Advertisement
ಇಂದೋರ್‌ನ “ಹೋಳ್ಕರ್ ಸ್ಟೇಡಿಯಂ’ನಲ್ಲಿ ನಡೆದ 2016-17ನೇ ಋತುವಿನ ರಣಜಿ ಫೈನಲ್‌ನಲ್ಲಿ 312 ರನ್ನುಗಳ ಗೆಲುವಿನ ಗುರಿ ಪಡೆದ ಗುಜರಾತ್, ಅಂತಿಮ ದಿನವಾದ ಶನಿವಾರ 5 ವಿಕೆಟಿಗೆ 313 ರನ್ ಮಾಡಿ ಜಯಭೇರಿ ಮೊಳಗಿ ಸಿತು. ಇದರೊಂದಿಗೆ ಗುಜರಾತ್ ರಣಜಿ ಚಾಂಪಿಯನ್ ಎನಿಸಿಕೊಂಡ 17ನೇ ತಂಡವಾಗಿ ಮೂಡಿಬಂತು. ನಾಯಕ ಪಾರ್ಥಿವ್ ಪಟೇಲ್ 143 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಈ ಪಂದ್ಯ ಡ್ರಾಗೊಂಡರೂ ಗುಜರಾತ್ ಚಾಂಪಿ ಯನ್ ಆಗಿ ಮೂಡಿಬರುತ್ತಿತ್ತು. ಕಾರಣ, ಮೊದಲ ಇನ್ನಿಂಗ್ಸ್‌ನಲ್ಲಿ ಲಭಿಸಿದ ಭರ್ತಿ 100 ರನ್ನುಗಳ ಮುನ್ನಡೆ. ಆದರೆ ನಾಯಕ ಪಾರ್ಥಿವ್ ಪಟೇಲ್ ಕಪ್ತಾನನ ಆಟದ ಪ್ರಚಂಡ ಪ್ರದರ್ಶನ ನೀಡಿ ತಂಡಕ್ಕೆ ಸ್ಪಷ್ಟ ಗೆಲುವನ್ನು ತಂದಿತ್ತರು.
Related Articles
Advertisement
ಪಾರ್ಥಿವ್ ಪಟೇಲ್ ಮುಂಬಯಿ ವಿರುದ್ಧ ಬಾರಿಸಿದ 5ನೇ ಶತಕ ಇದಾಗಿದೆ. ಬೇರೆ ಯಾವ ತಂಡದ ವಿರುದ್ಧವೂ ಅವರು ಎರಡಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ. ಒಟ್ಟಾರೆಯಾಗಿ ಇದು ಪಾರ್ಥಿವ್ ಬಾರಿಸಿದ 25ನೇ ಪ್ರಥಮ ದರ್ಜೆ ಶತಕವೆಂಬುದು ಉಲ್ಲೇಖನೀಯ. ಪಾರ್ಥಿವ್ ಪಟೇಲ್ ಮೊದಲ ಸರದಿಯಲ್ಲೂ ಕ್ರೀಸ್ ಆಕ್ರಮಿಸಿಕೊಂಡು 90 ರನ್ ಕೊಡುಗೆ ಸಲ್ಲಿಸಿದ್ದನ್ನು ಮರೆಯುವಂತಿಲ್ಲ. ಒಟ್ಟು 6 ಕ್ಯಾಚ್, 2 ರನೌಟ್ ಮೂಲಕವೂ ಪಾರ್ಥಿವ್ ಪಟೇಲ್ ತಮ್ಮ ಕೈಚಳಕ ತೋರಿಸಿದ್ದರು. ವಿಜಯ್ ಹಜಾರೆಯಲ್ಲೂ ಮಿಂಚು
2015ರ ವಿಜಯ್ ಹಜಾರೆ ಟ್ರೋಫಿ ಏಕದಿನ ಫೈನಲ್‌ನಲ್ಲೂ ಶತಕ ಬಾರಿಸಿದ ಪಾರ್ಥಿವ್ ಪಟೇಲ್, ಗುಜರಾತ್‌ಗೆ ಮೊದಲ ಸಲ ಈ ಪ್ರಶಸ್ತಿ ತಂದಿತ್ತ ನಾಯಕನಾಗಿ ಮೆರೆದಿದ್ದರು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ 139 ರನ್ನುಗಳ ಅಂತರದಿಂದ ದಿಲ್ಲಿಯನ್ನು ಉರುಳಿಸಿತ್ತು. ಪಾರ್ಥಿವ್ ಕೊಡುಗೆ 105 ರನ್. ಇದೀಗ ರಣಜಿ ಟ್ರೋಫಿಯಲ್ಲೂ ಪಾರ್ಥಿವ್ ಅವರಿಂದ ಇತಿಹಾಸ ಪುನರಾವರ್ತನೆಗೊಂಡಿದೆ. ಇತ್ತೀಚೆಗೆ ಟೀಮ್ ಇಂಡಿಯಾಕ್ಕೆ ಮರಳಿ ಪ್ರವೇಶ ಪಡೆದ ಪಾರ್ಥಿವ್ ಪಾಲಿಗೆ ಇದು “ಕ್ರಿಕೆಟಿನ ಸುವರ್ಣ ಕಾಲ’ ಎನ್ನಲಡ್ಡಿಯಿಲ್ಲ! ಗುಜರಾತ್ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿದಲ್ಲಿಂದ ಅಂತಿಮ ದಿನದಾಟ ಮುಂದು ವರಿಸಿತ್ತು. ಆರಂಭಿಕರಾದ ಪ್ರಿಯಾಂಕ್ ಪಾಂಚಾಲ್ (34), ಸಮಿತ್ ಗೋಹೆಲ್ (21), ವನ್‌ಡೌನ್ ಆಟಗಾರ ಭಾರ್ಗವ್ ಮಿರಾಯ್ (2) 89 ರನ್ ಆಗುವಷ್ಟರಲ್ಲಿ ನಿರ್ಗಮಿಸಿದಾಗ ಗುಜರಾತ್ ಆತಂಕಕ್ಕೆ ಸಿಲುಕಿತ್ತು. ಆದರೆ ಪಾರ್ಥಿವ್ ಪಟೇಲ್ ಪಟ್ಟು ಸಡಿಲಿಸಲಿಲ್ಲ. ಅವರಿಗೆ ಮನ್‌ಪ್ರೀತ್ ಜುನೇಜ (54) ಉತ್ತಮ ಬೆಂಬಲ ನೀಡಿದರು. ಇವರಿಂದ 4ನೇ ವಿಕೆಟಿಗೆ 116 ರನ್ ಒಟ್ಟುಗೂಡಿತು. ಬಳಿಕ ರುಜುಲ್ ಭಟ್ (ಔಟಾಗದೆ 27) ಜವಾಬ್ದಾರಿ ಹೊತ್ತುಕೊಂಡರು. ಪಟೇಲ್-ಭಟ್ ಜತೆಯಾಟದಲ್ಲಿ 94 ರನ್ ಸಂಗ್ರಹಗೊಂಡಿತು. ರಣಜಿ ಫೈನಲ್ ಚೇಸಿಂಗ್ ದಾಖಲೆ
ಗುಜರಾತ್ 312 ರನ್ ಬೆನ್ನಟ್ಟಿ ಗೆದ್ದದ್ದು ರಣಜಿ ಇತಿಹಾಸದ ನೂತನ ಚೇಸಿಂಗ್ ದಾಖಲೆ ಎನಿಸಿಕೊಂಡಿದೆ. ಇದಕ್ಕೂ ಹಿಂದಿನ ದಾಖಲೆ 310 ರನ್ ಆಗಿತ್ತು. 1937-38ರಷ್ಟು ಹಿಂದೆ ನವಾ ನಗರ್ ತಂಡದ ವಿರುದ್ಧ ಹೈದರಾಬಾದ್ ಈ ಸಾಧನೆ ಮಾಡಿತ್ತು. ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ಗೆಲುವಿನ ಅಂತರ ಕೇವಲ ಒಂದು ವಿಕೆಟ್ ಎಂಬುದನ್ನು ಮರೆಯುವಂತಿಲ್ಲ.
ಸಂಕ್ಷಿಪ್ತ ಸ್ಕೋರ್
ಮುಂಬಯಿ-228 ಮತ್ತು 411. ಗುಜರಾತ್-328 ಮತ್ತು 5 ವಿಕೆಟಿಗೆ 313 (ಪಾರ್ಥಿವ್ ಪಟೇಲ್ 143, ಮನ್‌ಪ್ರೀತ್ ಜುನೇಜ 54, ಪ್ರಿಯಾಂಕ್ ಪಾಂಚಾಲ್ 34, ರುಜುಲ್ ಭಟ್ ಔಟಾಗದೆ 27, ಸಮಿತ್ ಗೋಹೆಲ್ 21, ಬಲ್ವಿಂದರ್ ಸಂಧು 101ಕ್ಕೆ 2). ಪಂದ್ಯಶ್ರೇಷ್ಠ: ಪಾರ್ಥಿವ್ ಪಟೇಲ್.