ಮೊರ್ಬಿ: 141 ಜನರ ಸಾವಿಗೆ ಕಾರಣವಾದ ಬೃಹತ್ ಸೇತುವೆ ಕುಸಿತದ ದುರಂತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಮೊರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಪಿಎಂ ಮೋದಿ ಭೇಟಿ ನಿಗದಿಯಾದ ಬಳಿ ಆಸ್ಪತ್ರೆಯಲ್ಲಿ ರಾತ್ರಿಯಿಡೀ ಭಾರಿ ದುರಸ್ತಿ ಕೆಲಸಗಳು ನಡೆಯುತ್ತಿದ್ದು, ಇದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಮಚ್ಚು ನದಿಗೆ ಅಡ್ಡಲಾಗಿರುವ ಕೇಬಲ್ ತೂಗು ಸೇತುವೆ ರವಿವಾರ ಸಂಜೆ ಕುಸಿದು ಬಿದ್ದಿತ್ತು. ಘಟನೆಯಲ್ಲಿ ನಿಧನರಾದವರಲ್ಲಿ ಮಕ್ಕಳು ಮತ್ತು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 100 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಹಲವರು ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಮೊರ್ಬಿ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಲಿದ್ದಾರೆ. ಇದಕ್ಕಾಗಿ ರಾತ್ರಿಯ ವೇಳೆ ಆಸ್ಪತ್ರೆಯಲ್ಲಿ ಸಿದ್ದತೆ ಮಾಡಲಾಗಿದ್ದು, ಗೋಡೆಗಳು ಮತ್ತು ಚಾವಣಿಯ ಭಾಗಗಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ. ಹೊಸ ವಾಟರ್ ಕೂಲರ್ ಗಳನ್ನು ತರಲಾಯಿತು. ಸೇತುವೆ ದುರಂತದಲ್ಲಿ ಗಾಯಗೊಂಡ ಸುಮಾರು 13 ಮಂದಿ ದಾಖಲಾಗಿರುವ ಎರಡು ವಾರ್ಡ್ ಗಳಲ್ಲಿನ ಬೆಡ್ ಶೀಟ್ ಗಳನ್ನು ಸಹ ಬದಲಾಯಿಸಲಾಯಿತು ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಎಂಟು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
ಈ ಆಸ್ಪತ್ರೆ ನವೀಕರಣವು ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ಗುರಿಯಾಗಿದೆ. ಬಿಜೆಪಿಯು ಪ್ರಧಾನಿಯವರ ಫೋಟೋಶೂಟ್’ ಗಾಗಿ ‘ಈವೆಂಟ್ ಮ್ಯಾನೇಜ್‌ಮೆಂಟ್’ ನಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಆರೋಪಿಸಿವೆ.
ಇದನ್ನು ‘ದುರಂತ ಘಟನೆ’ ಎಂದು ಬಣ್ಣಿಸಿರುವ ಕಾಂಗ್ರೆಸ್ ಹಿಂದಿಯಲ್ಲಿ ತನ್ನ ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದೆ. “ನಾಳೆ, ಪ್ರಧಾನಿ ಮೋದಿ ಮೊರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಆದರೆ ಅದಕ್ಕೂ ಮುನ್ನ ಪೇಂಟಿಂಗ್ ನಡೆಯುತ್ತಿದೆ, ಹೊಳೆಯುವ ಟೈಲ್ಸ್ ಹಾಕಲಾಗುತ್ತಿದೆ. ಪ್ರಧಾನಿಯವರ ಫೋಟೋಗಳು ಚೆನ್ನಾಗಿ ಬರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇವರುಗಳಿಗೆ ನಾಚಿಕೆಯೂ ಆಗುವುದಿಲ್ಲ, ಅಲ್ಲಿ ಅನೇಕ ಜನರು ಸತ್ತಿದ್ದಾರೆ, ಆದರೆ ಇವರಿಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ ನಲ್ಲಿ ನಿರತರಾಗಿದ್ದಾರೆ ಎಂದು ಟೀಕೆ ಮಾಡಿದೆ.