿನ ವಿಶ್ಲೇಷಣೆ. ಮೋದಿ ಇಲ್ಲದಿದ್ದರೆ ಎಂಬ ಪ್ರಶ್ನೆ, ಸ್ವತಃ ಆ ಪಕ್ಷದ ನಾಯಕರಿಗೆ ಅರಗಿಸಿಕೊಳ್ಳಲಾರದ ವಿಷಯವಾಗಿದೆ. ಈ ರಾಜ್ಯ ದಲ್ಲಿ  ಕಾಂಗ್ರೆಸ್‌ ಪಾಲಿಗೆ ಹೇಳಿಕೊಳ್ಳುವಂಥ ನಾಯಕ ಇಲ್ಲದಿದ್ದರೂ ಬಿಜೆಪಿಗೆ ಭಾರೀ ಸ್ಪರ್ಧೆಯೊಡ್ಡಿದ ಯಶಸ್ಸೂ ಈಗಷ್ಟೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೇರಿರುವ ರಾಹುಲ್‌ ಗಾಂಧಿಗೆ ಸಲ್ಲುತ್ತಿದೆ.

ಸದ್ಯ ಗುಜರಾತ್‌ ವಿಧಾನಸಭೆಯ 182 ಕ್ಷೇತ್ರಗಳಲ್ಲಿ ಬಿಜೆಪಿ 99ರಲ್ಲಿ ಗೆದ್ದು, ಇದೇ ಮೊದಲ ಬಾರಿಗೆ ಎರಡಂಕಿ ಜಯ ದಾಖಲಿಸಿದೆ. 1995 ರಿಂದಲೂ ಸತತವಾಗಿ ಗುಜರಾತ್‌ನಲ್ಲಿ ಅಧಿಕಾರ ದಲ್ಲಿರುವ ಬಿಜೆಪಿ ಪಾಲಿಗೆ ಇದು ಹರಸಾಹಸದಿಂದ ಪಡೆದ ಜಯ. ಈ ಕಷ್ಟದ ಜಯಕ್ಕೆ ಹಾರ್ದಿಕ್‌ ಪಟೇಲ್‌ ನಾಯಕತ್ವದ ಪಾಟೀದಾರ್‌ ಆಂದೋಲನವೂ ಕಾರಣವಾಗಿದೆ. ಕಾಂಗ್ರೆಸ್‌ನ ಕಡೇ ಕ್ಷಣದ ತಂತ್ರಗಾರಿಕೆಯೂ ಬಿಜೆಪಿಗೆ ಪ್ರಯಾಸದ ಗೆಲುವಿಗೆ ಕಾರಣವಾಯಿತು. ಹಾಗೇ ಮಣಿಶಂಕರ್‌ ಅಯ್ಯರ್‌, ಕಪಿಲ್‌ ಸಿಬಲ್‌ ವರ್ತನೆ ಪರೋಕ್ಷವಾಗಿ ಬಿಜೆಪಿಗೆ ವರದಾನವಾಯಿತು.

ಆದರೆ, ದಲಿತ ಸಮುದಾಯದ ನಾಯಕ ಜಿಗ್ನೇಶ್‌ ಮೆವಾನಿ, ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್‌ ಠಾಕೂರ್‌ ಮಾತ್ರ ತಮ್ಮ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು, ಉಳಿದ ಭಾಗಗಳಲ್ಲಿ ಪ್ರಭಾವ ಬೀರಲು ವಿಫ‌ಲರಾಗಿದ್ದಾರೆ. 

ಕಾಂಗ್ರೆಸ್‌ ಪಾಲಿಗೆ ಇದು ತೀರಾ ಚೇತರಿಕೆಯ ಫ‌ಲಿತಾಂಶ. ಕಳೆದ ಬಾರಿ 61ರಲ್ಲಿ ಇದ್ದ ಕಾಂಗ್ರೆಸ್‌ ಈ ಬಾರಿ ತನ್ನ ಸ್ಥಾನವನ್ನು 77ಕ್ಕೆ ಏರಿಸಿಕೊಂಡಿದೆ. ಅಂದರೆ ಬರೋಬ್ಬರಿ 16 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿಕೊಂಡಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್‌ ಪಾಲಿಗೆ ಇದು ಸಮಾಧಾನದ ಫ‌ಲಿತಾಂಶ. ಯಾವುದೇ ಕಾರಣಕ್ಕೂ ಬಿಜೆಪಿಗೆ ಸರಳವಾಗಿ ಗೆಲುವು ದಕ್ಕಬಾರದು ಎಂದೇ ತಂತ್ರಗಾರಿಕೆ ಹೆಣೆದಿದ್ದ ರಾಹುಲ್‌ ಅವರ ಪ್ಲಾನ್‌ ಯಶಸ್ವಿಯಾಗಿದೆ. 75 ಬಂದರೆ ಸಾಕು ಎಂಬಂತಿದ್ದ ನಾಯಕರು ಇದೀಗ 80ರ ಗಡಿ ಮುಟ್ಟಿದ್ದು ಇನ್ನಷ್ಟು ಖುಷಿ ಕೊಟ್ಟಿದೆ. ಹಾಗಾಗಿಯೇ ರಾಹುಲ್‌ ಸೋತರೂ ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.

