ಗುವಾಹಟಿ: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಅಸ್ಸಾಂ ಕೋರ್ಟ್ ಶುಕ್ರವಾರ (ಏಪ್ರಿಲ್ 29) ಜಾಮೀನು ನೀಡಿದೆ.
ಇದನ್ನೂ ಓದಿ:ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ ಕುಮಾರಸ್ವಾಮಿ ಮಾತ್ರ: ನಿಖಿಲ್
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿರುವ ಪ್ರಕರಣದ ಕುರಿತು ಜಿಗ್ನೇಶ್ ಮೇವಾನಿಗೆ ಅಸ್ಸಾಂನ ಕೋರ್ಟ್ ವೊಂದು ಜಾಮೀನು ನೀಡಿದ್ದ ಬೆನ್ನಲ್ಲೇ ಮಹಿಳಾ ಪೊಲೀಸ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೇವಾನಿಯನ್ನು ಮತ್ತೆ ಬಂಧಿಸಿದ್ದ ಘಟನೆ ನಡೆದಿತ್ತು.
ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಜಿಗ್ನೇಶ್ ಮೇವಾನಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಅಸ್ಸಾಂನಲ್ಲಿ ಹೊಸ ಪ್ರಕರಣವೊಂದು ದಾಖಲಾಗಿತ್ತು. ಕಳೆದ ಗುರುವಾರ ಮೇವಾನಿ ವಿರುದ್ಧ ಅಸ್ಸಾಂನ ಕೋಕ್ರಾಜಾರ್ ನ ಬಿಜೆಪಿ ಸ್ಥಳೀಯ ಮುಖಂಡರೊಬ್ಬರು ದೂರು ನೀಡಿದ್ದ ನಂತರ ಅಸ್ಸಾಂ ಪೊಲೀಸರು ಮೇವಾನಿಯನ್ನು ಮೊದಲ ಪ್ರಕರಣದಲ್ಲಿ ಬಂಧಿಸಿದ್ದರು.
“ಇದು ಭಾರತೀಯ ಜನತಾ ಪಕ್ಷ ಮತ್ತು ಆರ್ ಎಸ್ ಎಸ್ ನನ್ನ ವಿರುದ್ಧ ಹೂಡಿರುವ ಸಂಚು. ಬಿಜೆಪಿ, ಆರ್ ಎಸ್ ಎಸ್ ಗೆ ನನ್ನ ತೇಜೋವಧೆ ಮಾಡಲು ಹೊರಟಿವೆ. ಅವರ ವ್ಯವಸ್ಥಿತವಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ರೋಹಿತ್ ವೇಮುಲಾಗೂ ಇದೇ ರೀತಿ ಮಾಡಿದ್ದರು, ಚಂದ್ರಶೇಖರ್ ಆಜಾದ್ ಕೂಡಾ ಹೀಗೆ ಮಾಡಿದ್ದು, ಇದೀಗ ನನ್ನನ್ನು ಟಾರ್ಗೆಟ್ ಮಾಡಿರುವುದಾಗಿ ಮೇವಾನಿ ಸುದ್ದಿಗಾರರ ಜತೆ ಮಾತನಾಡುತ್ತ ಆರೋಪಿಸಿದ್ದಾರೆ.