Advertisement

ಸವಾಲಿನ 2018
2017 ಬಿಜೆಪಿ ಪಾಲಿಗೆ ಗೆಲುವಿನ ವರ್ಷ. ಪ್ರಸಕ್ತ ವರ್ಷ ನಡೆದ ವಿಧಾನಸಭೆ ಚುನಾವಣೆಗಳ ಪೈಕಿ ಬಿಜೆಪಿ ಪಂಜಾಬ್‌ ಬಿಟ್ಟರೆ ಉಳಿದೆಲ್ಲ ರಾಜ್ಯಗಳಲ್ಲೂ ಗೆಲುವಿನ ನಗೆ ಬೀರಿದೆ. ಪಂಜಾಬ್‌ ಕೂಡ ಬಿಜೆಪಿಯ ಅಂಗಪಕ್ಷವಿದ್ದುದರಿಂದ ಇದು ತನ್ನ ಸೋಲಲ್ಲ  ಎಂದೇ ಪಕ್ಷದ ನಾಯಕರು ವಾದಿಸುತ್ತಾರೆ. ಆದರೆ ಉತ್ತರ ಪ್ರದೇಶದ ದೊಡ್ಡ ಗೆಲುವು ಪಕ್ಷಕ್ಕೆ ಹೆಚ್ಚಿನ ಉತ್ಸಾಹ ತಂದುಕೊಟ್ಟಿದ್ದರೆ, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ ಗೆಲುವು ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ, 2018 ಹಾಗಲ್ಲ, ಕರ್ನಾಟಕ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ಸಹಿತ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಗುಜರಾತ್‌ ಅಥವಾ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಲಾಡ್ಯ ನಾಯಕರಿರಲಿಲ್ಲ. ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ, ರಾಜಸ್ಥಾನದಲ್ಲಿ ಸಚಿನ್‌ ಪೈಲಟ್‌, ಮಧ್ಯ ಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರಂಥ ನಾಯಕರಿದ್ದಾರೆ. ಇಲ್ಲಿ ಸ್ಪರ್ಧೆ ನೀಡುವುದು ಬಿಜೆಪಿ ಪಾಲಿಗೆ ಕಷ್ಟವೇ ಸರಿ.

ಬಹುತೇಕ ನಿಜವಾಯ್ತು ಸಮೀಕ್ಷೆ ಫ‌ಲಿತಾಂಶ
ಗುಜರಾತ್‌ ಕೊನೆಯ ಹಂತದ ಮತದಾನದ ದಿನ ಮತದಾನೋತ್ತರ ಸಮೀಕ್ಷೆ  ಪ್ರಕಟಿಸಿದ ಬಹುತೇಕ ಸಂಸ್ಥೆಗಳು ಬಿಜೆಪಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಅದಕ್ಕೆ ಪೂರಕವಾಗಿಯೇ ಫ‌ಲಿತಾಂಶವೂ ಬಂದಿದೆ. ಝೀ ನ್ಯೂಸ್‌ ಮತ್ತು ಇಂಡಿಯಾ ಟುಡೇ ಸಂಸ್ಥೆಗಳು ನಿಖರವಾಗಿ ಅಂದರೆ 99ರಿಂದ 113 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಊಹಿಸಿತ್ತು. ಇನ್ನು ನ್ಯೂಸ್‌ ನೇಶನ್‌, ನ್ಯೂಸ್‌ 18, ನ್ಯೂಎಸ್‌ ಎಕ್ಸ್‌, ಟೈಮ್ಸ್‌ ನೌ ಸಮೀಕ್ಷೆಯ ಪ್ರಕಾರ 
ಸರಾಸರಿ 109 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಊಹಿಸಲಾಗಿತ್ತು. 

ಇನ್ನು ಕಾಂಗ್ರೆಸ್‌ ವಿಚಾರದಲ್ಲಿ ಮತದಾನೋತ್ತರ ಸಮೀಕ್ಷೆಯ ಭವಿಷ್ಯ ಸುಳ್ಳಾಗಿದೆ. ಯಾವ ಸಮೀಕ್ಷೆಗಳೂ ಕಾಂಗ್ರೆಸ್‌ಗೆ 75ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಿರಲಿಲ್ಲ. ಸರಾಸರಿ 70 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದಷ್ಟೇ ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next